ಸಾರಾಂಶ
ಬ್ಯಾಡಗಿ: ಶಾಲಾ ವಾತಾವರಣವು ವಿದ್ಯಾರ್ಥಿಯ ಜೀವನ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಾಥಮಿಕ ಹಂತದಲ್ಲಿ ಕಲಿತದ್ದೇ ಬದುಕಿನ ಅಂತಿಮ ದಿನಗಳವರೆಗೂ ಉಳಿಯಲಿದೆ. ಹೀಗಾಗಿ ಶಾಲೆಗಳಲ್ಲಿನ ಭೌತಿಕ ಪರಿಸರವು ದೈಹಿಕವಾಗಿ, ಸಾಮಾಜಿಕವಾಗಿ ಪೋಷಿಸುವ ಮತ್ತು ಭಾವನಾತ್ಮಕವಾಗಿ ಬೆಂಬಲ ನೀಡುವ ವಾತಾವರಣ ಸೃಷ್ಟಿಸುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಗುಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸೃಜನಶೀಲರನ್ನಾಗಿ ಮಾಡಿ:ಶೈಕ್ಷಣಿಕ ವಾತಾವರಣವು ಕಲಿಕೆ ಮತ್ತು ಬೌದ್ಧಿಕ ಬೆಳವಣಿಗೆ ಮೇಲೆ ಕೇಂದ್ರೀಕೃತವಾಗಿದ್ದು ಮಕ್ಕಳಲ್ಲಿ ಕುತೂಹಲ ಮೂಡಿಸುವಂತಹ ವಿಷಯಗಳನ್ನು ನೀಡುವ ಮೂಲಕ ಅವರನ್ನು ಇನ್ನಷ್ಟು ಸೃಜನಶೀಲ ಹಾಗೂ ವಿಮರ್ಶಾತ್ಮಕ ಚಿಂತನೆಗೆ ಒಳಪಡುವಂತೆ ಮಾಡಬೇಕು. ತರಗತಿ ಕೊಠಡಿಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು ಆಟದ ಮೈದಾನಗಳು ಸ್ವಚ್ಛ, ಸುರಕ್ಷಿತ ಮತ್ತು ಕಲಿಕೆಗೆ ಅನುಕೂಲಕರವಾಗಿರಲಿ ಎಂದು ಸಲಹೆ ನೀಡಿದರು.
ಕಾಟಾಚಾರದ ವಿದ್ಯಾರ್ಜನೆ ಬೇಡ: ಶಾಲೆಗಳು ಒಂದು ಸಂಕೀರ್ಣ ಪರಿಸರ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಮಕ್ಕಳು ತಪ್ಪು ಮಾಡಿದರೇ ಕಲಿಸಿದ ಶಿಕ್ಷಕನನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹೀಗಾಗಿ ಶಿಕ್ಷಕರು ಮಕ್ಕಳಿಗೆ ಕಾಟಾಚಾರದ ವಿದ್ಯಾರ್ಜನೆ ಮಾಡಬಾರದು, ಬದಲಾಗಿ ವಿದ್ಯಾರ್ಥಿಗಳಿಗೆ ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪುವಂತೆ ನೋಡಿಕೊಳ್ಳಬೇಕು, ನಿಮಗೆ ಕಲಿಸಿದಂತಹ ಗುರುಗಳನ್ನು ಮನದಲ್ಲಿ ಒಂದೊಮ್ಮೆ ಜ್ಞಾಪಿಸಿಕೊಂಡರೆ ಇಂತಹ ಮಾತುಗಳಿಗೆ ಉತ್ತರ ಸಿಗಲಿದೆ ಎಂದರು.ಡಾ ಬಸವರಾಜ ವೀರಾಪುರ ಮಾತನಾಡಿ, ದೇಶದ ಯುವಕರಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಹೆಚ್ಚಾಗುತ್ತಿದೆ. ಜನಪದ ಸೊಗಡಿನ ಜಾನಪದ ನೃತ್ಯಗಳು, ತತ್ವ ಪದಗಳು, ಸದಭಿರುಚಿಯ ಹಾಡುಗಳ ನೃತ್ಯಗಳನ್ನು ಮಕ್ಕಳಿಂದ ಮಾಡಿಸುವುದು ಇಂದಿನ ಅಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಶಾಲೆಗಳು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದರು.
ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಪ್ರಶಾಂತ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಶಿವಯೋಗಿ ಹುಣಸಿಕಟ್ಟಿ ಮುಖಂಡರಾದ, ನಾಗರಾಜ ಆನ್ವೇರಿ, ಸತೀಶಗೌಡ ಪಾಟೀಲ, ಜಿ.ಬಿ.ಮಾಗಳ, ಎ.ಟಿ. ಪೀಠದ, ಚಂದ್ರಶೇಖರ ಹೊನ್ನಪ್ಪನವರ, ರವಿ ಹೊಸ್ಮನಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರುತಿ ಲಮಾಣಿ, ಸದಸ್ಯರಾದ ಕರಬಸಪ್ಪ ಆನ್ವೇರಿ, ಕಲವೀರಪ್ಪ ಹುಣಸೀಕಟ್ಟಿ, ಪ್ರಕಾಶ ಲಮಾಣಿ, ಟೋಪಣ್ಣ ಲಮಾಣಿ, ಮಲ್ಲಿಕಾರ್ಜುನಗೌಡ ಪಾಟೀಲ, ವಿನೋದ ಮಾಳಗಿ, ಶಿಲ್ಪಾ ಆನವಟ್ಟಿ, ರಾಜೇಶ್ವರಿ ದಾವಣಗೆರೆ, ನೇತ್ರಾವತಿ ಯತ್ನಳ್ಳಿ, ಮಂಗಳಾ ಶಿಗ್ಗಾವಿ, ತಾರಾ ಲಮಾಣಿ, ಶಾಂತವ್ವ ಲಮಾಣಿ, ಫಕ್ಕೀರಪ್ಪ ಹೊಂಬರಡಿ, ಯಲ್ಲಪ್ಪ ರ‍್ಯಾವಣ್ಣನವರ, ಮರಿಯಪ್ಪ ಮಾಳಗಿ, ವೀರಮ್ಮ ಮನ್ನಂಗಿ, ಬಸವರಾಜ ಹೊಸಮನಿ, ಕರಬಸಪ್ಪ ಯತ್ನಳ್ಳಿ, ಮುತ್ತಣ್ಣ ಶಿಗ್ಗಾವಿ, ರಾಮಚಂದ್ರ ಅಂಗಡಿ ಮುಖ್ಯಶಿಕ್ಷಕ ಎನ್ .ಬಿ. ಅಬಲೂರು, ಡಿ.ಜಿ. ಕಮದೋಡ, ಕೆ.ಎಂ. ಚೈತ್ರ, ಟಿ.ಎಸ್. ಚೈತ್ರರಾವ, ಸುನಿತಾ ತಳವಾರ, ಕೆ.ಎಸ್ .ಪಾಟೀಲ, ಶ್ವೇತಾ ಪಲ್ಲೇದ, ಆರತಿ ದಳವಾಯಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಮಲ್ಲಪ್ಪ ಕರೇಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.