ಜಾಗತಿಕ ಮಟ್ಟದ ಎಲ್ಲ ರೀತಿಯ ಪರಿಸರ ಸಮಸ್ಯೆಗಳಿಗೆ ವಿಜ್ಞಾನ, ತಂತ್ರಜ್ಞಾನದಿಂದ ನವೀನ ಮತ್ತು ಭರವಸೆಯುತ ಪರಿಹಾರಗಳನ್ನು ಸೂಚಿಸಿ, ಸುಸ್ಥಿರ ಭವಿಷ್ಯವನ್ನು ಕಟ್ಟಲು ಸಾಧ್ಯವಿದೆ ಎಂದು ಡಿಆರ್‌ಡಿಒ ಮಾಜಿ ನಿರ್ದೇಶಕ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಮಾಜಿ ಕಾರ್ಯದರ್ಶಿ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷ ಪದ್ಮವಿಭೂಷಣ ಡಾ.ವಾಸುದೇವ ಕೆ. ಅತ್ರೆ ಹೇಳಿದ್ದಾರೆ.

- ಪದ್ಮವಿಭೂಷಣ ಡಾ.ವಾಸುದೇವ ಕೆ. ಅತ್ರೆ ಲಿಖಿತ ಸಂದೇಶ ।

- ದಾವಿವಿ ಘಟಿಕೋತ್ಸವದಲ್ಲಿ ಭಾಷಣ ಓದಿದ ಪ್ರೊ. ಯು.ಎಂ.ಲೋಕೇಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಾಗತಿಕ ಮಟ್ಟದ ಎಲ್ಲ ರೀತಿಯ ಪರಿಸರ ಸಮಸ್ಯೆಗಳಿಗೆ ವಿಜ್ಞಾನ, ತಂತ್ರಜ್ಞಾನದಿಂದ ನವೀನ ಮತ್ತು ಭರವಸೆಯುತ ಪರಿಹಾರಗಳನ್ನು ಸೂಚಿಸಿ, ಸುಸ್ಥಿರ ಭವಿಷ್ಯವನ್ನು ಕಟ್ಟಲು ಸಾಧ್ಯವಿದೆ ಎಂದು ಡಿಆರ್‌ಡಿಒ ಮಾಜಿ ನಿರ್ದೇಶಕ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಮಾಜಿ ಕಾರ್ಯದರ್ಶಿ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷ ಪದ್ಮವಿಭೂಷಣ ಡಾ.ವಾಸುದೇವ ಕೆ. ಅತ್ರೆ ಹೇಳಿದ್ದಾರೆ.

ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಿವಿಯಲ್ಲಿ 13ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಅನಿವಾರ್ಯ ಕಾರಣಗಳಿಂದಾಗಿ ಸಾಧ್ಯವಾಗದ ಹಿನ್ನೆಲೆ ಅವರು ಅತ್ರೆ ಕಳಿಸಿದ್ದ ಲಿಖಿತ ಘಟಿಕೋತ್ಸವ ಭಾಷಣ‍ವನ್ನು ದಾವಿವಿ ಕಲಾ ನಿಕಾಯದ ಡೀನ್ ಪ್ರೊ. ಯು.ಎಂ.ಲೋಕೇಶ ಓದಿದರು.

ಪರಿಸರ ಸವಾಲುಗಳು ತೀವ್ರವಾಗಿದ್ದರೂ, ವಿಜ್ಞಾನ ಮತ್ತು ತಂತ್ರಜ್ಞಾನವು ಶಕ್ತಿಯುತ ಪರಿಹಾರ ನೀಡಬಲ್ಲದು. ತಾಂತ್ರಿಕ ನಾವೀನ್ಯಗಳ ಜೊತೆ ನಮ್ಮ ಬಳಕೆ ಮತ್ತು ಬದುಕಿನ ಮಾರ್ಗಗಳಲ್ಲಿ ಸುಸ್ಥಿರ ಬದಲಾವಣೆ, ಬಲವಾದ ರಾಜಕೀಯ ನೇತೃತ್ವ ಮತ್ತು ಜಾಗತಿಕ ಸಹಯೋಗ ಅತ್ಯಗತ್ಯ. ಸಾಮೂಹಿಕ ಬುದ್ಧಿಶಕ್ತಿ ಮತ್ತು ನಿರ್ಧಾರಗಳ ಮೇಲೆಯೇ ಭವಿಷ್ಯದ ಭೂಗ್ರಹದ ಆರೋಗ್ಯ ಅವಲಂಬಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ವೃದ್ಧಿಯಾದಂತೆ ಪ್ರಕೃತಿಯೊಂದಿಗೆ ಹೊಂದಾಣಿಕೆ ಬದುಕು ದೂರವಾಗಿದೆ. ಹವಾಮಾನ ಬದಲಾವಣೆ, ಜೀವವೈವಿಧ್ಯ ಹಾನಿ, ಮಾಲಿನ್ಯ ಮತ್ತು ಸಂಪನ್ಮೂಲ ದುರ್ಬಳಕೆಯಂತಹ ಜಟಿಲ ಜಾಗತಿಕ ಪರಿಸರ ಸವಾಲುಗಳು ಮಾನವ ಕುಲದ ಮುಂದಿರುವ ಅತೀ ದೊಡ್ಡ ಬಿಕ್ಕಟ್ಟಾಗಿವೆ. ಆದರೆ ಇದರಿಂದ ನಿರಾಶರಾಗಬೇಕಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳೇ ಪರಿಹಾರ ಮಾರ್ಗವನ್ನೂ ಸೂಚಿಸುತ್ತದೆ ಎಂದಿದ್ದಾರೆ.

ಹವಾಮಾನ ಬದಲಾವಣೆ ಎದುರಿಸಲು, ನವೀಕರಿಸಬಹುದಾದ ಶಕ್ತಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಸೌರಶಕ್ತಿ ಮತ್ತು ಪವನಶಕ್ತಿಯ ದಕ್ಷತೆ ಹೆಚ್ಚಾಗುತ್ತಿದ್ದು, ಉತ್ಪಾದನಾ ವೆಚ್ಚ ಕಡಿಮೆಯಾಗುತ್ತಿದೆ. ಶಕ್ತಿ ಸಂಗ್ರಹಣಾ ಪರಿಹಾರ (ಬ್ಯಾಟರಿ ಸ್ಟೋರೇಜ್)ಗಳಾದ ಮುಖ್ಯ ತಡೆಯಾಗಿದ್ದ ಆಂತರಿಕತೆ ಸಮಸ್ಯೆ ನಿವಾರಿಸುತ್ತಿವೆ. ಇಂಗಾಲ ಕಾರ್ಬನ್ ಸೆರೆಹಿಡಿಯುವಿಕೆ, ಉಪಯೋಗ ಮತ್ತು ಸಂಗ್ರಹಣಾ (ಸಿಸಿಯುಎಸ್) ತಂತ್ರಜ್ಞಾನಗಳು, ಕಾರ್ಖಾನೆಗಳು ಮತ್ತು ವಿದ್ಯುತ್ ಕೇಂದ್ರಗಳಿಂದ ಹೊರಬೀಳುವ ಇಂಗಾಲದ ಡೈಆಕ್ಸೈಡ್ ವಾತಾವರಣವನ್ನು ತಲುಪುವ ಮುನ್ನ ಹಿಡಿದು ಸಂಗ್ರಹಿಸುವ ಮಾರ್ಗ ಹೊಂದಿವೆ ಎಂದು ಮಾಹಿತಿ ನೀಡಿದ್ದಾರೆ.

ನೀರಿನ ಕೊರತೆ ಮತ್ತು ಕೃಷಿ ಸವಾಲುಗಳನ್ನು ಪರಿಹರಿಸಲು, ಹನಿ ಮತ್ತು ತುಂತುರು ನೀರಾವರಿ, ನಿಖರವಾದ ಕೃಷಿಗೆ ಎಐ-ಚಾಲಿತ ವ್ಯವಸ್ಥೆ ಮತ್ತು ಬರ ಪೀಡಿತ ಪ್ರದೇಶಗಳ ಸುಸ್ಥಿರ ಬೆಳೆಗಳ ಸಂಶೋಧನೆ ಮುಂಚೂಣಿಯಲ್ಲಿವೆ. ವಾಯು ಮತ್ತು ನೀರಿನ ಮಾಲಿನ್ಯ ನಿಯಂತ್ರಿಸಲು, ಜೈವಿಕ-ಆಧಾರಿತ ಶೋಧಕಗಳು, ವಿಷಕಾರಿ ರಾಸಾಯನಿಕಗಳನ್ನು ವಿಘಟನೆ ಮಾಡುವ ನ್ಯಾನೋ ತಂತ್ರಜ್ಞಾನ ಮತ್ತು ವಾಹನಗಳಿಂದ ಬರುವ ಹೊಗೆ ನಿಯಂತ್ರಣದ ಸುಧಾರಿತ ತಂತ್ರಗಳು ಬಳಕೆಯಾಗುತ್ತಿವೆ ಎಂದು ತಿಳಿಸಿದ್ದಾರೆ.

ಮುಂದಿನ ಹೆಜ್ಜೆಯಾಗಿ, ವ್ಯರ್ಥ ನಿರ್ವಹಣೆ ಮತ್ತು ವೃತ್ತಾಕಾರದ ಆರ್ಥಿಕತೆ (ಸರ್ಕ್ಯುಲರ್ ಇಕಾನಮಿ) ಗಮನ ಪಡೆದಿದೆ. ಪ್ಲಾಸ್ಟಿಕ್ ವ್ಯರ್ಥವನ್ನು ಪುನರ್ ನಿರ್ಮಾಣ ಮಾಡುವ ರಾಸಾಯನಿಕ ಮರುಬಳಕೆ ಪ್ರಕ್ರಿಯೆ, ಕೃಷಿ ಮತ್ತು ಕೈಗಾರಿಕಾ ವ್ಯರ್ಥದಿಂದ ಜೈವಿಕ ಇಂಧನ ತಯಾರಿಕೆ, ಮತ್ತು ಕಸದ ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೊಬೋಟಿಕ್ಸ್ ಬಳಕೆ ವೇಗಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾನವ ಯುಗದ ಪ್ರಸ್ತುತ ಸಂದರ್ಭದಲ್ಲಿ ನೈಸರ್ಗಿಕ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಯೋಜನೆಗಳೇ ಅಡಿಪಾಯವಾಗಿವೆ. ಮಾನವ ನಿರ್ಧಾರಿತ ಈ ಯೋಜನೆಗಳಿಗೆ ತಾಂತ್ರಿಕ ನಾವೀನ್ಯತೆಯು ಅಸ್ತ್ರವಾಗಬಹುದು. ಅವು ವೇಗವಾಗಿ, ವಿಶ್ವವ್ಯಾಪಿಯಾಗಿ ಅಳವಡಿಸಿಕೊಳ್ಳುತ್ತಿವೆ. ಸುಸ್ಥಿರ ಭವಿಷ್ಯಕ್ಕೆ ಅಗತ್ಯವಿರುವುದು ತಂತ್ರಜ್ಞಾನದ ಸುಧಾರಣೆ, ಬಲವಾದ ರಾಜಕೀಯ ಸಂಕಲ್ಪ ಮತ್ತು ಸಾರ್ವಜನಿಕ ಭಾಗವಹಿಸುವಿಕೆಗಳ ಸಮನ್ವಯವು ಈ ಸಂದರ್ಭದ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಸೌರ ಮತ್ತು ಪವನಶಕ್ತಿ ತಂತ್ರಜ್ಞಾನದಲ್ಲಿನ ಪ್ರಗತಿ ಅದ್ಭುತವಾಗಿದೆ. ಸೌರ ಫೋಟೋವೋಲ್ಟೇಕ್ ಫಲಕಗಳು ಹೆಚ್ಚು ಕಾರ್ಯಕ್ಷಮ ಮತ್ತು ಅಗ್ಗವಾಗಿ ದೊರೆಯುತ್ತಿವೆ. ಕಡಲ ತೀರದಿಂದ ದೂರದಲ್ಲಿ ಬೀಸುವ ಗಾಳಿಯ ಶಕ್ತಿಯನ್ನು ಹಿಡಿಯಲು ತೇಲುವ ಗಾಳಿ ಯಂತ್ರಗಳಂತಹ ನಾವೀನ್ಯತೆಗಳು ಮುಂಬರುವ ದಶಕಗಳಲ್ಲಿ ಶುದ್ಧ ಶಕ್ತಿಯನ್ನು ದೊರಕಿಸಿಕೊಡಬಲ್ಲವು. ಇದರ ಜೊತೆಗೆ, ಬ್ಯಾಟರಿ ಸಂಗ್ರಹ ತಂತ್ರಜ್ಞಾನದಲ್ಲಿನ ಸುಧಾರಣೆಗಳು ಪವನ ಮತ್ತು ಸೌರಶಕ್ತಿಯ ಅಂತರವನ್ನು ತುಂಬಲು ಸಹಾಯ ಮಾಡುತ್ತಿವೆ ಎಂದು ವಿವರಿಸಿದ್ದಾರೆ.

ವೈಜ್ಞಾನಿಕ ಸಂಶೋಧನೆಗಳು ಮಾನವನ ಕ್ರಿಯಾಕಲಾಪಗಳೇ ಪರಿಸರ ಬದಲಾವಣೆಗಳ ಹಿನ್ನೆಲೆಯಲ್ಲಿವೆ ಎಂಬುದು ಎಲ್ಲರಿಗೂ ಗೊತ್ತು. ಇವು ಇಂದು ಮಾನವಕುಲದ ಅಸ್ತಿತ್ವಕ್ಕೇ ಬೆದರಿಕೆಯಾಗಿ ನಿಂತಿವೆ. ಈ ತಂತ್ರಜ್ಞಾನಗಳನ್ನು ವ್ಯಾಪಕ ಮತ್ತು ಸುಲಭ ವರ್ಗೀಯ ಪ್ರಮಾಣದಲ್ಲಿ ಒದಗಿಸುವುದು, ಅವುಗಳಿಂದ ಹೊಮ್ಮುವ ಹೊಸ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ನಿರ್ವಹಿಸುವುದು ಅಗತ್ಯವಾಗಿದೆ ಎಂದು ಡಾ.ಅತ್ರೆ ತಮ್ಮ ಘಟಿಕೋತ್ಸವ ಭಾಷಣದ ಸಂದೇಶದಲ್ಲಿ ತಿಳಿಸಿದ್ದಾರೆ.

- - -

(ಫೋಟೋ: )