ಸಾರಾಂಶ
ಹುಬ್ಬಳ್ಳಿ:
ಶಾಲಾ, ಕಾಲೇಜುಗಳು ವ್ಯಕ್ತಿತ್ವ ರೂಪಿಸುವ ವೇದಿಕೆಗಳಾಗಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೈತಿಕ ಮೌಲ್ಯ ಅಳವಡಿಸಿಕೊಳ್ಳಬೇಕೆಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.ಇಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿವಿ ಸಭಾಂಗಣದಲ್ಲಿ ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ಕಾನೂನು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರದಿಂದ 5 ದಿನ ಹಮ್ಮಿಕೊಂಡಿರುವ ಎನ್ಎಸ್ಎಸ್ ಅಧಿಕಾರಿಗಳ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಅವಶ್ಯವಾಗಿದೆ. ಎನ್‌ಎಸ್‌ಎಸ್ ಅಧಿಕಾರಿಗಳು ಮಕ್ಕಳ ವ್ಯಕ್ತಿತ್ವ ರೂಪಿಸಲು ವಿಶೇಷ ಗಮನ ಹರಿಸಬೇಕಾಗಿದೆ ಎಂದ ಅವರು, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರಲು ಶ್ರಮಿಸಿದ ಮಹಾತ್ಮ ಗಾಂಧೀಜಿ, ಯುವಕರಿಗೆ ಸ್ಫೂರ್ತಿಯಾಗಿರುವ ಸ್ವಾಮೀ ವಿವೇಕಾನಂದರ ಹಲವಾರು ವಿಚಾರಗಳು ನಮಗೆ ದಾರಿದೀಪವಾಗಿವೆ. ಸ್ವಯಂ ಸೇವಕರು ತಾವು ಆಯ್ಕೆ ಮಾಡಿಕೊಂಡ ಗ್ರಾಮಗಳನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂಬುದನ್ನು ಅರಿತು ಅದರಂತೆ ಅಭಿವೃದ್ಧಿಪಡಿಸುವ ಮೂಲಕ ಮಾದರಿ ಗ್ರಾಮ ಮಾಡಲು ಶ್ರಮಿಸುವಂತೆ ಕರೆ ನೀಡಿದರು.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಬದುಕಿನ, ಶಿಕ್ಷಣದ ಬಗ್ಗೆ ಪ್ರೇರಣೆ ನೀಡುವ ಕಾರ್ಯವಾಗಲಿ. ಆ ಮೂಲಕ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್ಎಸ್ಎಸ್ ಕೋಶದ ಪ್ರತಾಪ್ ಲಿಂಗಯ್ಯ ಮಾತನಾಡಿ, ಈಗಾಗಲೇ ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ 350ಕ್ಕೂ ಅಧಿಕ ಎನ್ಎಸ್‌ಎಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ ಮೊದಲು ಎನ್‌ಎಸ್‌ಎಸ್ ಸ್ಥಾಪನೆಯಾದಾಗ 40 ಸಾವಿರ ಸ್ವಯಂ ಸೇವಕರಿದ್ದರು. ಈಗ 6.5 ಲಕ್ಷಕ್ಕಿಂತ ಅಧಿಕ ಸ್ವಯಂ ಸೇವಕರಿರುವುದು ಹೆಮ್ಮೆಯ ಸಂಗತಿ. ಇವರಲ್ಲಿ ಶೇ. 60 ರಷ್ಟು ಹೊಸ ಕಾರ್ಯಕ್ರಮ ಅಧಿಕಾರಿಗಳಿದ್ದಾರೆ. ಅವರಿಗೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಹಾಗಾಗಿ ತರಬೇತಿ ಆಯೋಜಿಸಿರುವುದಾಗಿ ತಿಳಿಸಿದರು.ಪ್ರೊ. ಜಿ.ಬಿ. ಶಿವರಾಜು, ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಾನೂನು ವಿವಿ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿದರು. ಇದೇ ವೇಳೆ ಮಹಾತ್ಮ ಗಾಂಧೀಜಿ ಕುರಿತಾದ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯದ 26 ವಿವಿಗಳು, ಪಪೂ, ಪದವಿ, ಡಿಪ್ಲೊಮಾ, ಕಾನೂನು ಸೇರಿ 115 ಕಾಲೇಜುಗಳ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು ಭಾಗಿಯಾಗಿದ್ದರು.
ಸಿಂಡಿಕೇಟ್ ಸದಸ್ಯ ಎಸ್.ಎನ್. ಪರಾಂಡೆ, ರಾಜ್ಯ ಕಾನೂನು ವಿವಿ ಕುಲಸಚಿವೆ ಅನುರಾಧ ವಸ್ತ್ರದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಕೆಎಸ್ಎಲ್‌ಯು ಕಾನೂನು ಶಾಲೆಯ ಸಹಾಯಕಿ ಪ್ರಾಧ್ಯಾಪಕ ಐ.ಬಿ. ಬಿರಾದಾರ್, ಪ್ರಶಾಂತ್ ಎಡ್ರಾಮಿಮಠ್ ಸೇರಿದಂತೆ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.