ಸಾರಾಂಶ
ಗದಗ: ದೇಶದ ಭವಿಷ್ಯ, ಅಭಿವೃದ್ಧಿಗೆ ಪೂರಕವಾಗಿ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಶಾಲೆಗಳು ಆಧುನಿಕ ದೇವಾಲಯಗಳು.ಅಲ್ಲಿ ಮಕ್ಕಳಿದ್ದಾರೆ, ನಗೆ ಇದೆ, ನೆಮ್ಮದಿ ಇದೆ, ಶಾಂತಿ ಇದೆ, ಸಂತೋಷವಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಅವರು ನಗರದ ಜ.ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2710ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಕ ಈ ದೇಶದ ಪರಮೋಚ್ಚ ಶಕ್ತಿ. ಶಿಕ್ಷಕರು ಯಾವಾಗಲೂ ಮಕ್ಕಳೊಂದಿಗೆ ಇರುವುದರಿಂದ ಅವರ ಮನಸ್ಸು ಕೂಡ ಶುಭ್ರವಾಗಿರುತ್ತದೆ. ಬಿ.ಜಿ.ಅಣ್ಣಿಗೇರಿ ಗುರುಗಳು ಶಿಕ್ಷಕ ಸಂತರಾಗಿದ್ದುಕೊಂಡು ಸಾವಿರಾರು ಹಳ್ಳಿಯ ಬಡಮಕ್ಕಳಿಗೆ ಸಹಾಯ ಮಾಡಿ ತಮ್ಮ ಜೀವನ ತ್ಯಾಗ ಮಾಡಿದರು ಎಂದರು.ಸಾವಿತ್ರಿಬಾಯಿ ಫುಲೆ ಅನೇಕ ಕಷ್ಟ, ನೋವು, ಅವಮಾನ, ಸಂಧಿಗ್ದ ಪರಿಸ್ಥಿತಿ ಸಹಿಸಿ, ಎದುರಿಸಿ ಶಾಲೆಯನ್ನು ತೆರೆದು ಶಿಕ್ಷಣ ನೀಡಿದ್ದಾರೆ. ಸಾವಿತ್ರಿಬಾಯಿ ಪುಲೆಯವರು ನಮ್ಮ ದೇಶದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಭವಿಷ್ಯದಲ್ಲಿ ಶಿಕ್ಷಕರ ಪಾತ್ರ ಕುರಿತು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಉಪನ್ಯಾಸ ನೀಡಿ, ನಾನು ಅಣ್ಣಿಗೇರಿ ಗುರುಗಳ ಶಿಷ್ಯ.ಅಣ್ಣಿಗೇರಿ ಗುರುಗಳು ತಮ್ಮ ಪಗಾರವನ್ನು ಬಡ ಮಕ್ಕಳ ಶಿಕ್ಷಣ, ಬಟ್ಟೆ, ಪುಸ್ತಕಗಳಿಗಾಗಿ ವ್ಯಯಿಸುತ್ತಿದ್ದರು. ಅತೀ ದಡ್ಡ ಹುಡುಗರನ್ನು ಆಶ್ರಮದಲ್ಲಿ ಇಟ್ಟುಕೊಂಡು ಒಳ್ಳೆಯ ವ್ಯಕ್ತಿಗಳನ್ನಾಗಿ ನಿರ್ಮಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಕಲಿಕೆ ನಿರಂತರ ಪ್ರಕ್ರಿಯೆ. ಭವಿಷ್ಯದಲ್ಲಿ ಶಿಕ್ಷಕರು ತಂತ್ರಜ್ಞಾನ ಬಳಸಿಕೊಂಡು ಅನ್ವೇಷಕರಾಗಿ ಹೊಸ ಆಲೋಚನೆಗಳೊಂದಿಗೆ ಪಾಠಬೋಧನೆ ಮಾಡಬೇಕೆಂದರು ಸಲಹೆ ನೀಡಿದರು.ಈ ವೇಳೆ ಅಧ್ಯಾಪಕ ಭೂಷಣ ಪ್ರಶಸ್ತಿಯನ್ನು ಮುಂಡರಗಿಯ ಜ. ತೋಂಟದಾರ್ಯ ಸಿಬಿಎಸ್‌ಇ ಶಾಲೆಯ ಪ್ರಾ.ಶರಣಕುಮಾರ್ ಬುಗಟಿ ಹಾಗೂ ರೋಣದ ಶರಣ ಬಸವೇಶ್ವರ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯನಿ ಗಂಗೂಬಾಯಿ ದಿವಟರ ಅವರಿಗೆ ಪ್ರದಾನ ಮಾಡಲಾಯಿತು. ಡಿ.ಸಿ.ಪಾವಟೆ ಬಿಇಡಿ. ಕಾಲೇಜಿನ ವಿದ್ಯಾರ್ಥಿ ಶೇ. 91.50% ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಹೀನಾ ಕೌಸರ್ ಮಾಳೆಕೊಪ್ಪ ಅವರನ್ನು ಸನ್ಮಾನಿಸಲಾಯಿತು.
ದಾಸೋಹ ಸೇವೆಯನ್ನು ಬಿ.ಜಿ.ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ವಹಿಸಿದ್ದರು. ಧರ್ಮಗ್ರಂಥ ಪಠಣವನ್ನು ಪ್ರತೀಕ್ಷಾ.ಎಂ. ತುಕ್ಕಪ್ಪನವರ ಹಾಗೂ ವಚನ ಚಿಂತನವನ್ನು ಪ್ರಣವಿ.ಬಿ. ಅಣ್ಣಿಗೇರಿ ಮಾಡಿದರು. ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೆರವೇರಿಸಿದರು.ಮಾಜಿ ಸಚಿವ ಎಸ್.ಎಸ್. ಪಾಟೀಲ, ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಇದ್ದರು. ಪ್ರೊ. ಶಿವಾನಂದ ಹೊಂಬಳ ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು.