ಸಾರಾಂಶ
- ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರಿ ಬಸ್ಸುಗಳು ಮನಸ್ಸೋ ಇಚ್ಛೆ ಬರುತ್ತಿವೆ. ಸಮಯಕ್ಕೆ ಸರಿಯಾಗಿ ಬಾರದೇ ಶಾಲಾ, ಕಾಲೇಜುಗಳ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಕು. ಚಂದ್ರಮ್ಮ ಆರೋಪಿಸಿದರು.
ತಾ.ಪಂಚಾಯ್ತಿಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರೂ ಸರ್ಕಾರಿ ಬಸ್ಸುಗಳು ನಿಲ್ದಾಣಕ್ಕೇ ಬರುತ್ತಿಲ್ಲ. ಇಲ್ಲವೇ ತಡವಾಗಿ ಬರುತ್ತಿವೆ ಎಂದು ಪ್ರಯಾಣಿಕರು ಸಾಕಷ್ಟು ದೂರು ಹೇಳಿದ್ದಾರೆ. ಬಸ್ಸುಗಳು ಸಮಯ ನಿರ್ವಹಣೆಗೆ ಕ್ರಮ ವಹಿಸಬೇಕು ಎಂದು ಚಿಕ್ಕಮಗಳೂರು ಕೆಎಸ್.ಆರ್.ಟಿ.ಸಿ ಡಿಪೋದ ಸಂಚಾರ ನಿಯಂತ್ರಣಾಧಿಕಾರಿ ವಸಂತ್‌ಕುಮಾರ್ ಗೆ ಸೂಚಿಸಿದರು.ವಸಂತ್‌ಕುಮಾರ್ ಮಾತನಾಡಿ, ಮೈಸೂರು ದಸರಾ ಉತ್ಸವದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಚಾರಕ್ಕೆ ಕೆಲವು ಬಸ್ಸುಗಳನ್ನು ತೆಗೆದು ಕೊಂಡಿದ್ದಾರೆ. ಹಾಗಾಗಿ ಸ್ವಲ್ಪ ದಿನಗಳ ಮಟ್ಟಿಗೆ ಬಸ್‌ಗಳ ಕೊರತೆ ಯಾಗಲಿದೆ. ಇತ್ತೀಚಿಗೆ ರಸ್ತೆಗಳೂ ಹಾಳಾಗಿರುವು ದರಿಂದ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗುತ್ತಿಲ್ಲ. ಶೃಂಗೇರಿ ಡಿಪೋ ಜನವರಿ ಅಂತ್ಯದೊಳಗೆ ಪೂರ್ಣಗೊಂಡು ಲೋಕಾರ್ಪಣೆಯಾಗಬೇಕೆಂದು ಶಾಸಕರು ಸೂಚಿಸಿದ್ದಾರೆ. ಡಿಪೋ ನಿರ್ಮಾಣ ಕಾರ್ಯ ವೇಗವಾಗಿದ್ದು ಈಗಾಗಲೇ 75 ರಷ್ಟು ಮುಗಿದಿದೆ. ಜನವರಿ ಅಂತ್ಯದೊಳಗೆ ಲೋಕಾರ್ಪಣೆಯಾಗಲಿದೆ ಎಂದರು.ಸಿಡಿಪಿಒ ಇಲಾಖೆ ಅಧಿಕಾರಿ ಪ್ರದೀಪ್ ಮಾತನಾಡಿ, ಜೂನ್ ವರೆಗೆ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಬಿಡುಗಡೆಯಾಗಬೇಕಿದೆ. ಹಿಂದೆ ಅರ್ಜಿ ಸಲ್ಲಿಸಿದವುಗಳಲ್ಲಿ ಐಟಿ, ಜಿಎಸ್.ಟಿ ಪಾವತಿದಾರರೆಂದು ಬಾಕಿ ಉಳಿಸಿದ ಹಾಗೂ ತಿರಸ್ಕರಿಸಿದ ಅರ್ಜಿಗಳನ್ನು ಮತ್ತೆ ಪುನಃ ಪರಿಗಣನೆಗೆ ತೆಗೆದುಕೊಳ್ಳಲಾಗದು. ಫಲಾನುಭವಿಗಳಿಗೆ ನಿಮ್ಮ ಹಂತದಲ್ಲೆ ಹಿಂಬರಹ ನೀಡಿ ಎಂದು ಮೇಲಾಧಿಕಾರಿಗಳಿಂದ ಆದೇಶ ಬಂದಿರುವುದರಿಂದ ಅಂತಹವರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರು.
ಆಹಾರ ಇಲಾಖೆ ಅಧಿಕಾರಿ ಗಣಪತಿ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಹಣದ ಬದಲು ಅಕ್ಕಿ ನೀಡಲಾಗುತ್ತಿದೆ. ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡು ಪರಿಶೀಲಿಸಿ ರದ್ದುಗೊಳಿಸಲು ಶಿಫಾರಸ್ಸು ಮಾಡಲು ಸೂಚಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 673 ಕಾರ್ಡುಗಳನ್ನು ಪರಿಶೀಲನೆಗೆ ಒಳಪಡಿಸಲು ಪಟ್ಟಿ ಬಂದಿದೆ. ಅವುಗಳಲ್ಲಿ ಈಗಾಗಲೇ 25 ಕಾರ್ಡು ದಾರರು ಸ್ವಯಂಪ್ರೇರಿತರಾಗಿ ಇಲಾಖೆಗೆ ಪಡಿತರ ಚೀಟಿ ಸರೆಂಡರ್ ಮಾಡಿದ್ದಾರೆ. ಕುಟುಂಬದ ನಿರ್ವಹಣೆ, ಜೀವನೋ ಪಾಯಕ್ಕೆ ಒಂದು ಹಳದಿ ಬೋರ್ಡಿನ ವಾಹನವಿದ್ದರೆ ಅಂತಹವರ ಕಾರ್ಡು ರದ್ದುಗೊಳಿಸಲ್ಲ ಎಂದು ತಿಳಿಸಿದರು.ಸಭೆಯಲ್ಲಿ ಸದಸ್ಯರಾದ ಬೇಸಿಲ್, ಇಂದಿರಾನಗರ ರಘು, ನಾಗರಾಜ್, ಟಿ.ಟಿ.ಇಸ್ಮಾಯಿಲ್,ನಿತ್ಯಾನಂದ,ಜಯರಾಂ, ದೇವರಾಜ್, ಹೂವಮ್ಮ, ಅಪೂರ್ವ, ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ, ಶ್ರೀದೇವಿ ಇದ್ದರು.