ಸಾರಾಂಶ
ಹಿಂದೂಗಳ ಪವಿತ್ರ ದಸರಾ ಹಬ್ಬದ ರಜೆಯಲ್ಲಿ ತರಗತಿ, ಪರೀಕ್ಷೆ ನಡೆಸುತ್ತಿರುವ ರಾಮನಗರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬೀಗ ಜಡಿಯುವುದಾಗಿ ಶ್ರೀ ರಾಮಸೇನೆ ಎಚ್ಚರಿಕೆ ನೀಡಿದೆ. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್ ಗೌಡ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
-ರಜೆಯ ಗೊಂದಲ -ದಸರಾ ಹಬ್ಬಕ್ಕೆ ಎಲ್ಲಾ ಶಾಲೆಗಳಿಗೆ ಕಟ್ಟುನಿಟ್ಟಿನ ರಜೆ ಘೋಷಣೆ ಮಾಡಲು ಆಗ್ರಹ
ಕನ್ನಡಪ್ರಭ ವಾರ್ತೆ ರಾಮನಗರಹಿಂದೂಗಳ ಪವಿತ್ರ ದಸರಾ ಹಬ್ಬದ ರಜೆಯಲ್ಲಿ ತರಗತಿ, ಪರೀಕ್ಷೆ ನಡೆಸುತ್ತಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬೀಗ ಜಡಿಯುವುದಾಗಿ ಶ್ರೀ ರಾಮಸೇನೆ ಎಚ್ಚರಿಕೆ ನೀಡಿದೆ.
ಈ ಸಂಬಂಧ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್ ಗೌಡ ನೇತೃತ್ವದಲ್ಲಿ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಶ್ರೀ ರಾಮ ಸೇನೆ ಪದಾಧಿಕಾರಿಗಳು, ದಸರಾ ಹಬ್ಬದ ರಜೆಯಲ್ಲಿಯೂ ತರಗತಿ ಮತ್ತು ಪರೀಕ್ಷೆ ನಡೆಸುವ ಮೂಲಕ ಕೆಲ ಶಾಲೆಗಳು ಹಿಂದೂ ಧರ್ಮಾಚರಣೆಗೆ ಬಾಧೆ ತರುತ್ತಿವೆ. ಇದನ್ನು ಕಟುವಾಗಿ ವಿರೋಧಿಸಿ ಶಾಲೆಗಳಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದರು.ಹಲವಾರು ವರ್ಷಗಳಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳು ದಸರಾ ನಿಮಿತ್ತ ರಜೆ ನೀಡುವುದು ಪರಂಪರೆಯನ್ನು ಇತ್ತೀಚಿಗೆ ಉದ್ದೇಶಪೂರ್ವಕವಾಗಿ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸದಂತೆ ತಡೆಯಲು ಮಾಡಿರುವ ಷಡ್ಯಂತ್ರ ಅನ್ನುವ ಅಭಿಪ್ರಾಯ ಇಡೀ ಹಿಂದೂ ಸಮಾಜ, ಪಾಲಕರು, ಪೋಷಕರು ಹಾಗೂ ಮಕ್ಕಳಲ್ಲಿ ಮೂಡುತ್ತಿದೆ.
ಸಾಕಷ್ಟು ಪೋಷಕರು ಇದರ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಸತ್ಯ ಸಹ ಅನ್ನಿಸುತ್ತಿದೆ. ಇಂತಹ ಧರ್ಮ ವಿರೋಧಿ ನೀತಿ ಪ್ರಜಾಪ್ರಭುತ್ವ, ಸಂವಿಧಾನದತ್ತ ಅಧಿಕಾರದ ಹನನವಾಗಿದೆ. ಮಕ್ಕಳು ಸ್ವಚ್ಛಂದವಾಗಿ ಹಬ್ಬದ ಧಾರ್ಮಿಕ, ಅಧ್ಯಾತ್ಮಿಕ, ಕೌಟುಂಬಿಕ, ಸಾಂಸ್ಕೃತೀಕ ಮೌಲ್ಯ, ಸಂತಸ ಅನುಭವಿಸಲು ಈ ಕುನೀತಿ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಕ್ಷಣವೇ ಎಲ್ಲ ಶಾಲೆಗಳಿಗೆ ಕಟ್ಟುನಿಟ್ಟಿನ ರಜೆ ಘೋಷಣೆ ಮಾಡಬೇಕು. ಯಾರಾದರು ಉಲ್ಲಂಘಿಸಿದರೆ ಮುಲಾಜಿಲ್ಲದೆ ಶಾಲೆಯ ಅನುಮತಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಕ್ರಿಸ್ ಮಸ್ ರಜೆ ಎಲ್ಲ ಶಾಲೆಗಳಿಗೆ ಕೊಡುವ ಉದ್ದೇಶ ಏನು. ಕ್ರಿಶ್ಚಿಯನ್ ಶಾಲೆಯಲ್ಲಿ ಶೇ.95ರಷ್ಟು ಹಿಂದೂ ಮಕ್ಕಳು ಓದುತ್ತಿದ್ದು, ಏಕೆ 10 ದಿನಗಳ ರಜೆ ನೀಡಬೇಕು. ಇದು ನಿಜಕ್ಕೂ ಧರ್ಮದ ವಿಷಯದಲ್ಲಿ ದೊಡ್ಡ ಘೋರ ಪಿತೂರಿ ನಡೆಯುತ್ತಿದ್ದು ತಕ್ಷಣವೇ ದಸರಾ ರಜೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಹಾಗೂ ಕ್ರಿಸ್ ಮಸ್ ರಜೆ ರದ್ದುಗೊಳಿಸಬೇಕು. ಇಲ್ಲದಿದ್ದರೆ ಯಾವ ಶಾಲೆಗಳು ಪ್ರಾರಂಭ ಇರುತ್ತವೆಯೋ ಅವುಗಳಿಗೆ ಬೀಗ ಜಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಅರುಣ್, ಕಾರ್ಯದರ್ಶಿ ನವೀನ್, ಕಾರ್ಯಕರ್ತರಾದ ರಾಜೇಶ್ , ರಾಮಕೃಷ್ಣ ನಾಯಕ , ವಕೀಲರಾದ ವಿನೋದ್ ಕುಮಾರ್ ಮತ್ತಿತರರು ಹಾಜರಿದ್ದರು.