ಎಸ್‌ಸಿಡಿಸಿಸಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ ೧೧೦.೪೧ ಕೋಟಿ ರು. ಲಾಭ

| Published : Aug 31 2025, 02:00 AM IST

ಎಸ್‌ಸಿಡಿಸಿಸಿ ಬ್ಯಾಂಕ್ ಸಾರ್ವಕಾಲಿಕ ಗರಿಷ್ಠ ೧೧೦.೪೧ ಕೋಟಿ ರು. ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಕ್ಷೇತ್ರಕ್ಕೆ ಆದರ್ಶವಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ೨೦೨೪-೨೫ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ ೧೧೦.೪೧ ಕೋಟಿ ರು. ಲಾಭ ಗಳಿಸಿದ್ದು, ತನ್ನ ಸದಸ್ಯ ಸಂಘಗಳಿಗೆ ಶೇ.೧೦ ಡಿವಿಡೆಂಡ್‌ನ್ನು ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಮಂಗಳೂರು: ಸಹಕಾರ ಕ್ಷೇತ್ರಕ್ಕೆ ಆದರ್ಶವಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ೨೦೨೪-೨೫ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ ೧೧೦.೪೧ ಕೋಟಿ ರು. ಲಾಭ ಗಳಿಸಿದ್ದು, ತನ್ನ ಸದಸ್ಯ ಸಂಘಗಳಿಗೆ ಶೇ.೧೦ ಡಿವಿಡೆಂಡ್‌ನ್ನು ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಅವರು ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

ಬ್ಯಾಂಕಿನ ಸಭಾಭವನದಲ್ಲಿ ಶನಿವಾರ ನಡೆದ ೧೧೧ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸತನದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಳವಡಿಸಿ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ಬ್ಯಾಂಕ್ ನೀಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇಂಟರ್‌ನೆಟ್, ಕೋರ್ ಬ್ಯಾಂಕಿಂಗ್‌ನಂತಹ ಉನ್ನತ ಸೇವೆಯು ಬ್ಯಾಂಕಿನ ೧೧೩ ಶಾಖೆಗಳಲ್ಲಿ ದೊರೆಯುತ್ತಿದೆ. ಮೊಬೈಲ್ ಆ್ಯಪ್, ಟ್ಯಾಬ್ ಬ್ಯಾಂಕಿಂಗ್‌ನಂತಹ ವಿನೂತನ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ “ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್” ಹಾಗೂ “ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ)” ಸೇವೆಯನ್ನು ರೂಪಿಸಲು ಬ್ಯಾಂಕ್ ಮುಂದಾಗಿದೆ. ವರದಿ ವರ್ಷದಲ್ಲಿ ೧೦ ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಬ್ಯಾಂಕ್ ಹಮ್ಮಿಕೊಂಡಿದೆ ಎಂದು ಡಾ.ಎಂ.ಎನ್‌.ಆರ್‌. ತಿಳಿಸಿದರು.

ಗುರಿ ಮೀರಿದ ಸಾಧನೆ:

ಸುದೀರ್ಘ ಕಾಲ ಸಾರ್ವಜನಿಕ ಸೇವೆಯಲ್ಲಿರುವ ಎಸ್‌ಸಿಡಿಸಿಸಿ ಬ್ಯಾಂಕ್ ವರದಿ ವರ್ಷದಲ್ಲಿ ಎಲ್ಲ ವ್ಯವಹಾರಗಳಲ್ಲೂ ಗುರಿ ಮೀರಿದ ಸಾಧನೆ ಮಾಡಿದೆ. ವರದಿ ವರ್ಷದಲ್ಲಿ ಒಟ್ಟು ೧೭೩೬೬.೬೮ ಕೋಟಿ ರು. ವ್ಯವಹಾರ ಸಾಧಿಸುವ ಮೂಲಕ ಗುರಿ ಮೀರಿದ ಸಾಧನೆಗೈದಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಾತಿ ಸಂಗ್ರಹಣೆಯಲ್ಲಿ ಪೈಪೋಟಿ ಇದ್ದರೂ ಬ್ಯಾಂಕ್ ೧೧೩ ಶಾಖೆಗಳ ಮೂಲಕ ಒಟ್ಟು ೭೮೮೨.೭೬ ಕೋಟಿ ರು. ಠೇವಣಿ ಸಂಗ್ರಹಿಸಿ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ ಎಂದರು.

ಸ್ಪರ್ಧಾತ್ಮಕ ಆರ್ಥಿಕ ಹಿನ್ನೆಲೆಯಲ್ಲಿಯೂ ಬ್ಯಾಂಕ್ ಆರ್ಥಿಕ ವರ್ಷದಲ್ಲಿ ಸೇವಾ ಬದ್ಧತೆಯನ್ನು ಮೆರೆದು ೭೭೭೫.೪೪ ಕೋಟಿ ರು. ಮುಂಗಡ ನೀಡಿದೆ. ೧೦೮೬ ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು, ಪಾಲು ಬಂಡವಾಳ ೪೭೬.೦೦ ಕೋಟಿ ರು., ಬ್ಯಾಂಕಿನ ದುಡಿಯುವ ಬಂಡವಾಳ ೧೨೭೬೪.೯೯ ಕೋಟಿ ರು., ಬ್ಯಾಂಕ್ ೨೬೯.೪೫ ಕೋಟಿ ರು. ವಿವಿಧ ನಿಧಿಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು.

ಕೃಷಿ ಸಾಲ ಮರುಪಾವತಿಯಲ್ಲಿ ರಾಷ್ಟ್ರೀಯ ದಾಖಲೆ:

ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲ ಕೃಷಿ ಸಾಲಗಳು ಶೇ. 100 ಮರುಪಾವತಿ ಕಂಡಿದೆ. ಇಂತಹ ಸಾಧನೆಯನ್ನು ಬ್ಯಾಂಕ್ ಕಳೆದ ೩೦ ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆ. ವರದಿ ವರ್ಷದಲ್ಲಿ ಕೃಷಿಕರು ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲೂ ಕೃಷಿ ಸಾಲವನ್ನು ಮರುಪಾವತಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ೧೭ ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇ. 100ರ ಸಾಧನೆ ಮಾಡಿದೆ ಎಂದು ಮಹಾಸಭೆಯಲ್ಲಿ ಅವರು ತಿಳಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಸಹಾಯ ಗುಂಪುಗಳ ಸಂಘಟನೆಯಲ್ಲೂ ಬ್ಯಾಂಕ್ ಮುಂಚೂಣಿಯಲ್ಲಿದೆ. ಈ ಬ್ಯಾಂಕ್ ಒಟ್ಟು ೩೪,೬೨೧ ಸ್ವಸಹಾಯ ಗುಂಪುಗಳನ್ನು ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ ೧೭೪.೩೧ ಕೋಟಿ ರು., ಒಟ್ಟು ೩೪,೬೧೩ ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, ಇದರಲ್ಲಿ ೪೯೭.೩೬ ಕೋಟಿ ರು. ಸಾಲ ಹೊರಬಾಕಿ ಇರುತ್ತದೆ.

ಅಪೆಕ್ಸ್/ನಬಾರ್ಡ್ ಪ್ರಶಸ್ತಿ:

ಜನಪರ ಯೋಜನೆಗಳೊಂದಿಗೆ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೇಶದ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸರ್ವಾಂಗೀಣ ನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ೨೩ ಬಾರಿ ದೊರೆತಿರುವುದು ಬ್ಯಾಂಕ್‌ನ ಕಾರ್ಯಸಾಧನೆಗೆ ಸಂದ ಪುರಸ್ಕಾರ. ಸ್ವಸಹಾಯ ಗುಂಪುಗಳ ನಿರ್ವಹಣೆಗೂ ನಬಾರ್ಡ್ ಪ್ರಶಸ್ತಿ ೧೯ ಬಾರಿ ಬ್ಯಾಂಕಿಗೆ ದೊರೆತಿದೆ. ವರದಿ ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಬ್ಯಾಂಕಿಗೆ “ಎಪಿವೈ ರಾಷ್ಟ್ರೀಯ ಪ್ರಶಸ್ತಿ” ನಾಲ್ಕನೇ ಬಾರಿ ಬಂದಿದೆ ಎಂದು ಡಾ.ರಾಜೇಂದ್ರ ಕುಮಾರ್‌ ತಿಳಿಸಿದರು.

ಪ್ರಶಸ್ತಿ ಪುರಸ್ಕಾರ:

ಈ ಸಂದರ್ಭದಲ್ಲಿ ೨೦೨೪-೨೫ನೇ ಸಾಲಿನಲ್ಲಿ ಶೇ.೧೦೦ರ ವಸೂಲಾತಿಯಲ್ಲಿ ಸಾಧನೆಗೈದ ೧೭ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಮಾಡಲಾಯಿತು. ಲೆಕ್ಕ ಪರಿಶೋಧನಾ “ಅ” ವರ್ಗದ ೪ ಮತ್ತು “ಬಿ” ವರ್ಗದ ೩ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ೨೦೨೪-೨೫ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

೨೦೨೪-೨೫ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ೧೩೭ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಪಡೆದಿವೆ. ೨೦೨೩-೨೪ನೇ ಸಾಲಿನ ಅಪೆಕ್ಸ್ ಬ್ಯಾಂಕಿನ ಪ್ರಶಸ್ತಿಯನ್ನು ೧೦ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಡೆದಿವೆ. ೨೦೨೪-೨೫ನೇ ಸಾಲಿನ ಪತ್ತಿನ ಸಹಕಾರಿ ಸಂಘ ಪ್ರಶಸ್ತಿಯನ್ನು ೧೪ ಪತ್ತಿನ ಸಹಕಾರಿ ಸಂಘಗಳಿಗೆ ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ನೀಡುವ ಪ್ರಶಸ್ತಿಯನ್ನು ೪ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಪ್ರಶಸ್ತಿಗೆ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ತಲಾ ೩ ಸಂಘಗಳು ಪ್ರಶಸ್ತಿ ಪಡೆದಿವೆ. ಉಭಯ ಜಿಲ್ಲೆಯ ೮ ಟಿಎಪಿಸಿಎಂಎಸ್‌ಗಳಿಗೆ ಪ್ರಶಸ್ತಿ, ಮಹಿಳಾ ಹಾಲು ಉತ್ಪಾದಕರ ಸಂಘಗಳ ಪೈಕಿ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಿಂದ ತಲಾ ೨ ಸಂಘಗಳಿಗೆ ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳಿಗೆ ನೀಡುವ ಪ್ರಶಸ್ತಿಯನ್ನು ೩೩ ಸಹಕಾರಿ ಸಂಘಗಳು ಸ್ವೀಕರಿಸಿವೆ.

ವರದಿ ವರ್ಷದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ೧೦ ಸಿಬ್ಬಂದಿ ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ ೧೦ ಮಂದಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ನಿವೃತ್ತಿ ಹೊಂದಿದ್ದು, ಇವರಿಗೆ ಬ್ಯಾಂಕಿನಿಂದ ತಲಾ ೫೦,೦೦೦ ರು. ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಿ., ಎಸ್.ಬಿ. ಜಯರಾಮ ರೈ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಎಂ.ಮಹೇಶ್ ಹೆಗ್ಡೆ, ಬಿ. ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ, ಕುಶಾಲಪ್ಪ ಗೌಡ ಪಿ., ಎಸ್. ಎನ್. ಮನ್ಮಥ, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಉಭಯ ಜಿಲ್ಲೆಗಳ ಸಹಕಾರಿ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ಲಾವಣ್ಯ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಇದ್ದರು.

ಬ್ಯಾಂಕಿನ ನಿರ್ದೇಶಕ ಟಿ.ಜಿ. ರಾಜಾರಾಮ್ ಭಟ್ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ನಿರೂಪಿಸಿ, ವಂದಿಸಿದರು.