ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಸುದೀರ್ಘ ಬೇಸಗೆ ರಜೆ ಕಳೆದು ಜಿಲ್ಲೆಯ ಮಕ್ಕಳೆಲ್ಲ ಮರಳಿ ಶಾಲೆಯತ್ತ ಹೆಜ್ಜೆ ಹಾಕುವ ದಿನ ಬಂದೇ ಬಿಟ್ಟಿದೆ. ಮೇ 31ಕ್ಕೆ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲಿದ್ದು, ಎಲ್ಲ ಮಕ್ಕಳು ತಯಾರಾಗಿ ನಿಂತಿದ್ದರೆ, ಶಾಲಾ ಶಿಕ್ಷಕರು ಶಾಲೆಗಳಲ್ಲಿ ಸರ್ವ ವ್ಯವಸ್ಥೆಗಳನ್ನು ಮಾಡಿ ಮಕ್ಕಳನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಶಾಲಾರಂಭಕ್ಕೆ ಮಳೆಯೂ ಸಾಥ್ ನೀಡುವ ನಿರೀಕ್ಷೆಯಿದೆ.
ಮೇ 29ರಂದು ಶಿಕ್ಷಕರಿಗೆ ಶಾಲೆಗೆ ಬರಲು ಇಲಾಖೆ ಸೂಚನೆ ನೀಡಲಾಗಿತ್ತು. ಶಾಲೆಗಳನ್ನು ಸ್ವಚ್ಛಗೊಳಿಸಿ, ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳು ಚೀಲ, ಕೊಡೆ, ಬುತ್ತಿ ಹೊತ್ತು ಶಾಲೆಯತ್ತ ಹೆಜ್ಜೆ ಇಡುವ ದೃಶ್ಯ ಶುಕ್ರವಾರದಿಂದ ಎಲ್ಲೆಡೆ ಕಂಡುಬರಲಿದೆ.ಖಾಸಗಿ ಶಾಲೆಗಳ ಪೈಕಿ ಅನೇಕ ಶಾಲೆಗಳಿಗೆ ಬುಧವಾರದಿಂದಲೇ ಮಕ್ಕಳು ತರಗತಿಗಳಿಗೆ ಹಾಜರಾಗಿದ್ದಾರೆ. ಮೇ 31ರಂದು ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳಲು ಶಿಕ್ಷಕರು ವಿಭಿನ್ನ ರೀತಿಯ ಸಿದ್ಧತೆ ಮಾಡಿದ್ದಾರೆ. ಕೆಲವು ಶಾಲೆಗಳಿಗೆ ಬಣ್ಣದ ಅಲಂಕಾರ ಮಾಡಲಾಗಿದ್ದರೆ, ಇನ್ನೂ ಕೆಲವೆಡೆ ಬಣ್ಣ ಬಣ್ಣದ ಬಲೂನುಗಳನ್ನು ತೂಗುಹಾಕಿ ಸಜ್ಜುಗೊಳಿಸಲಾಗಿದೆ. ಮಕ್ಕಳಿಗೆ ಮೊದಲ ದಿನ ಸಿಹಿತಿಂಡಿ ನೀಡಿ ಸ್ವಾಗತಿಸಲು ಬಹುತೇಕ ಶಾಲೆಗಳಲ್ಲಿ ಸಿದ್ಧತೆ ನಡೆದಿದೆ. ಮೊದಲ ದಿನದಿಂದಲೇ ಮಧ್ಯಾಹ್ನದ ಬಿಸಿಯೂಟ ಆರಂಭವಾಗಲಿದೆ.
ಸಮವಸ್ತ್ರ, ಪುಸ್ತಕ ವಿತರಣೆ:ಶಾಲಾರಂಭಕ್ಕೆ ಮೊದಲೇ ಜಿಲ್ಲೆಯ ಎಲ್ಲ ಶಾಲೆಯ ಶೇ.100ರಷ್ಟು ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗಿದೆ. ಪಠ್ಯಪುಸ್ತಕಗಳು ಬರುತ್ತಿದ್ದು, ಅವುಗಳ ವಿತರಣೆ ನಿತ್ಯವೂ ಮಾಡಲಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಶಿಥಿಲಗೊಂಡ ಶಾಲೆ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಶಾಲಾ ಶಿಕ್ಷಕರು ಅವರವರ ಮಟ್ಟದಲ್ಲಿ ಭಿನ್ನ ರೀತಿಯಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲು ಸರ್ವ ಸಿದ್ಧತೆ ನಡೆಸಿದ್ದಾರೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವೆಂಕಟೇಶ ಸುಬ್ರಾಯ ಪಟಾಗಾರ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.