ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 110 ವರ್ಷಗಳ ಇತಿಹಾಸ ಹೊಂದಿದ್ದು, ಪ್ರಸ್ತುತ 113 ಶಾಖೆಗಳ ಮೂಲಕ ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸುವ ಮೂಲಕ ವಾಣಿಜ್ಯ ಬ್ಯಾಂಕ್‌ಗಳಿಗೆ ಪೈಪೋಟಿ ನೀಡುತ್ತಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಹೇಳಿದರು.ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೋಡಿಕಲ್ ಸ್ಥಳಾಂತರಿತ ಶಾಖೆಯನ್ನು ನಗರದ ಉರ್ವ ಮಾರಿಗುಡಿ ರಸ್ತೆಯಲ್ಲಿರುವ ‘ಶ್ರೀನಿಧಿ ರಾಮದೇವ್ ರೆಸಿಡೆನ್ಸಿ’ ಕಟ್ಟಡದ ನೆಲ ಅಂತಸ್ತಿನಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಬ್ಯಾಂಕ್‌ನಿಂದ ಕೃಷಿಕರು ಪಡೆದ ಸಾಲ ಕಳೆದ 28 ವರ್ಷಗಳಿಂದ ಶೇ.100 ರಷ್ಟು ಮರುಪಾವತಿ ಆಗುತ್ತಿದೆ. ಗ್ರಾಮಾಂತರ ಪ್ರದೇಶದ ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ನವೋದಯ ಸ್ವಸಹಾಯ ಸಂಘಗಳ ಮೂಲಕ ಸಾಲದ ವ್ಯವಸ್ಥೆ ಮಾಡಿದ್ದು, ಶೇ.99. 50 ರಷ್ಟು ಮರುಪಾವತಿ ಆಗುತ್ತಿದೆ. ಜಿಲ್ಲೆಯಲ್ಲಿ ಸಾಲ ದೊರೆಯದ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇಲ್ಲ ಎಂದರು.2011ರಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ 55ನೇ ಶಾಖೆಯಾಗಿ ಕೋಡಿಕಲ್ ಶಾಖೆ ಆರಂಭಗೊಂಡಿತ್ತು. ಜನರ ಅನುಕೂಲಕ್ಕಾಗಿ ಇದೀಗ ಬ್ಯಾಂಕ್ ಶಾಖೆಯನ್ನು ಸ್ಥಳಾಂತರಗೊಳಿಸಲಾಗಿದೆ. ಕೋಡಿಕಲ್ ಶಾಖೆಯಲ್ಲಿ 49 ಕೋಟಿ ರು. ಠೇವಣಾತಿ ಇದ್ದು, 92 ಕೋಟಿ ರು. ಸಾಲ ನೀಡಲಾಗಿದೆ. ನೂತನ ಸ್ಥಳಾಂತರಿತ ಶಾಖೆಯಲ್ಲಿ ಹೊಸ 16 ನವೋದಯ ಸ್ವಸಹಾಯ ಸಂಘಗಳ ರಚನೆಯಾಗಿದೆ ಎಂದು ಡಾ. ಎಂಎನ್‌ಆರ್ ತಿಳಿಸಿದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಬಹಳ ದೊಡ್ಡ ಸಾಧನೆ ಮಾಡಿದೆ. ದೇಶದ ಬೇರೆ ಭಾಗಕ್ಕೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮಾತ್ರ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ನೆರವು ನೀಡುತ್ತಿದ್ದಾರೆ. ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ದಕ್ಷ ಮಾರ್ಗದರ್ಶನದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಹಕಾರ ಬ್ಯಾಂಕಿಂಗ್ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಜನರಿಂದ ಪ್ರಶಂಸೆಗೊಳಗಾಗಿದೆ ಎಂದರು.
ಸ್ಥಳೀಯ ಕಾರ್ಪೋರೇಟರ್ ಗಣೇಶ್ ಕುಲಾಲ್ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೋಡಿಕಲ್ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಸ್ಥಳಾಂತರಗೊಂಡಿದೆ. ಜನರು ಇದರ ಸದುಪಯೋಗಪಡೆದುಕೊಂಡು ಬ್ಯಾಂಕ್‌ಗೆ ಸಹಕಾರ ನೀಡಬೇಕು ಎಂದರು.ಶಾಖಾ ಕಟ್ಟಡದ ಮಾಲೀಕ ಶಿವಪ್ರಸಾದ್ ಕಟ್ಟ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೌಲಭ್ಯ ಒದಗಿಸಿ, ಕಾರ್ಯಾಚರಿಸುತ್ತಿದೆ. ಸ್ಥಳಾಂತರಿತ ಶಾಖೆಯ ಸುತ್ತಲಿನ ಜನರು ಇಲ್ಲಿ ವ್ಯವಹಾರ ನಡೆಸುವ ಮೂಲಕ ಬ್ಯಾಂಕ್‌ನ್ನು ಬೆಳೆಸಬೇಕು ಎಂದರು.ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಬ್ಯಾಂಕ್ ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಿ., ಎಸ್. ಬಿ. ಜಯರಾಮ ರೈ, ದೇವಿಪ್ರಸಾದ್ ಶೆಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಕೆ. ಜೈರಾಜ್ ಬಿ.ರೈ, ಅಶೋಕ್ ಕುಮಾರ್ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಇದ್ದರು.
ಶಶಿರಾಜ್ ಕಾವೂರು ನಿರೂಪಿಸಿದರು.