ನಾಯಕತ್ವ ಗುಣ ವೃದ್ಧಿಗೆ ಶಾಲಾ ಸಂಸತ್ತು ಸಹಕಾರಿ: ಎನ್.ಇಂದಿರಮ್ಮ

| Published : Jun 29 2024, 12:33 AM IST

ನಾಯಕತ್ವ ಗುಣ ವೃದ್ಧಿಗೆ ಶಾಲಾ ಸಂಸತ್ತು ಸಹಕಾರಿ: ಎನ್.ಇಂದಿರಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸರ್ಕಾರಿ ಮಾದರಿ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಸಂಸತ್ತು ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024- 25ನೇ ಸಾಲಿನ ವಿದ್ಯಾರ್ಥಿಗಳಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸಲು ಮೊಬೈಲ್ ಆ್ಯಪ್ ಇವಿಎಂ ಅಪ್ಲಿಕೇಶನ್ ಬಳಸಿ ಶುಕ್ರವಾರ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ ವಿನೂತವಾಗಿ ನಡೆಸಲಾಯಿತು.

ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಹಿಂತೆಗೆದುಕೊಳ್ಳುವಿಕೆ, ಚುನಾವಣಾ ಪ್ರಚಾರ, ಚುನಾವಣೆ, ಮತ ಎಣಿಕೆ ಸೇರಿ ಪ್ರತಿಯೊಂದಕ್ಕೂ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರ ತುಂಬಿ ₹20 ಠೇವಣಿ ಭರಿಸಿ ಮುಖ್ಯ ಚುನಾವಣಾಧಿಕಾರಿ ಎನ್.ಇಂದಿರಮ್ಮಗೆ ಸಲ್ಲಿಸಿದ್ದರು.

ಮೊದಲ ಮತದಾನದ ಅಧಿಕಾರಿ ಮತದಾರರ ಗುರುತು ದಾಖಲಿಸಿದರೆ, 2ನೇ ಅಧಿಕಾರಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಿದರು. ಮತ್ತೊಬ್ಬ ಅಧಿಕಾರಿ ಮತದಾರರ ನೋಂದಣಿ ಪುಸ್ತಕದಲ್ಲಿ ಸಹಿ ಪಡೆದು ಮತ ಚಲಾಯಿಸಲು ಅನುವು ಮಾಡಿಕೊಟ್ಟರು. ಸಂಸದೀಯ ಮಾದರಿಯಲ್ಲಿ ಮೊಬೈಲ್ ಆ್ಯಪ್ ಇವಿಎಂ ತಂತ್ರಜ್ಞಾನ ಬಳಸಿ ಪ್ರತ್ಯೇಕ ವಿಭಾಗದಲ್ಲಿ ಇರಿಸಲಾಗಿದ್ದ ಬ್ಯಾಲೆಟ್ ಯೂನಿಟ್‍ನಲ್ಲಿ ಮಕ್ಕಳು ತಮ್ಮ ಆಯ್ಕೆ ಅಭ್ಯರ್ಥಿ ಎದುರಿನ ನೀಲಿ ಗುಂಡಿ ಒತ್ತಿ ಮತ ಚಲಾಯಿಸಿದರು.

ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಸಲಾಯಿತು. 5ನೇ ತರಗತಿ ಐವರು ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಇಬ್ಬರು ವಿಜೇತರಾದರು. ಆರನೇ ತರಗತಿಯಲ್ಲಿ ಎಂಟು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರೆ ನಾಲ್ವರು ಆಯ್ಕೆಯಾದರು. ಏಳನೇ ತರಗತಿಯಲ್ಲಿ 8 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ನಾಲ್ವರು ಜಯ ಸಾಧಿಸಿದರು. ಚುನಾವಣೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ಋತ್ವಿಕ್, ಉಪನಾಯಕಿಯಾಗಿ ಗೀತಾ ಆಯ್ಕೆಯಾದರು. ಶಾಲಾ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಹಿರಿಯ ಮುಖ್ಯಶಿಕ್ಷಕಿ ಎನ್.ಇಂದಿರಮ್ಮ, ಪ್ರಜಾಪ್ರಭುತ್ವದ ಪ್ರಮುಖ ಭಾಗವಾಗಿರುವ ಚುನಾವಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ನಾಯಕತ್ವ ಗುಣ ಬೆಳೆಸುವ ದಿಸೆಯಲ್ಲಿ ಶಾಲಾ ಸಂಸತ್ತು ಸಹಕಾರಿಯಾಗಿದೆ. ಪಠ್ಯದಲ್ಲಿ ಚುನಾವಣೆ ಪ್ರಕ್ರಿಯೆ ಕುರಿತು ಓದುವುದಕ್ಕಿಂತ ಇಂದು ಪ್ರಾತ್ಯಕ್ಷಿಕವಾಗಿ ವಿದ್ಯಾರ್ಥಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಭವಿಷ್ಯತ್ತಿನಲ್ಲಿ ಎದುರಿಸುವ ಚುನಾವಣೆಗಳ ಬಗ್ಗೆ ಅರಿವು ಮೂಡಿಸಿದಂತಾಗಿದೆ ಎಂದು ಹೇಳಿದರು.

ಎಸ್.ಡಿಎಂಸಿ ಅಧ್ಯಕ್ಷರಾದ ಸುಮಲತಾ, ಸದಸ್ಯರಾದ ವಾಣಿಶ್ರೀ, ಎನ್.ಮಾರುತಿ, ಶಿಕ್ಷಕರಾದ ಎಂ.ವಿ.ಯತೀಶ್, ಎಚ್.ಟಿ.ಮಂಜುಳಮ್ಮ, ಎನ್.ಸುಮಿತ್ರ, ಡಿ.ಕೃಷ್ಣಾರೆಡ್ಡಿ, ಜಿ.ಗಾಯಿತ್ರಿದೇವಿ, ಕೆ.ಎಲ್ ಉಷಾ, ಬಿ.ಎಂ.ಶಿಲ್ಪಾ, ಬಿ.ಕೆ.ಸುಮಾ, ಎಚ್.ಮಂಜುನಾಥ, ಜಿ.ಪಿ.ಚಂದನ ಉಪಸ್ಥಿತರಿದ್ದರು.