ಸಾರಾಂಶ
ಶುಕ್ರವಾರ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಿದ್ದು, ಪ್ರಮುಖ ದೇವಾಲಯದಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಗೋಕರ್ಣ: ಶಾಲಾ- ಕಾಲೇಜುಗಳಿಗೆ ರಜೆ ಪ್ರಾರಂಭವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯ ಜನರು ಪ್ರವಾಸಿ ತಾಣದತ್ತ ಮುಖ ಮಾಡುತ್ತಿದ್ದು, ಗುರುವಾರದಿಂದಲೇ ಕುಟುಂಬ ಸಮೇತರಾಗಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಶುಕ್ರವಾರ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಿದ್ದು, ಪ್ರಮುಖ ದೇವಾಲಯದಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ. ಕಡಲ ತೀರದಲ್ಲಿ ಮಕ್ಕಳೊಂದಿಗೆ ಸಮುದ್ರದಲ್ಲಿಳಿದು ಆಟವಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದು, ಸುಡುಬಿಸಿಲಿನ ತಾಪವನ್ನು ಲೆಕ್ಕಿಸದೇ ರಜೆ ಸವಿ ಸವಿಯುತ್ತಿದ್ದಾರೆ. ಬಹುತೇಕ ಜನರು ಭೇಟಿ ನೀಡಿ ತೆರಳುವವರೇ ಹೆಚ್ಚಿದ್ದು, ಇಲ್ಲೇ ವಸತಿ ಮಾಡುವವರು ಕಡಿಮೆಯಿದ್ದಾರೆ. ತಂಪು ಪಾನೀಯ, ಎಳನೀರು ವ್ಯಾಪಾರ ಜೋರಾಗಿದ್ದು, ಬಿಲಸಿನ ತಾಪ ತಡೆಯಲು ಟೋಪಿ, ಛತ್ರಿ ಖರೀದಿಗೂ ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.ಎಚ್ಚೆತ್ತುಕೊಳ್ಳಬೇಕಿದೆ ಸ್ಥಳೀಯ ಆಡಳಿತ: ಪ್ರತಿ ಬಾರಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಪ್ರಮುಖ ಮಾರ್ಗಗಳು ವಾಹನ ದಟ್ಟಣೆಯಿಂದ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದ್ದು, ಏಕಮುಖ ಸಂಚಾರ ವ್ಯವಸ್ಥೆಯನ್ನು ಕಟ್ಟುನಿಟ್ಟು ಜಾರಿಗೊಳಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆಗೊಳಿಸಬೇಕಿದೆ. ಈ ಬಗ್ಗೆ ಗ್ರಾಪಂ ಪೊಲೀಸ್ ಇಲಾಖೆಗೆ ಈಗಲೇ ಮನವಿ ಮಾಡಬೇಕಿದೆ.
ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸುವುದು, ಶುದ್ಧ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಹಲವು ಮೂಲ ಸೌಲಭ್ಯದ ಕುರಿತು ಬೇಸಿಗೆ ರಜೆಯ ಆರಂಭದಲ್ಲೆ ಮುಂಜಾಗ್ರತೆ ವಹಿಸಿ ಕ್ರಮ ತೆಗೆದುಕೊಂಡರೆ ಪ್ರತಿ ಬಾರಿಯಾಗುವ ತೊಂದರೆಯನ್ನು ತಪ್ಪಿಸಬಹುದು. ಆದರೆ ಗ್ರಾಮ ಪಂಚಾಯಿತಿ ಅಥವಾ ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.