ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ನಗರ ಪೊಲೀಸರಿಗೆ ಎರಡು ಸ್ಕಾರ್ಪಿಯೋ ವಾಹನಗಳನ್ನು ಕೊಡುಗೆಯಾಗಿ ನೀಡಿದೆ.ಇಲ್ಲಿನ ಬ್ಯಾಂಕ್ ಆವರಣದಲ್ಲಿ ಶನಿವಾರ ನೂತನ ಎರಡು ಸ್ಕಾರ್ಪಿಯೋ ವಾಹನಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಹಸ್ತಾಂತರಿಸಿದರು.ಪರಿಣಾಮಕಾರಿ ಪೊಲೀಸಿಂಗ್: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಪರಿಣಾಮಕಾರಿ ಪೊಲೀಸಿಂಗ್ ನಡೆಸುವುದಕ್ಕಾಗಿ ಸಮರ್ಪಕ ವಾಹನಗಳ ಅವಶ್ಯಕತೆಯ ಬಗ್ಗೆ ಡಾ.ಎಂಎನ್ ರಾಜೇಂದ್ರ ಕುಮಾರ್ ಅವರಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಮಾತನಾಡಿದ್ದೆ. ಅವರು ಕೇವಲ 25 ದಿನದೊಳಗಾಗಿ ಈ ವಾಹನಗಳನ್ನು ಒದಗಿಸಿಕೊಡುವ ಮೂಲಕ ಜನರಿಗೆ ಸೇವೆ ಒದಗಿಸುವಲ್ಲಿ ನೆರವಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಕ್ಷಿಪ್ರ ಸ್ಪಂದನಕ್ಕೆ ಅನುಕೂಲ: ಪ್ರಸ್ತುತ ಕಂಟ್ರೋಲ್ ರೂಮ್‌ಗೆ ಬರುವ ನಾಗರಿಕರ ಕರೆಗೆ ಸ್ಪಂದಿಸುವುದಕ್ಕೆ ನಗರ ಭಾಗದಲ್ಲಿ ಆರೇಳು ನಿಮಿಷ ಹಾಗೂ ಗ್ರಾಮಾಂತರ ಭಾಗದಲ್ಲಿ 15 ನಿಮಿಷ ತಗಲುತ್ತದೆ. ಸದ್ಯಕ್ಕೆ 21 ವಾಹನಗಳನ್ನು ಇಆರ್‌ಎಸ್‌ಎಸ್ ವ್ಯವಸ್ಥೆಗೆ ಇರಿಸಲಾಗಿದೆ. ಪೊಲೀಸಿಂಗ್ ವ್ಯವಸ್ಥೆಯಲ್ಲಿ ಹಿಂದೆ ವೇಗವಾಗಿ ಸಂಚರಿಸುವ ವಾಹನಗಳ ಕೊರತೆ ಇತ್ತು, ಈಗ ಸಾಕಷ್ಟು ಸುಧಾರಿಸಿದೆ. ಈಗ ಸ್ಕಾರ್ಪಿಯೊ ವಾಹನಗಳನ್ನು ಒದಗಿಸುವ ಮೂಲಕ ಸಾರ್ವಜನಿಕರ ಸೇವೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ನಬಾರ್ಡ್ ಎಜಿಎಂ ಸಂಗೀತ ಕರ್ತ, ಡಿಸಿಪಿಗಳಾದ ಮಿಥುನ್, ರವಿಶಂಕರ್, ಉಮೇಶ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಂ.ವಾದಿರಾಜ ಶೆಟ್ಟಿ, ಎಸ್.ಬಿ.ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮತ್ತಿತರರಿದ್ದರು.ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು.----ದೇಶಕ್ಕೇ ಎಸ್‌ಸಿಡಿಸಿಸಿ ಬ್ಯಾಂಕ್ ಮಾದರಿ: ಡಾ.ಸುರೇಂದ್ರ ಬಾಬುರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇದರ ಮುಖ್ಯ ಮಹಾಪ್ರಬಂಧಕ ಡಾ.ಸುರೇಂದ್ರ ಬಾಬು ಮಾತನಾಡಿ, ದೇಶದಲ್ಲೇ 351 ಡಿಸಿಸಿ ಬ್ಯಾಂಕ್‌ಗಳಿವೆ, ಆದರೆ ಎಲ್ಲಿಯೂ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನಷ್ಟು ವಿಶಿಷ್ಟ ಬ್ಯಾಂಕ್ ಬೇರೆ ಇಲ್ಲ. ವಿಭಿನ್ನ ಆಲೋಚನೆ ಹಾಗೂ ಎಲ್ಲರ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಪೊಲೀಸರಿಗೆ ನಮ್ಮೆಲ್ಲರ ಸಹಕಾರ: ಡಾ.ಎಂ.ಎನ್.ಆರ್.
ಸಮಾರಂಭದ ಅಧ್ಯಕ್ಷತೆ ವಹಿಸಿದ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಹಕಾರಿ ಬ್ಯಾಂಕುಗಳು ಜನರೊಂದಿಗೆ ಬೆರೆತು, ಅವರಿಗೆ ಬೇಕಾದ ಸವಲತ್ತುಗಳನ್ನು ನೀಡಿ ಜನರ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ. ದೇಶ ಕಾಯುವುದಕ್ಕೆ ಮಿಲಿಟರಿಯವರ ಕೊಡುಗೆ ಇದೆ. ಸಮಾಜದಲ್ಲಿ ನಮ್ಮ ಸುರಕ್ಷತೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ಹಾಗಾಗಿ ಪೊಲೀಸರಿಗೆ ನಮ್ಮೆಲ್ಲರ ಸಹಕಾರ ನೀಡಲೇಬೇಕು ಎಂದರು.ಕಳೆದ ಮೇ 10ಕ್ಕೆ ನಡೆದ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್ ರಜತ ಸಂಭ್ರಮ ಸಮಾವೇಶದಲ್ಲಿ ಸಹಸ್ರಾರು ಮಹಿಳೆಯರು ಪಾಲ್ಗೊಂಡಿದ್ದರು. ಆಗ ಪೊಲೀಸ್ ಇಲಾಖೆ ನೀಡಿರುವ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪೊಲೀಸರು ರಜೆ, ವಿಶ್ರಾಂತಿ ಇಲ್ಲದೆ ಸಮಾಜದ ಸುರಕ್ಷತೆ ಕಾಪಾಡುತ್ತಾರೆ. ಮುಂದೆಯೂ ಎಸ್‌ಸಿಡಿಸಿಸಿ ಬ್ಯಾಂಕ್ ಪೊಲೀಸರಿಗೆ ಬೇಕಾದ ನೆರವು ನೀಡುವುದಕ್ಕೆ ಸಿದ್ಧವಿದೆ ಎಂದು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.