ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ಜಾಗತಿಕ ಮಟ್ಟಕ್ಕೆ ಸರಿಸಮಾನವಾದ ಎಲ್ಲಾ ಸೌಲಭ್ಯಗಳನ್ನು ವಿದ್ಯಾನಿಕೇತನ ಸಂಸ್ಥೆಯಲ್ಲಿ ಒದಗಿಸಲಾಗಿದೆ ಎಂದು ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅದ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನಲ್ಲಿ 2024-25ನೇ ಸಾಲಿನ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ವಾರ್ಷಿಕೋತ್ಸವ ಹಾಗೂ ಪಾಲಕರಿಗೆ ಪಾದಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾವಲಂಬಿ ವಿದ್ಯಾರ್ಥಿ- ಜವಾಬ್ದಾರಿಯುತ ಶಿಕ್ಷಣ ಎಂಬ ಧ್ಯೇಯದೊಂದಿಗೆ ನಮ್ಮ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದ್ದು, ಜಾಗತಿಕ ಮಟ್ಟಕ್ಕೆ ಸರಿ ಸಮಾನವಾದ ಎಲ್ಲಾ ಶೈಕ್ಷಣಿಕ ಸೌಲಭ್ಯ ಮತ್ತು ಸಂಪನ್ಮೂಲಗಳನ್ನು ಶಾಲೆಯಲ್ಲಿ ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದುಕೊಂಡು ಉನ್ನತವಾದ ಸಾಧನೆ ಮಾಡಬೇಕೆಂದರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿದರು.ಇದೇ ಸಂದರ್ಭ ಕಳೆದ ವರ್ಷ 12ನೇ ತರಗತಿಯ ಪಿಯು ವಿಜ್ಞಾನ ವಿಭಾಗದಲ್ಲಿ 590ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ 8 ವಿದ್ಯಾರ್ಥಿಗಳಿಗೆ ತಲಾ ₹1 ಲಕ್ಷ ಬಹುಮಾನ ಮತ್ತು 580ಕ್ಕೂ ಹೆಚ್ಚು ಅಂಕ ಪಡೆದ 98 ವಿದ್ಯಾರ್ಥಿಗಳಿಗೆ ತಲಾ ₹50 ಸಾವಿರ ಬಹುಮಾನ ವಿತರಿಸಿ ಅವರ ತಂದೆ-ತಾಯಿಗಳನ್ನು ಸನ್ಮಾನಿಸಲಾಯಿತು.
ಅದೇ ರೀತಿ 2024ನೇ ಸಾಲಿನಲ್ಲಿ ಎಂಬಿಬಿಎಸ್, ಜೆಇಇ ಮತ್ತು ಸಿಇಟಿಯಲ್ಲಿ ಉನ್ನತ ಶ್ರೇಣಿ ಪಡೆದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅವರ ಪಾಲಕರನ್ನೂ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿಗಳಾದ ಡಿ. ವೆಂಕಟಪತಿ ರಾಜು, ರೈತ ಮುಖಂಡರಾದ ದೊಣ್ಣೆಪುಡಿ ರವೀಂದ್ರ ಪ್ರಸಾದ್, ಶೇಖರ್, ಶ್ರೀರಾಮನಗರದ ಗ್ರಾಪಂ ಮಾಜಿ ಅಧ್ಯಕ್ಷ ಕರಟೂರಿ ಶ್ರೀನಿವಾಸ್, ಶಾಲೆಯ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ, ಶಾಲೆಯ ಆಡಳಿತ ನಿರ್ದೇಶಕರಾದ ಎಚ್.ಕೆ. ಚಂದ್ರಮೋಹನ್, ನರೇಶ್ ವೈ., ಕೆ.ಎಸ್. ಮಲ್ಲಿಕಾರ್ಜುನ್, ಎ. ಉಮಾಶಂಕರ್ ರಾವ್, ಟಿ. ಜಗನ್ನಾಥ್ ರಾವ್, ಡಿ.ಎಂ. ಅಭಿಷೇಕ್, ಕೃಷ್ಣವೇಣಿ, ಜಿ. ನಾಗೇಶ್ವರ್‍ರಾವ್, ಸುಭದ್ರಾ ದೇವಿ ಹಾಗೂ ಎಲ್ಲಾ ಪಾಲಕರು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.