ಸಾರಾಂಶ
ಕುಷ್ಟಗಿ: ಶಾಲಾ ಮಕ್ಕಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ತಿಳಿವಳಿಕೆ ಮೂಡಿಸಲು, ನಾಗರಿಕ ಪ್ರಜ್ಞೆ, ಹಕ್ಕು, ಕರ್ತವ್ಯ ಹಾಗೂ ಭವಿಷ್ಯದಲ್ಲಿ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಇಂತಹ ಶಾಲಾ ಸಂಸತ್ ಚುನಾವಣೆ ಸಹಕಾರಿ ಎಂದು ಕೆಎಎಸ್ ಅಧಿಕಾರಿ ಸಾವಿತ್ರಿ ಬಿ. ಕಡಿ ಹೇಳಿದರು.
ಪಟ್ಟಣದ ಎಸ್‌ವಿಸಿ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕರಿಗೆ ಮತದಾನದ ಹಕ್ಕು ಲಭಿಸುತ್ತದೆ. ಅರ್ಹರಾದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಇಷ್ಟದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಕಾರ್ಯ ವಿಧಾನದ ಕುರಿತಾಗಿ ಮಕ್ಕಳು ತಿಳಿದುಕೊಳ್ಳಬೇಕು ಎಂದರು.
ಶಾಲೆಯ ಪರಿಸರ ಖಾತೆಯ ಸಚಿವರ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿ ಶಾಲಾ ಆವರಣದಲ್ಲಿ ಗಿಡ ನೆಡಬೇಕು. ಪ್ರವಾಸೋದ್ಯಮ ಸಚಿವರ ಮೂಲಕ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಅವುಗಳ ಮಹತ್ವ ಅರಿಯಬೇಕು ಎಂದರು.ಶಾಲಾ ಸಂಸತ್ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ತಮ್ಮ ನಾಯಕರನ್ನು ಪ್ರಶ್ನಿಸುವ ಮನೋಬಲ, ನಾಯಕತ್ವದ ಗುಣ, ಧೈರ್ಯ, ಆತ್ಮಸ್ಥೈರ್ಯ, ವಿಶ್ವಾಸ, ಅನುಕಂಪದ ಗುಣಗಳನ್ನು ಬೆಳೆಸುತ್ತವೆ. ವ್ಯವಸ್ಥೆಯನ್ನು ಪಾರದರ್ಶಕವಾಗಿರುವಲ್ಲಿ ಸಹಾಯ ಮಾಡುತ್ತವೆ ಎಂದರು.
ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವಿಜ್ಞಾನಿ, ಗಗನಯಾತ್ರಿ, ವೈದ್ಯ, ಅಭಿಯಂತರ, ವಕೀಲ, ಶಿಕ್ಷಕ, ಅಧಿಕಾರಿ, ಕೈಗಾರಿಕೋದ್ಯಮಿ ಏನಾದರೂ ಆಗಬಹುದು. ಶಿಕ್ಷಕರು ಹಾಗೂ ಪಾಲಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ಎಂದರು.ವಿದ್ಯಾರ್ಥಿಗಳು ತಮ್ಮ ಗುರಿ ನಿಗದಿಪಡಿಸಿಕೊಳ್ಳಬೇಕು ಗುರಿ ತಲುಪಲು ಸತತವಾಗಿ ಕಠಿಣ ಪರಿಶ್ರಮ ಹಾಕಬೇಕು. ಪ್ರತಿನಿತ್ಯ ಸುಧಾರಣೆಯಾಗುತ್ತಿರಬೇಕು. ಯಾವುದೇ ಆಕರ್ಷಣೆಗಳಿಗೆ ಬಲಿಯಾಗಬಾರದು. ಶಿಕ್ಷಕರಿಗೆ ಹಾಗೂ ತಂದೆ-ತಾಯಿಯರಿಗೆ ಗೌರವ ಕೊಡಬೇಕು. ವಿನಮ್ರತೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು.
ಪ್ರಮಾಣವಚನ ಸ್ವೀಕರಿಸಿದ ಎಲ್ಲ ವಿದ್ಯಾರ್ಥಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಶಾಲೆಯ ಸುಧಾರಣೆಗೆ ಶ್ರಮವಹಿಸಬೇಕು ಎಂದರು.ಹಿರಿಯ ಶಿಕ್ಷಕ ಯೂಸುಫ್ ಬಾದಾಮಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಎಸ್‌ವಿಸಿ ಶಾಲೆಗಳ ಶೈಕ್ಷಣಿಕ ನಿರ್ದೇಶಕರಾದ ಭೀಮರಾವ್ ಕುಲಕರ್ಣಿ, ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಹಿರೇಮಠ, ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ಗುರುಪ್ರಸಾದ್ ಎಂ ಹಾಗೂ ಎಸ್‌ವಿಸಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಪ್ರತಿನಿಧಿ ಅಂಬರೀಶ ಸೇರಿದಂತೆ ಇತರರು ಹಾಜರಿದ್ದರು.