ಸಾರಾಂಶ
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳು ಶಿಕ್ಷಕರ ಮತ್ತು ಪೋಷಕರ ಗಮನ ಸೆಳೆದವು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ಸಮಾಜ ಸೇವಕ ಆರ್.ಟಿ.ಒ ಮಲ್ಲಿಕಾರ್ಜುನ್ ಹೇಳಿದರು.ತಾಲೂಕಿನ ಹೇಮಗಿರಿಯ ಬಿಜಿಎಸ್ ಶಾಖಾಮಠದ ಹೇಮಗಿರಿ ಬಿಜಿಎಸ್ ಎಜುಕೇಶನ್ ಸೆಂಟರ್ ಶಾಲಾ ಆವರಣದಲ್ಲಿ, ಮಕ್ಕಳಿಂದ ನಡೆದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ. ವಿಜ್ಞಾನ ಎಂದರೆ ಒಂದು ಸಂಜೀವಿನಿಯಂತೆ ಬದುಕಿನಲ್ಲಿ ನಮಗೆ ಜ್ಞಾನ ಹಾಗೂ ಸರಿಯಾದ ಪ್ರಜ್ಞೆ ಬರಬೇಕೆಂದರೆ ವಿಜ್ಞಾನದ ಅವಶ್ಯಕತೆ ಇದೆ ಎಂದರು.ವಿಜ್ಞಾನವು ನಮ್ಮಲ್ಲಿರುವ ಅಂಧಕಾರವನ್ನು ತೊಲಗಿಸುತ್ತದೆ. ಸಮಾಜವನ್ನು ಉತ್ತಮ ರೀತಿಯಲ್ಲಿ ನಡೆಸಲು ಅವಕಾಶ ಮಾಡಿಕೊಡುತ್ತದೆ. ಮಕ್ಕಳಲ್ಲಿ ಮೂಢನಂಬಿಕೆ ತೊಲಗಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಬಿಜಿಎಸ್ ಶಾಲೆ ಎಂದರೆ ವಿಶೇಷ ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಕಣಜ. ಇಂದಿನ ಯುಗವನ್ನು ಜ್ಞಾನದ ಯುಗ ವಿಜ್ಞಾನದ ಯುಗ ಎಂದು ಹೇಳಬಹುದು. ಮಕ್ಕಳಿಗೆ ಅನ್ವೇಷಣೆ, ಸಂಶೋಧನೆ ಹಾಗೂ ಸೃಜನಾತ್ಮಕ ಮನೋಧೋರಣೆಯನ್ನು ಬೆಳೆಸಲು ಇಂತಹ ವಿಜ್ಞಾನ ವಸ್ತು ಪ್ರದರ್ಶನ ಅನುಕೂಲವಾಗಿದೆ ಎಂದು ಹೇಳಿದರು.ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳು ಶಿಕ್ಷಕರ ಮತ್ತು ಪೋಷಕರ ಗಮನ ಸೆಳೆದವು.
ಈ ವೇಳೆ ಹೇಮಗಿರಿ ಬಿಜಿಎಸ್ ಶಾಲಾ ಪ್ರಾಂಶುಪಾಲ ಆನಂದ್, ಪುನೀತ್, ಮುಖ್ಯ ಶಿಕ್ಷಕ ಜಯಶೀಲ ಸೇರಿದಂತೆ ಶಾಲಾ ಶಿಕ್ಷಕ ವೃಂದ ಮಕ್ಕಳ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.