ಸಾರಾಂಶ
ಬೆಂಗಳೂರು: ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ದುಬಾರಿ ವೆಚ್ಚದ ಚಿಕಿತ್ಸಾ ಸೇವೆ ಒದಗಿಸಲು 35 ಕೋಟಿ ರು. ಮೊತ್ತ ಕಾರ್ಪಸ್ ನಿಧಿಯನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಒಟ್ಟು 13,334 ಕೋಟಿ ರು. ಮೀಸಲಿಡಲಾಗಿದೆ.
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಎಸ್‌ಸಿಪಿ ಅಡಿ 27,674 ಕೋಟಿ ರು. ಮತ್ತು ಟಿಎಸ್‌ಪಿ ಅಡಿ 11,447 ಕೋಟಿ ರು. ಸೇರಿ ಒಟ್ಟು 39,121 ಕೋಟಿ ರು. ಅನುದಾನ ಒದಗಿಸಲಾಗಿದೆ.
ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ 2,710 ಕೋಟಿ ರು. ನೀಡಲಾಗಿದೆ. ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಕ್ರೈಸ್ ಸಂಸ್ಥೆಯ ಮೂಲಕ ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ.
31 ಹೊಸ ವಸತಿ ನಿಲಯ: ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ 18 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆಯ ಮೂಲಕ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಎಸ್‌ಸಿ ವಿದ್ಯಾರ್ಥಿಗಳಿಗೆ 31 ಹೊಸ ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಮಂಜೂರು ಮಾಡಲು ಉದ್ದೇಶಿಸಲಾಗಿದೆ.
ಅಧ್ಯಯನ ಪೀಠ: ಪದ್ಮಶ್ರೀ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠವನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಬೆಂಗಳೂರು ಪೂರ್ವ ಭಾಗದಲ್ಲಿ 500 ಸಂಖ್ಯೆಯ ಒಂದು ನಿರಾಶ್ರಿತರ ಪರಿಹಾರ ಕೇಂದ್ರವನ್ನು 10 ಕೋಟಿ ರು. ವೆಚ್ಚದಲ್ಲಿ ಪ್ರಾರಂಭ ಮಾಡುವ ಬಗ್ಗೆ ಉಲ್ಲೇಖಿಸಲಾಗಿದೆ.
ಭೋಜನ ವೆಚ್ಚ ಹೆಚ್ಚಳ: ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಸತಿ ನಿಲಯಗಳು, ಆಶ್ರಮ ಶಾಲೆಗಳು ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 100 ರು. ನಂತೆ ಹೆಚ್ಚಳ ಮಾಡಲಾಗಿದೆ.
ಒಟ್ಟು 29 ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ ಕಾಮಗಾರಿಗಳನ್ನು 638 ಕೋಟಿ ರು. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಮಹರ್ಷಿ ವಾಲ್ಮೀಕಿ ಶಾಲೆ: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶ್ರಮ ಶಾಲೆಗಳ ಹೆಸರನ್ನು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಎಂಬುದಾಗಿ ಮರು ನಾಮಕಾರಣ ಮಾಡಲು ನಿರ್ಧರಿಸಲಾಗಿದೆ.
ಡ್ರೋನ್ ತರಬೇತಿ: ಐಐಎಸ್‌ಸಿ, ಐಐಟಿ, ಎನ್ಐಟಿ ಸಂಸ್ಥೆಗಳ ಮೂಲಕ ಕೃತಕಬುದ್ಧಿಮತ್ತೆ ಮತ್ತು ಯಂತ್ರಗಳ ಕಲಿಕೆಯಂತಹ ವೃತ್ತಿಪರ ತರಬೇತಿ ಕೋರ್ಸ್‌ಗಳಲ್ಲಿ ಭಾಗವಹಿಸುವ 200 ಇಂಜಿಯರಿಂಗ್ ಪದವೀಧರರಿಗೆ 15 ಸಾವಿರ ರು. ಶಿಷ್ಯವೇತನ ಮತ್ತು 15 ಸಾವಿರ ಯುವಕ/ಯುವತಿಯರಿಗೆ ಡ್ರೋನ್ ತರಬೇತಿ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ.
ಭರ್ಜರಿ ಫೆಲೋಶಿಪ್: 100 ಎಸ್‌ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಯಾವುದೇ ಫೆಲೋಶಿಪ್ ಪಡೆಯದಿದ್ದರೆ ಮಾಸಿಕ 25 ಸಾವಿರ ರು. ಶಿಷ್ಯವೇತನ. ಕೊರಗ, ಜೇನುಕುರುಬ, ಯರವ, ಕಾಡುಕುರುಬ, ಸೋಲಿಗ ಮುಂತಾದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಕ್ರಮ.
ಏಕಲವ್ಯ ಮಾದರಿಯ ಪ್ರತಿ ವಸತಿ ಶಾಲೆಯಲ್ಲಿ 20 ಸೀಟುಗಳು ಮೀಸಲು ಮತ್ತು ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ.
ಉಚಿತ ನೀಟ್ ತರಬೇತಿ: ಇನ್ನು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸೂಕ್ತ ಕ್ರಮ. ಆಶ್ರಮ ಶಾಲೆಗಳನ್ನು ಡಿ.ದೇವರಾಜು ಅರಸು ವಸತಿ ಶಾಲೆಗಳೆಂದು ಮರುನಾಮಕರಣ ಮಾಡಲಾಗುವುದು.
ಪ್ರತಿಷ್ಠಿತ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು 500 ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಉಚಿತ ಜೆಇಇ/ನೀಟ್ ತರಬೇತಿ ನೀಡುವುದಾಗಿ ತಿಳಿಸಲಾಗಿದೆ.