ಬನ್ನೂರಿನ ಮಾಜಿ ಶಾಸಕ ಕೆ.ಎಂ.ಚಿಕ್ಕಮಾದನಾಯಕ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಎಸ್‌ಟಿ ಜನಾಂಗಕ್ಕೆ ಮೀಸಲಾತಿ ಇಲ್ಲದೇ ಇದ್ದ ಸಂದರ್ಭದಲ್ಲಿಯೂ ಎರಡು ಬಾರಿ ಬನ್ನೂರು ಕ್ಷೇತ್ರದಿಂದ ಗೆದ್ದಿದ್ದ ಹೆಗ್ಗಳಿಕೆ ಅವರದು. ಈಗ ರಾಜ್ಯದಲ್ಲಿ ಪ.ಪಂಗಡಕ್ಕೆ 15 ವಿಧಾನಸಭಾ ಕ್ಷೇತ್ರಗಳು ಮೀಸಲಾಗಿವೆ. ಆದರೆ, 2008 ರವರೆಗೆ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಮೀಸಲು ಕ್ಷೇತ್ರಗಳಿರಲಿಲ್ಲ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಬನ್ನೂರಿನ ಮಾಜಿ ಶಾಸಕ ಕೆ.ಎಂ.ಚಿಕ್ಕಮಾದನಾಯಕ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಎಸ್‌ಟಿ ಜನಾಂಗಕ್ಕೆ ಮೀಸಲಾತಿ ಇಲ್ಲದೇ ಇದ್ದ ಸಂದರ್ಭದಲ್ಲಿಯೂ ಎರಡು ಬಾರಿ ಬನ್ನೂರು ಕ್ಷೇತ್ರದಿಂದ ಗೆದ್ದಿದ್ದ ಹೆಗ್ಗಳಿಕೆ ಅವರದು.

ಈಗ ರಾಜ್ಯದಲ್ಲಿ ಪ.ಪಂಗಡಕ್ಕೆ 15 ವಿಧಾನಸಭಾ ಕ್ಷೇತ್ರಗಳು ಮೀಸಲಾಗಿವೆ. ಆದರೆ, 2008 ರವರೆಗೆ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಮೀಸಲು ಕ್ಷೇತ್ರಗಳಿರಲಿಲ್ಲ. ಕುಲದೀಪ್‌ ಸಿಂಗ್‌ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ಸಮಿತಿಯ ವರದಿಯಂತೆ ಎಚ್.ಡಿ. ಕೋಟೆಯ ಮೀಸಲಾತಿ ಪ.ಜಾತಿಯಿಂದ ಪ.ಪಂಗಡಕ್ಕೆ ಬದಲಾಯಿತು. ಆದರೆ ಅದಕ್ಕೂ ಮೊದಲು ಡಿ.ಟಿ. ಜಯಕುಮಾರ್- ನಂಜನಗೂಡಿನಿಂದ ಮೂರು ಬಾರಿ, ಕೆ.ಎಂ. ಚಿಕ್ಕಮಾದನಾಯಕ- ಬನ್ನೂರಿನಿಂದ ಎರಡು ಬಾರಿ ಹಾಗೂ ಎಸ್. ಚಿಕ್ಕಮಾದು- ಹುಣಸೂರು ಸಾಮಾನ್ಯ ಕ್ಷೇತ್ರದಿಂದ ಒಂದು ಬಾರಿ ಗೆದ್ದಿದ್ದರು.

ಹುಣಸೂರು- ಬನ್ನೂರು ನಡುವೆ ಲೆಕ್ಕಾಚಾರ:

ಕಾಂಗ್ರೆಸ್ ಪಕ್ಷ ಎಚ್.ಡಿ. ಕೋಟೆಯಲ್ಲಿ ಪ.ಜಾತಿಯ ಎಡಗೈ ಜನಾಂಗಕ್ಕೆ ಟಿಕೆಟ್ ನೀಡುತ್ತಿತ್ತು. ಅದೇ ರೀತಿ ನಾಯಕ ಜನಾಂಗದವರೊಬ್ಬರಿಗೆ ಅವಕಾಶ ಕಲ್ಪಿಸಬೇಕು ಎಂದು ಹುಣಸೂರು ಇಲ್ಲವೇ ಬನ್ನೂರಿನಲ್ಲಿ ಟಿಕೆಟ್ ನೀಡುತ್ತಿತ್ತು. ಇದರ ಪರಿಣಾಮವೇ ಕೆ.ಎಂ. ಚಿಕ್ಕಮಾದನಾಯಕ 1989 ಹಾಗೂ 1999 ರಲ್ಲಿ ಶಾಸಕರಾಗಲು ಸಾಧ್ಯವಾಯಿತು. ಈ ಕ್ಷೇತ್ರ 2008 ರಲ್ಲಿ ರದ್ದಾಯಿತು.

ಬನ್ನೂರಿನಲ್ಲಿ ಚಿಕ್ಕಮಾದನಾಯಕರು 1967 ರಲ್ಲಿ ಸ್ವತಂತ್ರ ಪಾರ್ಟಿ, 1978 ರಲ್ಲಿ ಪಕ್ಷೇತರ, 1985, 1994, 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು. ಅವರ ಪುತ್ರ ಕೆ.ಸಿ. ಲೋಕೇಶ್, ಪತ್ನಿ ಗೌರಮ್ಮ ಜಿಪಂ ಸದಸ್ಯರಾಗಿದ್ದರು.

ಚಿಕ್ಕಮಾದು:

1989 ರಲ್ಲಿ ಹುಣಸೂರಿನಿಂದ ಚಂದ್ರಪ್ರಭ ಅರಸು ಆಯ್ಕೆಯಾಗಿದ್ದರು. 1991 ರ ಚುನಾವಣೆಯಲ್ಲಿ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಗ ಬಿಜೆಪಿಗೆ ಹೋಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ ಗೆಲವು ಸಾಧಿಸಿದರು. ಆಗ ಹುಣಸೂರಿನಲ್ಲಿ ಉಪ ಚುನಾವಣೆ ಎದುರಾಯಿತು. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದರು. ಆ ವೇಳೆಗೆ ಬಿಳಿಕೆರೆ ಕ್ಷೇತ್ರದಿಂದ ಜಿಪಂಗೆ ಆಯ್ಕೆಯಾಗಿದ್ದ ಎಸ್. ಚಿಕ್ಕಮಾದು ತಮ್ಮ ವಾಗ್ಪಟುತ್ವದಿಂದ ಹೆಸರು ಮಾಡಿದ್ದರು. ಉಭಯ ಜಿಲ್ಲೆಗಳಲ್ಲಿ ನಾಯಕ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಮೂಲತಃ ಕೆ.ಆರ್. ನಗರ ತಾಲೂಕು ಹೊಸೂರು ಕಲ್ಲಹಳ್ಳಿಯವರಾದ ಚಿಕ್ಕಮಾದು ನಂತರ ಹುಣಸೂರು ತಾಲೂಕು ಹೊಸರಾಮನಹಳ್ಳಿಗೆ ಬಂದು ನೆಲೆನಿಂತಿದ್ದರು. 1977 ಹಾಗೂ 1980ರ ಲೋಕಸಭೆ ಚುನಾವಣೆಯಲ್ಲಿಯೇ ಸ್ಪರ್ಧಿಸಿದ್ದವರು, ಇದಲ್ಲದೇ 1978 ರಲ್ಲಿ ಹುಣಸೂರಿನಲ್ಲಿ ಡಿ. ದೇವರಾಜ ಅರಸು ಹಾಗೂ 1983 ರಲ್ಲಿ ಅವರ ಪುತ್ರಿ ಚಂದ್ರಪ್ರಭ ಅರಸು ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ, ಗಮನ ಸೆಳೆದಿದ್ದರು. ಹೀಗಾಗಿ ಚಿಕ್ಕಮಾದು ಅವರಿಗೆ ಟಿಕೆಟ್ ನೀಡಲಾಯಿತು. ಆಗ ಅವರು ಬಿಜೆಪಿಯ ಸಿ.ಎಚ್. ವಿಜಯಶಂಕರ್ ಅವರನ್ನು ಸೋಲಿಸಿ, ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1998 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. 1999 ರಲ್ಲಿ ಹುಣಸೂರಿನಲ್ಲಿ ಕಾಂಗ್ರೆಸ್ ಬಂಡಾಯ, 2004 ರಲ್ಲಿ ಕಾಂಗ್ರೆಸ್, 2008 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತರು.

2005 ರಲ್ಲಿ ಜೆಡಿಎಸ್ ಸೇರಿದ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಲಾಯಿತು. ಆರು ವರ್ಷದ ನಂತರ ಅವರಿಗೆ 2013ರ ಚುನಾವಣೆಯಲ್ಲಿ ಎಚ್.ಡಿ. ಕೋಟೆ ಪ.ಪಂಗಡ ಮೀಸಲು ಕ್ಷೇತ್ರದಿಂದ ಟಿಕೆಟ್ ನೀಡಲಾಯಿತು. ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, 2017ರ ನ.1 ರಂದು ನಿಧನರಾದರು. ಅವರ ಪುತ್ರ, ಜಿಪಂ ಮಾಜಿ ಸದಸ್ಯ ಅನಿಲ್ ಚಿಕ್ಕಮಾದು ಎಚ್.ಡಿ. ಕೋಟೆಯಿಂದ ಕಾಂಗ್ರೆಸ್ ಟಿಕೆಟ್ ಮೇಲೆ 2018, 2023- ಹೀಗೆ ಎರಡು ವಿಧಾನಸಭೆಗೆ ಆಯ್ಕೆಯಾದರು.

ಡಿ.ಟಿ. ಜಯಕುಮಾರ್‌:

ಡಿ.ಟಿ. ಜಯಕುಮಾರ್ ಅವರು ಚನ್ನಪಟ್ಟಣ ಶಾಸಕರಾಗಿದ್ದ ಡಿ.ಟಿ. ರಾಮು ಅವರ ಸಹೋದರರು. ನಂಜನಗೂಡಿಗೆ ಸಬ್ ಇನ್‌ಸ್ಪೆಕ್ಟರ್ ಆಗಿ ಬಂದವರು. 1978ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆಗ ಗೆದ್ದವರು ಇಂದಿರಾ ಕಾಂಗ್ರೆಸ್‌ನ ಕೆ.ಬಿ. ಶಿವಯ್ಯ. ಜಯಕುಮಾರ್ 1983 ರ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಅವರು 1985 ರಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1989 ರಲ್ಲಿ ಮತ್ತೆ ಜನತಾದಳದ ಅಭ್ಯರ್ಥಿಯಾಗಿ ಸೋತರು. 1994 ರಲ್ಲಿ ಜಯಕುಮಾರ್ ಜನತಾದಳದ ಅಭ್ಯರ್ಥಿಯಾಗಿ ಗೆದ್ದು, ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿ, ಮಂತ್ರಿಯೂ ಆದರು. 1999 ರಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. 2004 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು, ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಎನ್. ಧರಂಸಿಂಗ್ ನೇತೃತ್ವದ ಜೆಡಿಎಸ್---, ಕಾಂಗ್ರೆಸ್, ಎಚ್.ಡಿ. ಕುಮಾರಸ್ವಾಾಮಿ ನೇತೃತ್ವದ ಜೆಡಿಎಸ್--- , ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಿ, ಉಡುಪಿ, ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ತೋಟಗಾರಿಕೆ, ಬಂಧೀಖಾನೆ, ವಸತಿ ಮತ್ತಿತರ ಖಾತೆಗಳನ್ನು ನಿರ್ವಹಿಸಿದ್ದರು.

2008 ರ ವೇಳೆಗೆ ನಂಜನಗೂಡು ಕ್ಷೇತ್ರವು ಸಾಮಾನ್ಯದಿಂದ ಪ.ಜಾತಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಯಿತು. ಜಯಕುಮಾರ್ ಅವತ್ತು ಪ.ಪಂಗಡಕ್ಕೆ ಮೀಸಲಾದ ಎಚ್.ಡಿ. ಕೋಟೆಗೆ ಹೋಗಿದ್ದರೆ ಗೆಲ್ಲುತ್ತಿದ್ದರು. ಆದರೆ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ಕೇಳಿದರು. ವರಿಷ್ಠರು ಅವರಿಗೆ ಟಿಕೆಟ್ ನಿರಾಕರಿಸಿ, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡರಿಗೆ ನೀಡಿದರು. ಇದನ್ನು ವಿರೋಧಿಸಿ ಜಯಕುಮಾರ್ ಬಿಎಸ್ಪಿ ಸೇರಿ ಅಭ್ಯರ್ಥಿಯಾದರು. ಆ ಚುನಾವಣೆಯಲ್ಲಿ ಇಬ್ಬರೂ ಸೋತು, ಕಾಂಗ್ರೆಸ್‌ನ ಎಂ. ಸತ್ಯನಾರಾಯಣ ಗೆದ್ದರು. ನಂತರ ಜಯಕುಮಾರ್ ಜೆಡಿಎಸ್‌ಗೆ ವಾಪಸ್ ಆದರು. ಅವರನ್ನು ರಾಜ್ಯ ಕಾರ್ಯಾಧ್ಯಕ್ಷರನ್ನಾಾಗಿ ನೇಮಿಸಲಾಗಿತ್ತು. ಬಿಜೆಪಿಯಿಂದಲೂ ಆಹ್ವಾನ ಬಂದಿತ್ತು. ಆದರೆ ಅದಕ್ಕೂ ಮುನ್ನವೇ ಅನಾರೋಗ್ಯದಿಂದ ನಿಧನರಾದರು.

ಮೀಸಲಾದ ನಂತರ ಚಿಕ್ಕಣ್ಣ, ಚಿಕ್ಕಮಾದು ಒಮ್ಮೆ, ಅನಿಲ್‌ ಎರಡು ಬಾರಿ ಆಯ್ಕೆ:

ಎಚ್‌.ಡಿ.ಕೋಟೆ ಕ್ಷೇತ್ರ 2008 ರಿಂದ ಪ.ಪಂಗಡಕ್ಕೆ ಮೀಸಲಾಗಿದೆ. ಇದಾದ ನಂತರ ಚಿಕ್ಕಣ್ಣ, ಎಸ್‌. ಚಿಕ್ಕಮಾದು ತಲಾ ಒಮ್ಮೆ, ಅನಿಲ್‌ ಚಿಕ್ಕಮಾದು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಎರಡು ಬಾರಿ ಜಿಪಂ ಸದಸ್ಯರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ ಅವರು 2008 ರಲ್ಲಿ ಎಚ್.ಡಿ. ಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು, ಪ್ರಥಮ ಬಾರಿ ವಿಧಾನಸಭೆ ಪ್ರವೇಶಿಸಿದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. ನಂತರ ಬಿಜೆಪಿ, ಅಲ್ಲಿಂದ ಕಾಂಗ್ರೆಸ್, ಅಲ್ಲಿಂದಲೂ ಹೊರಬಂದು ಜೆಡಿಎಸ್ ಸೇರಿದರು. 2018 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತರು. ಅವರ ಪತ್ನಿ ಮಹದೇವಮ್ಮ ಜಿಪಂ ಸದಸ್ಯೆಯಾಗಿದ್ದರು. ಅವರ ಪುತ್ರ ಜಯಪ್ರಕಾಶ್‌ 2023ರ ಚುನಾಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಪರಾಭವಗೊಂಡರು.