ಮಕ್ಕಳ ಶೈಕ್ಷಣಿಕ ಪ್ರವಾಸವು ತರಗತಿಗಳ ಹೊರಗೆ ಪ್ರಾಯೋಗಿಕ ಕಲಿಕೆಗೆ ಅವಕಾಶ ನೀಡುವ ಜೊತೆಗೆ ಮಕ್ಕಳಲ್ಲಿ ಕುತೂಹಲ ಮತ್ತು ವಿಮರ್ಶಾತ್ಮಕ ಚಿಂತನೆ ಹೆಚ್ಚಿಸಲು ಸಹಕಾರಿಯಾಗುತ್ತದೆ.

ಮದ್ದೂರು:ಶಾಲಾ ಶೈಕ್ಷಣಿಕ ಪ್ರವಾಸವು ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯ ಮಹತ್ವದ ಭಾಗವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಹೇಳಿದರು.

ಶಿಕ್ಷಣ ಇಲಾಖೆ ತಾಲೂಕಿನ ಕದಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಆಯೋಜಿಸಿದ್ದ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರವಾಸವು ತರಗತಿಗಳ ಹೊರಗೆ ಪ್ರಾಯೋಗಿಕ ಕಲಿಕೆಗೆ ಅವಕಾಶ ನೀಡುವ ಜೊತೆಗೆ ಮಕ್ಕಳಲ್ಲಿ ಕುತೂಹಲ ಮತ್ತು ವಿಮರ್ಶಾತ್ಮಕ ಚಿಂತನೆ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.

ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿಗಳಿಗೆ ಕೇವಲ ಮನರಂಜನೆ ಮಾತ್ರವಲ್ಲದೆ ಕಲಿಕೆಯನ್ನು ವಿಸ್ತರಿಸುವ ಮತ್ತು ಜೀವಂತ ಪ್ರಭಾವ ಬೀರುವ ಪರಿವರ್ತನೆ ಅನುಭವ ಉಂಟಾಗುತ್ತದೆ ಎಂದರು.

ಬಿಇಒ ಎಸ್.ಬಿ.ದಯಾನಂದ ಮಾತನಾಡಿ, ಸರ್ಕಾರಿ ಶಾಲೆಯ 88 ವಿದ್ಯಾರ್ಥಿಗಳು ಎರಡು ಬಸ್ ಗಳಲ್ಲಿ ನಾಲ್ಕು ದಿನ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸ ಕಾಲದಲ್ಲಿ ಚಿತ್ರದುರ್ಗ, ಹಂಪೆ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಮುರುಡೇಶ್ವರ, ಕೊಲ್ಲೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ವಿವರಿಸಿದರು.

ಈ ವೇಳೆ ಶಿಕ್ಷಣ ಇಲಾಖೆ ಬಿ.ಆರ್.ಸಿ. ನಾಗೇಶ್, ಸಂಯೋಜಕ ರವೀಶ್, ರವಿ ಹಾಗೂ ತಾಲೂಕು ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಆರ. ಅನಂತೇಗೌಡ ಇದ್ದರು.ಎಸ್ ಟಿಜಿ ಕಾಲೇಜು ವಿದ್ಯಾರ್ಥಿಗಳಿಗೆ ಪದಕ, ನಗದು ಬಹುಮಾನ

ಪಾಂಡವಪುರ:

ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಬಿಎಸ್ಸಿ ವಿದ್ಯಾರ್ಥಿನಿ ಎಸ್.ಎಲ್.ಸಿಂಚನ ಭೌತಶಾಸ್ತ್ರ ವಿಷಯದಲ್ಲಿ 100 ಅಂಕ ಹಾಗೂ 600ಕ್ಕೆ 598 ಅಂಕ ಪಡೆದು ಶ್ರೀಮತಿ ಸಾವಿತ್ರಮ್ಮ ಮತ್ತು ಶ್ರೀ ಕೃಷ್ಣಪ್ಪಗೌಡ ನೆರಟೂರು ಚಿನ್ನದ ಪದಕ ಹಾಗೂ ದಿ.ಗ್ರಾಜುಯೇಟ್ಸ್ ಕೋ-ಅಪರೇಟಿವ್ ಬ್ಯಾಂಕಿನ ಸುವರ್ಣ ಮಹೋತ್ಸವ ಸ್ಮಾರಕ ನೆನಪಿಗಾಗಿ ದತ್ತಿ ಇಟ್ಟಿರುವ ನಗದು ಬಹುಮಾನ ಪಡೆದರು.

ಬಿಎ ವಿದ್ಯಾರ್ಥಿ ಬಿ.ವಿ.ದರ್ಶನ್ ಭಾರತೀಯ ಇತಿಹಾಸದ ಸಾಮಾನ್ಯ ಪತ್ರಿಕೆಗಳಲ್ಲಿ ಉನ್ನತ ಶೇಕಡವಾರು ಅಂಕಗಳನ್ನು ಗಳಿಸುವ ಮೂಲಕ ಪ್ರಧಾನ ಶಿರೋಮಣಿ ಟಿ.ಆನಂದ ರಾವ್, ಸಿಐಇ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವದಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿಗಳನ್ನು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ.ಪಿ.ಶಿವರಾಜು, ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ ನಾಯ್ಡು ಅಭಿನಂದಿಸಿದ್ದಾರೆ.