ಹಿರೇವಂಕಲಕುಂಟಾದಲ್ಲಿ ಶಾಲಾ ಸಂಸತ್ ಚುನಾವಣೆ

| Published : Jul 20 2025, 01:22 AM IST

ಹಿರೇವಂಕಲಕುಂಟಾದಲ್ಲಿ ಶಾಲಾ ಸಂಸತ್ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಇವಿಎಂ ಮುಖಾಂತರ ನಡೆಯುವ ಸಾರ್ವತ್ರಿಕ ಚುನಾವಣೆ ರೀತಿಯಲ್ಲಿಯೇ ಮೊಬೈಲ್‌ನಲ್ಲಿ ವೋಟರ್ ಮಷೀನ್ ಆಪ್ ಮೂಲಕ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು.

ಯಲಬುರ್ಗಾ:

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ (ಪ್ರೌಢ ವಿಭಾಗ) ಕಾಲೇಜಿನಲ್ಲಿ ಮತದಾರರ ಸಾಕ್ಷರತಾ ಕ್ಲಬ್ (ಇಎಲ್‌ಸಿ) ವತಿಯಿಂದ ಶುಕ್ರವಾರ ೨೦೨೫-೨೬ನೇ ಸಾಲಿನ ಶಾಲಾ ಸಂಸತ್ ಚುನಾವಣೆ ನಡೆಯಿತು.

ಶಾಲಾ ಸಂಸತ್ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ವಾಪಸ್ ಪಡೆಯುವುದು, ಚುನಾವಣಾ ಪ್ರಚಾರ, ಮತದಾನ, ಮತ ಎಣಿಕೆ ಮತ್ತು ಫಲಿತಾಂಶ ಪ್ರಕ್ರಿಯೆ ಸಿಬ್ಬಂದಿ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.

ಇವಿಎಂ ಮುಖಾಂತರ ನಡೆಯುವ ಸಾರ್ವತ್ರಿಕ ಚುನಾವಣೆ ರೀತಿಯಲ್ಲಿಯೇ ಮೊಬೈಲ್‌ನಲ್ಲಿ ವೋಟರ್ ಮಷೀನ್ ಆಪ್ ಮೂಲಕ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ೮ರಿಂದ ೧೦ನೇ ತರಗತಿಯ ೯ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವರ್ಗ ಪ್ರತಿನಿಧಿ ಹಾಗೂ ಶಾಲಾ ಪ್ರತಿನಿಧಿಗೆ ತಲಾ ಒಂದು ಮತ ಚಲಾಯಿಸಿ, ಅಭ್ಯರ್ಥಿಗಳ ಆಯ್ಕೆ ಮಾಡಿದರು. ಶಾಲಾ ಸಿಬ್ಬಂದಿ ಸಹ ವಿದ್ಯಾರ್ಥಿಗಳ ಜತೆ ಸೇರಿ ಉತ್ಸಾಹದಿಂದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ರೇಷನ್ ಕಾರ್ಡ್ ದಾಖಲೆಯೊಂದಿಗೆ ಮತ ಚಲಾಯಿಸಿದರು.ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಪೊಲೀಸ್ ವೇಷ ಧರಿಸಿ ಶಾಂತತೆ ಕಾಪಾಡಿದರು. ಅಂಗವಿಕಲರಿಗೆ, ಮುದುಕರಿಗೆ ವೀಲ್ಹ್‌ಚೇರ್‌ ವ್ಯವಸ್ಥೆ ಹಾಗೂ ಅಂಧ ಮತದಾರರಿಗೆ ಸಹಾಯಕರಿಂದ ಮತ ಚಲಾವಣೆ ನಡೆಯಿತು. ಶೇ. ೯೦ರಷ್ಟು ಮತದಾನವಾಯಿತು. ಬಳಿಕ ಫಲಿತಾಂಶ ಘೋಷಿಸಲಾಯಿತು. ಶಾಲಾ ಪ್ರತಿನಿಧಿಯಾಗಿ ಸಂಗಮೇಶ ಅಂಗಡಿ, ಉಪ ಪ್ರತಿನಿಧಿಯಾಗಿ ಆಂಜನೇಯ ಹಿರೇಮನಿ ಆಯ್ಕೆಯಾದರು.

ಈ ವೇಳೆ ಉಪಪ್ರಾಚಾರ್ಯ ಬಾಬುಸಾಬ್ ಲೈನದಾರ್, ನಿವೃತ್ತ ಉಪಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ, ಇಎಲ್‌ಸಿ ನೋಡಲ್ ಅಧಿಕಾರಿಯಾಗಿ ಸಮಾಜ ವಿಜ್ಞಾನ ಶಿಕ್ಷಕ ಸುಭಾಷ್ ಕೋಳೂರು, ನೋಡಲ್ ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.