ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಸ್ತು ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡುವುದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಅರಳಿಸಲು ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಸಂಯೋಜಕರಾದ ರವಿಕುಮಾರ್ ತಿಳಿಸಿದರು.ಪಟ್ಟಣದ ಕುವೆಂಪು ನಗರದಲ್ಲಿರುವ ಯುನೈಟೆಡ್ ಅಕಾಡೆಮಿಯ ಶಾಲೆಯಲ್ಲಿ ಏರ್ಪಡಿಸಿದ್ದ ೨೩-೨4ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗುತ್ತಿದ್ದು ಪೋಷಕರು ತಮ್ಮ ಮಕ್ಕಳಿಗೆ ವಿಜ್ಞಾನದ ಬಗ್ಗೆ ಹೆಚ್ಷಿನ ರೀತಿಯಲ್ಲಿ ಪ್ರೋತ್ಸಾಹಿಸಬೇಕು ಎಂದರು.
ಗುರುಕುಲ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಎಂ ಡಿ ದಿನೇಶ್ ಮಾತನಾಡಿ, ಮಕ್ಕಳಲ್ಲಿರುವ ಕ್ರಿಯಾಶೀಲತೆ ಹೊರಹೊಮ್ಮಲು ಇಂತಹ ಚಟುವಟಿಕೆಗಳು ಸಹಾಯವಾಗುತ್ತವೆ. ವಿದ್ಯಾರ್ಥಿಗಳು ಸ್ವಯಂ ಆಸಕ್ತಿ ಮತ್ತು ಪ್ರಯತ್ನದಿಂದ ಹೊಸ ಹೊಸ ವಿಜ್ಞಾನದ ಪರಿಕರ ಸಿದ್ಧಪಡಿಸಲು ಪ್ರತಿಭೆಯೇ ಕಾರಣ ಎಂದ ಅವರು , ಪ್ರತಿವರ್ಷದಂತೆ ಈ ವರ್ಷವೂ ಸಹ ನಮ್ಮ ಶಾಲೆಯಲ್ಲಿ ವಿಶೇಷವಾದ ವಿಜ್ಞಾನ ಪ್ರದರ್ಶನ ಏರ್ಪಡಿಸಿದ್ದೇವೆ. ಆದರೆ ಪೋಷಕರು ಕೇವಲ ಇತರೆ ಮಕ್ಕಳು ಮಾಡಿರುವ ವಸ್ತುಪ್ರದರ್ಶನ ನೋಡುವುದಲ್ಲದೆ ತಮ್ಮ ಮಕ್ಕಳಿಗೂ ಸಹ ಈ ವಿಜ್ಞಾನದ ಕಲೆ ಪ್ರೋತ್ಸಾಹಿಸಿದಾಗ ಅವರಲ್ಲಿರುವ ಕ್ರಿಯಾಶೀಲತೆ ಬೆಳಕಿಗೆ ಬರುತ್ತದೆ. ಮುಂದಿನ ವರ್ಷದಿಂದ ಎಲ್ ಕೆ ಜಿ ತರಗತಿಯಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ತೋರಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗುತ್ತದೆ ಎಂದರು.ಇದೇ ವೇಳೆ ವಿದ್ಯಾರ್ಥಿಗಳು ವಿಶೇಷವಾದ ಮಾದರಿಗಳನ್ನು ತಯಾರಿಸಿದ್ದು ಅದರಲ್ಲಿ ಬಹುಮುಖ್ಯವಾಗಿ ಮಳೆನೀರು ಕೊಯ್ಲು, ನಾನಾ ರೀತಿಯ ಕೃಷಿ ಪರಿಕರಗಳು ,ರಸ್ತೆ ಸುರಕ್ಷತೆ, ವಾಯುಮಾಲಿನ್ಯದ ಬಗ್ಗೆ ಹತ್ತು ಹಲವಾರು ರೀತಿಯ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಇಸಿಒ ಮಂಜುನಾಥ್, ಗುರುಕುಲ ಎಜುಕೇಶನ್ ಟ್ರಸ್ಟ್‌ನ ಖಜಾಂಚಿ ಲೋಕೇಶ್, ಪ್ರಾಂಶುಪಾಲ ರಘುರಾಮ್, ಪ್ರೌಢಶಾಲಾ ಮುಖ್ಯಶಿಕ್ಷಕಿ ದೀಪಾ ಇತರರು ಹಾಜರಿದ್ದರು.