ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಮಾನವನ ಜೀವಿತಾವಧಿ ಅಧ್ಯಯನಕ್ಕೆ ಮಾತ್ರ ವಿಜ್ಞಾನ ಸೀಮಿತವಾಗಿಲ್ಲ. ಗಾಳಿ, ನೀರು, ಬೆಳಕಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ಮನುಷ್ಯನ ಜೀವಕ್ಕೂ ಮತ್ತು ಜೀವನಕ್ಕೂ ವಿಜ್ಞಾನ ಅತೀ ಅವಶ್ಯ ಎಂದು ವಿಜ್ಞಾನ ಶಿಕ್ಷಕಿ ಎ.ಎಂ. ಶೋಭಾ ತಿಳಿಸಿದರು.ತಾಲೂಕಿನ ಕದರಮಂಡಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಪ್ರಗತಿ ಮತ್ತು ಸಮಾಜದ ನಡುವಿನ ಸಂಬಂಧ ನಿರ್ಲಕ್ಷಿಸಲು ಸಾಧ್ಯವಿಲ್ಲ. ಪ್ರತಿದಿನ ಬಳಸುವ ತಂತ್ರಜ್ಞಾನಗಳ ಸೃಷ್ಟಿಗೆ ವಿಜ್ಞಾನವೇ ಕಾರಣ ಹೀಗಾಗಿ ಮಾನವ ಜನಾಂಗ ಸೇರಿದಂತೆ ನಾಗರಿಕತೆ ಮುಂದುವರೆಯಲು ಹಾಗೂ ಕೃತಕಬುದ್ಧಿ ಮತ್ತೆ ಹೆಚ್ಚಾಗಲು ವಿಜ್ಞಾನ ಅತೀ ಅವಶ್ಯವಾಗಿದೆ ಎಂದರು.ವಿಜ್ಞಾನ ಮತ್ತು ತಂತ್ರಜ್ಞಾನ (ಸೈನ್ಸ್ & ಟಕ್ನಾಲಜಿ) ನಾಣ್ಯದ ಎರಡು ಮುಖಗಳು, ವಿಜ್ಞಾನ ಹೊಸ ಅವಿಷ್ಕಾರ ನೀಡಿದರೆ, ತಂತ್ರಜ್ಞಾನ ಅದಕ್ಕೊಂದು ಸುಂದರ ಹಾಗೂ ಸುಲಭವಾದ ಹೊಸರೂಪ ನೀಡಲಿದೆ. ಕಂಪ್ಯೂಟರ್, ಇಂಟರ್ನೆಟ್ ಇನ್ನಿತರ ವಿನೂತನ ಸೌಲಭ್ಯಗಳು ಇದಕ್ಕೊಂದು ಉತ್ತಮ ಉದಾಹರಣೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಹೆಗ್ಗೇಶ ಕೋಳುರ ಮಾತನಾಡಿ, ಮಕ್ಕಳ ಜ್ಞಾನಾಭಿವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆ ಬಗ್ಗೆ ಆಸಕ್ತಿ ಬೆಳೆಯುತ್ತದೆಯಲ್ಲದೇ ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಬೆಳಕು ಮತ್ತು ಉಷ್ಣ, ಕಾಂತಗಳು, ಮಳೆ ನೀರಿನ ಕೊಯ್ಲು, ಪವನ ವಿದ್ಯತ್ ಉತ್ಪಾದನೆ, ಸೌರಶಕ್ತಿ ಉತ್ಪಾದನೆ, ಚಂದ್ರಯಾನ, ಹಸಿಕಸ, ಒಣಕಸ ಬೇರ್ಪಡಿಸುವ ಕ್ರಿಯಾತ್ಮಕ ಮಾದರಿ ಕುರಿತು ವಿದ್ಯಾರ್ಥಿಗಳು ವಿವರಿಸಿದರು. 2024 ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ‘ಥೀಮ್ ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು’ ಎಂಬ ಧ್ಯೇಯ ವಾಕ್ಯ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾರಾಜಿಸಿತು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಕೆ. ಲೀಲಾವತಿ, ವಿ.ಟಿ. ಎಲಿ, ಎಂ.ಬಿ. ಬಸಮ್ಮ, ಎಸ್.ಆರ್. ಪಾಟೀಲ, ಪಿ.ಆರ್. ಪೂಜಾರ, ಆರ್.ಎಸ್. ವಿಭೂತಿ, ಡಿ.ಕೆ. ಹಳ್ಳೇರ, ದೀಪಾ ಚನ್ನಪ್ಪಗೌಡ್ರ ಸೇರಿದಂತೆ ಇತರರಿದ್ದರು.