ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಒಳ ಮೀಸಲಾತಿ ವರ್ಗೀಕರಣ ಮಾಡಲು ನೆರವಾಗಲಿದೆ.

ಕಾರವಾರ: ಮೇ 5ರಿಂದ 17ರವರೆಗೆ ನಡೆಯುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ಕಾರ್ಯದಲ್ಲಿ ಜಿಲ್ಲೆಯ ಗಣತಿದಾರರು ಅತ್ಯಂತ ಜವಾಬ್ದಾರಿಯಿಂದ ಹಾಗೂ ಎಚ್ಚರಿಕೆಯಿಂದ ಗಣತಿ ಕಾರ್ಯವನ್ನು ನಿರ್ವಹಿಸಿ, ಸಮೀಕ್ಷೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿಖರ ಅಂಕಿ-ಅಂಶಗಳನ್ನು ದಾಖಲು ಮಾಡುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ನಿರ್ದೇಶನ ನೀಡಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ತರಬೇತುದಾರಿಗೆ ನಡೆದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ರಾಜ್ಯದ ಪ್ರತಿಯೊಂದು ಪರಿಶಿಷ್ಟ ಜಾತಿ ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು, ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಒಳ ಮೀಸಲಾತಿ ವರ್ಗೀಕರಣ ಮಾಡಲು ನೆರವಾಗಲಿದೆ. ಇದು ಪರಿಶಿಷ್ಟ ಜಾತಿಗಳ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕ ಮತ್ತು ವಾಸ್ತವ ಮಾಹಿತಿ ಸಂಗ್ರಹಿಸುವ ಅತ್ಯಂತ ಪ್ರಮುಖ ಕಾರ್ಯವಾಗಿದೆ. ಗಣತಿದಾರರು ಕೈಪಿಡಿಯಲ್ಲಿ ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸುವಂತೆ ತಿಳಿಸಿದರು.

ಗಣತಿದಾರರು ಸಮೀಕ್ಷೆಗೆ ತೆರಳುವಾಗ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವಂತೆ ಮತ್ತು ಭೇಟಿಯ ವೇಳೆ ಕುಟುಂಬಸ್ಥರಿಗೆ ತಮ್ಮ ಪರಿಚಯ ಮತ್ತು ಭೇಟಿಯ ಉದ್ದೇಶವನ್ನು ತಿಳಿಸಿ, ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಮಾಹಿತಿಯನ್ನು ಸಂಗ್ರಹಿಸಬೇಕು. ತಮಗೆ ನಿಗದಿಪಡಿಸಿರುವ ಬ್ಲಾಕ್‌ಗಳಲ್ಲಿ ಯಾವುದೇ ಕುಟುಂಬ ಸಮೀಕ್ಷೆಯಿಂದ ತಪ್ಪಿ ಹೋಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಸಮೀಕ್ಷಾ ಕಾರ್ಯಕ್ಕಾಗಿ ನೀಡಿರುವ ಕೋಡ್‌ಗಳನ್ನು ಸರಿಯಾಗಿ ತಿಳಿದುಕೊಂಡು ಅವುಗಳನ್ನು ಮೊಬೈಲ್ ಆಪ್‌ನಲ್ಲಿ ದಾಖಲಿಸಬೇಕು. ಯಾವುದೇ ಕುಟುಂಬ ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಯಲ್ಲಿ ಒಳಪಡದಂತೆ ಎಚ್ಚರವಹಿಸಬೇಕು. ಸಮೀಕ್ಷೆ ಸಂದರ್ಭದಲ್ಲಿ ಸಮಸ್ಯೆಗಳು ಕಂಡು ಬಂದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.

ಯಾವುದೇ ಸಮೀಕ್ಷೆಗಳಿಂದ ಸಂಗ್ರಹಿಸುವ ದತ್ತಾಂಶದ ಮಾಹಿತಿಯು ಸರ್ಕಾರವು ವಿವಿಧ ಯಶಸ್ವಿ ಜನಪರ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಅತ್ಯಂತ ಮಹತ್ವವಾಗಿರುವುದರಿಂದ, ಗಣತಿದಾರರು ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷ್ಯತನ ವಹಿಸದೇ, ಅತ್ಯಂತ ಜವಾಬ್ದಾರಿಯುತವಾಗಿ ತಮಗೆ ವಹಿಸಲಾದ ಕರ್ತವ್ಯವನ್ನು ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ.ಕೆ. ಉಮೇಶ್ ಹಾಗೂ ಜಿಲ್ಲೆಯ ಮಾಸ್ಟರ್ ಟ್ರೇನರ್‌ಗಳು ಮತ್ತು ತರಬೇತುದಾರರು ಇದ್ದರು.