ಕುಕನೂರು: ಬೇಸಿಗೆ ರಜೆ ಮುಗಿಸಿ ಮಕ್ಕಳು ಮೇ 29ರ ಶುಕ್ರವಾರ ಶಾಲೆಯತ್ತ ಹೆಜ್ಜೆ ಹಾಕಲಿದ್ದಾರೆ.

ಮಕ್ಕಳ ಸ್ವಾಗತಕ್ಕಾಗಿ ಶಾಲೆಗಳು ಸಿದ್ಧವಾಗಿವೆ. ಶಾಲಾ ಕೊಠಡಿ ಸ್ವಚ್ಛತೆ, ಆವರಣ ಸ್ವಚ್ಛತೆ, ಅಡುಗೆ ಕೋಣೆ ಸ್ವಚ್ಛತೆ ಸೇರಿದಂತೆ ಅಡುಗೆ ಸಾಮಗ್ರಿಗಳ ಸ್ವಚ್ಛತೆ ಸಹ ಜರುಗಿದೆ. ಇನ್ನೂ ಶಾಲಾ ಮಕ್ಕಳಿಗಾಗಿ ಪಠ್ಯ ಪುಸ್ತಕ ವಿತರಣೆಗೆ ಸಹ ಸಿದ್ಧತೆ ಜರುಗಿವೆ.

ಮಕ್ಕಳು ಶಾಲೆಗೆ ಸಂತದದಿಂದ ಬರಬೇಕು ಎಂದು ಶಿಕ್ಷಕ ವರ್ಗ ಮಕ್ಕಳ ಸ್ವಾಗಕ್ಕೆ ಮೊದಲ ದಿನವೇ ನಾನಾ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ಶಾಲೆ ಹಾಗೂ ಕಲಿಕೆ ಬಗ್ಗೆ ಆಸಕ್ತಿ ಸಹ ಇಮ್ಮಡಿ ಆಗಲಿದೆ. ಕೆಲವು ಶಾಲೆಗಳಲ್ಲಿ ತಳಿರು ತೋರಣ ಕಟ್ಟಿ ಶಾಲೆ ಶೃಂಗರಿಸಿ ಸರಸ್ವತಿ ಪೂಜೆ ಮಾಡಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಶಾಲಾರಂಭ ದಿನವೆಂದು ಸಿಹಿ ಬಿಸಿಯೂಟ ಹಾಗೂ ಸಿಹಿ ತಿನಿಸು ಹಾಗೂ ಚಾಕಲೇಟ್ ಸಹ ನೀಡಿ ಕೆಲವೆಡೆ ಸ್ವಾಗತಿಸಲಾಗುತ್ತಿದೆ.

ಪ್ರತಿ ಮಗುವು ಶಾಲಾರಂಭ ದಿನದಿಂದಲೇ ಶಾಲೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದ್ದು, ಮಕ್ಕಳು ಸಹ ಸಂತಸದಿಂದ ಶಾಲೆಗೆ ಹೋಗಲು ಸಿದ್ಧರಾಗಿದ್ದಾರೆ. ಶಾಲಾಂಗಳ ಸ್ವಚ್ಛತೆ ಸೇರಿದಂತೆ ಮಕ್ಕಳ ಸ್ವಾಗತಕ್ಕೆ ಶಾಲೆಗಳು ಸಿದ್ಧವಾಗಿ ಮಕ್ಕಳನ್ನು ಬರಮಾಡಿಕೊಳ್ಳುತ್ತಿವೆ.

ಶಾಲಾರಂಭಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರತಿ ಶಾಲೆಯಲ್ಲೂ ವಿಭಿನ್ನ ರೀತಿಯಲ್ಲಿ ಸಂತಸದಿಂದ ಮಕ್ಕಳನ್ನು ಸ್ವಾಗತಿಸಲು ಸೂಚಿಲಾಗಿದೆ. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಶಾಲಾರಂಭದ ದಿನವೇ ಮಕ್ಕಳಿಗೆ ಸಿಗಲಿದೆ. ಎಲ್ಲ ಶಿಕ್ಷಕರ ವರ್ಗ ಸಹ ಮಕ್ಕಳ ಕಲಿಕೆ ಶಾಲಾರಂಭದ ದಿನದಿಂದಲೇ ಆರಂಭಿಸಲು ಸೂಚಿಸಲಾಗಿದೆ. ಮಕ್ಕಳಿಗೆ ಶಾಲಾರಂಭ ದಿನ ಹರ್ಷ ನೀಡಲಿದೆ ಎಂದು ಯಲಬುರ್ಗಾ ಬಿಇಒ ಅಶೋಕಗೌಡ ತಿಳಿಸಿದ್ದಾರೆ.