ಮಕ್ಕಳ ವಿಕಸನಕ್ಕೆವಿಜ್ಞಾನ ವಸ್ತು ಪ್ರದರ್ಶನಗಳು ಸಹಕಾರಿ

| Published : Oct 19 2025, 01:00 AM IST

ಸಾರಾಂಶ

ದಾಬಸ್‍ಪೇಟೆ: ವಿಜ್ಞಾನ ಹಾಗೂ ಇತರ ಮಾದರಿಯ ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದರಿಂದ ಮಕ್ಕಳ ಜ್ಞಾನಾಭಿವೃದ್ಧಿ ಮಟ್ಟ ಹೆಚ್ಚುತ್ತದೆ ಎಂದು ಇಸ್ರೋ ವಿಜ್ಞಾನಿ ಶಂಕರ್ ಮಾಧುಸ್ವಾಮಿ ಹೇಳಿದರು.

ದಾಬಸ್‍ಪೇಟೆ: ವಿಜ್ಞಾನ ಹಾಗೂ ಇತರ ಮಾದರಿಯ ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದರಿಂದ ಮಕ್ಕಳ ಜ್ಞಾನಾಭಿವೃದ್ಧಿ ಮಟ್ಟ ಹೆಚ್ಚುತ್ತದೆ ಎಂದು ಇಸ್ರೋ ವಿಜ್ಞಾನಿ ಶಂಕರ್ ಮಾಧುಸ್ವಾಮಿ ಹೇಳಿದರು.

ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಸ್ಪೆಕ್ಟ್ರಮ್-2ಕೆ25 ಶೀರ್ಷಿಕೆಯಡಿ ಆಯೋಜಿಸಿದ್ದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಗಳಲ್ಲಿ ಏರ್ಪಡಿಸುವ ವಸ್ತು ಪ್ರದರ್ಶನಗಳು ಮಕ್ಕಳ ಬುದ್ಧಿ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಹೆಚ್ಚುತ್ತಿದ್ದು ಮಕ್ಕಳು ಹಾಗೂ ಪೋಷಕರು ಇಂತಹ ವಸ್ತು ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವಸ್ತು ಪ್ರದರ್ಶನದಲ್ಲಿ ಮಕ್ಕಳು ತಾವು ತಯಾರಿಸಿಕೊಂಡು ಬಂದಿರುವ ವಿವಿಧ ಮಾದರಿಯ ವಸ್ತುಗಳ ಬಗ್ಗೆ ವಿವರ ನೀಡುತ್ತಿರುವುದನ್ನು ಕಂಡು ಸಂತೋಷವಾಯಿತು. ಶಾಲೆಯಲ್ಲಿ ಓದುವ ಮಕ್ಕಳು ಪುಸ್ತಕದ ಹುಳುವಾಗದೆ ಇತರೆ ವಿಷಯಗಳ ಬಗ್ಗೆ ಪಠ್ಯೇತರ ಚಟುವಟಿಕೆ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ. ವಸ್ತು ಪ್ರದರ್ಶನದಲ್ಲಿ ಭಾಗವಹಿಸುವಾಗ ಮಕ್ಕಳು ಹಿಂಜರಿಕೆ ಬಿಟ್ಟು ತಮಗೆ ತೋಚಿದ ವಿಷಯಗಳ ಬಗ್ಗೆ ಮಾದರಿ ಮಾಡಿಕೊಂಡು ಆಸಕ್ತಿಯಿಂದ ಭಾಗವಹಿಸಬೇಕು ಎಂದು ಹೇಳಿದರು.

ಶಾಲಾ ಸಂಸ್ಥಾಪಕ ಅಧ್ಯಕ್ಷ ಅಂಚೆಮನೆ ರಾಜಶೇಖರ್ ಮಾತನಾಡಿ, ಪ್ರತಿ ವರ್ಷದಂತೆ ನಮ್ಮ ಶಾಲೆಯಲ್ಲಿ ವಿವಿಧ ವಿಷಯಗಳ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ ಹಾಗೂ ವಿವಿಧ ಮಾದರಿಯ ತಂತ್ರಜ್ಞಾನ ವಸ್ತುಗಳ ಬಗ್ಗೆ ಪ್ರತ್ಯೇಕ ವಿಭಾಗ ಆರಂಭಿಸಿ ನುರಿತ ತಂತ್ರಜ್ಞರಿಂದ ತಳಪಾಯದಿಂದಲೇ ಮಕ್ಕಳಿಗೆ ಅರಿವು ಮೂಡಿಸಲು ಯೋಜನೆ ರೂಪಿಸಲಾಗಿದೆ ಎಂದರು.

ವಿದ್ಯಾರ್ಥಿಗಳಿಂದಲೇ ಮಾಡೆಲ್ ತಯಾರು:

ವಿದ್ಯಾರ್ಥಿಗಳಿಂದ ತರಗತಿಗೆ ಅನುಗುಣವಾಗಿ ವಿದ್ಯಾರ್ಥಿಗಳು ವಿವಿಧ ರೀತಿಯ ಮಾಡೆಲ್‌ಗಳನ್ನು ತಯಾರು ಮಾಡಲಾಗಿತ್ತು. ಎಲ್‌ಕೆಜಿ, ಯುಕೆಜಿಯ ಪುಟ್ಟ ಮಕ್ಕಳು ವಿವಿಧ ರೀತಿಯ ವೇಷಭೂಷಣ ಧರಿಸಿ ಗಮನ ಸೆಳೆದರು. ವಿವಿಧ ರೀತಿಯ ಪ್ರಾಣಿ-ಪಕ್ಷಿಗಳು, ತರಕಾರಿ, ಹಣ್ಣು, ಪರಿಸರ ಮಾತ್ರವಲ್ಲದೇ ಮಹಾ ವ್ಯಕ್ತಿಗಳ ವೇಷದಲ್ಲಿ ಮಕ್ಕಳು ಕಂಗೊಳಿಸುತ್ತಿದ್ದರು. ಕನ್ನಡ ನಾಡು ನುಡಿ-ಮಹನೀಯರು-ಶ್ರೇಷ್ಠ ಕವಿಗಳ ಪರಿಚಯ, ಪ್ರಾಕೃತಿಕ ಸೊಬಗು ಪರಿಚಯಿಸುವ ಸ್ಮಾರಕಗಳು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ಸ್ಥಳಗಳ ಪರಿಚಯ, ಸಂಗೀತ ವಾದ್ಯಗಳ ಪರಿಚಯ, ಸ್ವಾತಂತ್ರ ಹೋರಾಟಗಾರರ ಪರಿಚಯ, ಅರಣ್ಯ ಹಾಗೂ ಪ್ರಾಣಿ ಸಂಕುಲಗಳ ಉಳಿವು, ನೀರಿನ ಮಿತ ಬಳಕೆ ಜೊತೆಯಲ್ಲಿ ಜಲ ಮೂಲಗಳ ಸಂರಕ್ಷಣೆ, ವಿವಿಧ ರೀತಿಯ ಅರಣ್ಯಗಳ ಪರಿಚಯ ಕುರಿತಾಗಿ ಮಾಡೆಲ್ಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರುದ್ರಯ್ಯ, ವಿವೇಕಾನಂದ ವಿದ್ಯಾಮಂದಿರ ಶಾಲೆಯ ಮುಖ್ಯಸ್ಥ ವಿರುಪಾಕ್ಷಯ್ಯ, ಜ್ಞಾನಸಂಗಮ ಕಾಲೇಜಿನ ಮುಖ್ಯಸ್ಥ ಕುಮಾರಸ್ವಾಮಿ, ಮೆಡಿಟೈಡ್ ಆಸ್ಪತ್ರೆಯ ತ್ರಿನೇತ್ರ, ವಿಜಯಕುಮಾರ್, ಜಗದೀಶ್, ಶಾಲೆಯ ಕಾರ್ಯದರ್ಶಿ ಸ್ವರ್ಣಾಂಬ, ಪ್ರಾಂಶುಪಾಲರಾದ ಶಿಲ್ಪ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಪೋಟೋ 5 :

ದಾಬಸ್‍ಪೇಟೆ ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಸ್ಪೆಕ್ಟ್ರಮ್-2ಕೆ25 ಶೀರ್ಷಿಕೆಯಡಿ ಆಯೋಜಿಸಿದ್ದ ವಸ್ತು ಪ್ರದರ್ಶನಕ್ಕೆ ಇಸ್ರೋ ವಿಜ್ಞಾನಿ ಶಂಕರ್ ಮಾಧುಸ್ವಾಮಿ ಹಾಗೂ ಗಣ್ಯರು ಚಾಲನೆ ನೀಡಿದರು.