ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಧಿಕಾರಿ ಶ್ರೀರೂಪ ಅವರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ವತಿಯಿಂದ ನೀಡುವ ₹10 ಸಾವಿರ ವಿದ್ಯಾರ್ಥಿ ವೇತನ ವಿತರಿಸಿದರು.

ನಗರದ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಚಾಮರಾಜನಗರದಲ್ಲಿ ಶಾಖಾ ಕಚೇರಿ ಹೊಂದಿರುವ ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ಸಂಸ್ಥೆಯಲ್ಲಿ ಸದಸ್ಯರಾಗಿರುವ ತಲಾ 8 ಪೋಷಕರ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ನೀಡಲಾಗುವ ವಿದ್ಯಾರ್ಥಿ ವೇತನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಶ್ರೀರೂಪ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಮುಂದಿನ ಹಂತದ ಶೈಕ್ಷಣಿಕ ವಿದ್ಯಾಭ್ಯಾಸದ ಬಗ್ಗೆ ಮಕ್ಕಳನ್ನು ವಿಚಾರಿಸಿದರು. ಭವಿಷ್ಯದಲ್ಲಿ ಏನು ಆಗಬೇಕೆಂಬ ಉದ್ದೇಶ ಹಾಗೂ ಗುರಿಗಳನ್ನು ಹೊಂದಿದ್ದೀರಿ ಎಂದು ಮಕ್ಕಳನ್ನು ಕೇಳಿದರು. ಇದಕ್ಕುತ್ತರಿಸಿದ ಮಕ್ಕಳು, ಉನ್ನತ ವಿದ್ಯಾಭ್ಯಾಸ ಪಡೆಯಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು.

ಬಳಿಕ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು, ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ವತಿಯಿಂದ ಸಂಸ್ಥೆಯಲ್ಲಿ ಸದಸ್ಯರಾಗಿರುವ ಪೋಷಕರ ಮಕ್ಕಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ಸಲುವಾಗಿ ಕಳೆದ ಮೂರು ವರ್ಷಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.


ಮುಂದಿನ ದಿನಗಳಲ್ಲಿ ಪಿಯುಸಿ ಪರೀಕ್ಷೆಯಲ್ಲಿಯೂ ಹೆಚ್ಚಿನ ಅಂಕ ಪಡೆದ ಮಕ್ಕಳಿಗೂ ವಿದ್ಯಾರ್ಥಿವೇತನ ನೀಡಲು ನಗರದ ಗ್ರಾಮೀಣ ಕೂಟ ಸಂಸ್ಥೆ ಇಚ್ಛಿಸಿದೆ. ವಿದ್ಯಾರ್ಥಿ ವೇತನವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಸದ್ಭಳಕೆ ಮಾಡಿಕೊಳ್ಳಬೇಕು. ಮಕ್ಕಳು ಉನ್ನತ ವ್ಯಾಸಂಗ ಪಡೆದು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಆ ಮೂಲಕ ಮಕ್ಕಳು ತಂದೆ- ತಾಯಿಗಳಿಗೆ ಹಾಗೂ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಜಿಲ್ಲಾಧಿಕಾರಿ ಶೀರೂಪ ಅವರು ಕಿವಿಮಾತು ಹೇಳಿದರು.

ಅಪೂರ್ವ (ಶೇ. 98.56), ಸಿಂಚನಾ (ಶೇ. 94.88), ತೇಜಸ್ವಿನಿ (ಶೇ. 94.24), ಅರ್ಪಿತಾ (ಶೇ. 94), ಮಾನಸ (ಶೇ. 93.44), ಇಂದುಶ್ರೀ (ಶೇ. 91), ಆಶಾ (ಶೇ. 90.56) ಹಾಗೂ ಹೇಮಲತಾ (ಶೇ. 89.28) ಅವರು ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಶಿರಸ್ತೇದಾರರಾದ ರಂಗರಾಜು, ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ಸಂಸ್ಥೆಯ ವಲಯ ವ್ಯವಸ್ಥಾಪಕರಾದ ಕೃಷ್ಣ, ಲೋಕೇಶ್, ಶಾಖಾ ವ್ಯವಸ್ಥಾಪಕರಾದ ದಿಲೀಪ್‌ಕುಮಾರ್, ವಿದ್ಯಾರ್ಥಿಗಳ ಪೋಷಕರು, ಇತರರು ಇದೇ ಸಂದರ್ಭದಲ್ಲಿ ಇದ್ದರು.

ಇದಕ್ಕೂ ಮೊದಲು ಕ್ರೆಡಿಟ್ ಆ್ಯಕ್ಸಿಸ್ ಇಂಡಿಯಾ ಫೌಂಡೇಷನ್ (ಗ್ರಾಮೀಣ ಕೂಟ) ಸಂಸ್ಥೆಯ ವತಿಯಿಂದ ಜಿಲ್ಲಾಡಳಿತ ಭವನ ಆವರಣದಲ್ಲಿ ಗಿಡನೆಟ್ಟು ನಿರೇರೆಯಲಾಯಿತು.