ಮರಕ್ಕೆ ಶಾಲಾ ಬಸ್‌ ಡಿಕ್ಕಿ, ಇಬ್ಬರು ಗಂಭೀರ

| Published : Feb 02 2025, 11:48 PM IST

ಸಾರಾಂಶ

ನಗರದ ಜೈನ್ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ಬಸ್‌ ಚಾಲಕನ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದು 35ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದರೆ, 10ಕ್ಕೂ ಹೆಚ್ಚು ಮಕ್ಕಳು ಸಣ್ಣಪುಟ್ಟ ಗಾಯಗೊಂಡ ಘಟನೆ ತಾಲೂಕಿನ ಆನಗೋಡು- ಶಿವಪುರ ಗ್ರಾಮದ ತಿರುವಿನ ಬಳಿ ಶನಿವಾರ ಬೆಳಗ್ಗೆ ದಾವಣಗೆರೆಯಲ್ಲಿ ನಡೆದಿದೆ.

- 10ಕ್ಕೂ ಹೆಚ್ಚು ಮಕ್ಕಳಿಗೆ ಗಾಯ । ಸ್ಥಳಕ್ಕೆ ಶಾಸಕ, ಜಿಲ್ಲಾ ಎಸ್ಪಿ ಭೇಟಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಜೈನ್ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ಬಸ್‌ ಚಾಲಕನ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದು 35ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದರೆ, 10ಕ್ಕೂ ಹೆಚ್ಚು ಮಕ್ಕಳು ಸಣ್ಣಪುಟ್ಟ ಗಾಯಗೊಂಡ ಘಟನೆ ತಾಲೂಕಿನ ಆನಗೋಡು- ಶಿವಪುರ ಗ್ರಾಮದ ತಿರುವಿನ ಬಳಿ ಶನಿವಾರ ಬೆಳಗ್ಗೆ ನಡೆದಿದೆ.

ಕೆರನಹಳ್ಳಿ ಗ್ರಾಮದ ಅರ್ಚನಾ (12), ಕಂದನಕೋವಿಯ ಇಂದುಮತಿ (12) ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಇಬ್ಬರನ್ನೂ ಎಸ್‌.ಎಸ್‌. ಹೈಟೆಕ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯಗೊಂಡ ಮಕ್ಕಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬಸ್ಸಿನಲ್ಲಿ ಸುಮಾರು 35 ಮಕ್ಕಳಿದ್ದರು. ಮಾಮೂಲಿ ಚಾಲಕನ ಬದಲು, ಹೊಸಬ ಬಸ್‌ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ಬಸ್‌ ಅಪಘಾತಕ್ಕೆ ಈಡಾಗುತ್ತಿದ್ದಂತೆ ಸ್ಥಳೀಯರು, ದಾರಿಹೋಕರು ಮಕ್ಕಳ ನೆರವಿಗೆ ಧಾವಿಸಿ, ಆಸ್ಪತ್ರೆಗಳಿಗೆ ಸಾಗಿಸಿ, ಮಾನವೀಯತೆ ಮೆರೆದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸ್ಥಳಕ್ಕೆ ಧಾವಿಸಿ, ಮಕ್ಕಳನ್ನು ಆಸ್ಪತ್ರೆ ಸಾಗಿಸಲು ಕೈ ಜೋಡಿಸಿದರು. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಶಾಸಕರೊಂದಿಗೆ ಜಿಲ್ಲಾಸ್ಪತ್ರೆಗೂ ಭೇಟಿ ನೀಡಿದರು. ಮಕ್ಕಳ ಪಾಲಕರು ಆಸ್ಪತ್ರೆಗಳಿಗೆ ದೌಡಾಯಿಸಿದ್ದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಗೆ ಶಾಸಕ ಫೋನ್‌:

ದೂರವಾಣಿ ಮೂಲಕ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿದ ಶಾಸಕ ಬಸವಂತಪ್ಪ, ಈಚಿನ ದಿನಗಳಲ್ಲಿ ಖಾಸಗಿ ಶಾಲಾ ಬಸ್ ಚಾಲಕರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದಾರೆ. ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರ, ಚಾಲಕರ ಸಭೆ ಕರೆದು ಮಕ್ಕಳ ಸುರಕ್ಷತೆ ಬಗ್ಗೆ ಹಾಗೂ ಮಕ್ಕಳನ್ನು ಹಳ್ಳಿಗಳಿಂದ ಬಸ್‌ಗಳಲ್ಲಿ ಶಾಲೆಗೆ ಕರೆತಂದು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಸೂಚನೆ ನೀಡಿದರು. ಆಗ ಡಿಸಿ ಅವರು ಶೀಘ್ರದಲ್ಲೇ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ಕರೆದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

- - - ಟಾಪ್‌ ಕೋಟ್‌ ಬಸ್‌ ಅಪಘಾತದಿಂದ ಮಕ್ಕಳ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಎಸ್.ಎಸ್. ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಚಿಕಿತ್ಸಾ ವೆಚ್ಚವನ್ನು ಶಾಲಾ ಆಡಳಿತ ಮಂಡಳಿ ಭರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು

- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ

- - - -1ಕೆಡಿವಿಜಿ6: ಶಾಲಾ ಬಸ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ಮಕ್ಕಳನ್ನು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪಆರೋಗ್ಯ ವಿಚಾರಿಸಿದರು.

-1ಕೆಡಿವಿಜಿ8: ದಾವಣಗೆರೆ ತಾ. ಆನಗೋಡು ಬಳಿ ಶಾಲಾ ಬಸ್ಸು ಅಪಘಾತಕ್ಕೀಡಾದ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ ಭೇಟಿ ನೀಡಿ, ಪರಿಶಿಲೀಸಿದರು.