ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ ವಿಜ್ಞಾನ, ಸಂಶೋಧನೆ

| Published : Jul 19 2025, 01:00 AM IST

ಸಾರಾಂಶ

ವೈಜ್ಞಾನಿಕ ಹೊಸ ಸಂಶೋಧನಾ ಅಧ್ಯಯನಗಳು ಸಮಾಜದ ಪ್ರಗತಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಸ್ತುತ ವಿಶ್ವವಿದ್ಯಾಲಯಗಳ ಕಾರ್ಯೊನ್ಮುಖವಾಗಬೇಕು

ಧಾರವಾಡ: ವಿಜ್ಞಾನದ ಸಂಶೋಧನೆ ಮತ್ತು ಅನ್ವೇಷಣೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ‌ಹೆಚ್ಚು ಗಮನ ನೀಡಬೇಕಾದ ಅಗತ್ಯತೆ ಇದೆ ಎಂದು ಕರ್ನಾಟಕ ವಿವಿ ಕುಲಪತಿ‌‌‌ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು.

ಸೂಕ್ಷ್ಮಜೀವಿ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಪಿ.ಎಂ.ಉಷಾ ಅನುದಾನ ಯೋಜನೆ ಅಡಿಯಲ್ಲಿ ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಜೈವಿಕ ತಂತ್ರಜ್ಞಾನ, ಮೈಕ್ರೋಬಿಯಲ್ ತಂತ್ರಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನದ ಗಡಿಗಳು ವಿಷಯ ಕುರಿತು ರಾಷ್ಟ್ರಮಟ್ಟದ ಸಮಾವೇಶ ಉದ್ಘಾಟಿಸಿದ ಅವರು, ವಿಜ್ಞಾನ ಕುತೂಹಲ ಕ್ಷೇತ್ರ. ಆಸಕ್ತಿಯಿಂದ ವಿಜ್ಞಾನ ಲೋಕಕ್ಕೆ ಪ್ರವೇಶಿಸಿದಾಗ ಮಾತ್ರ ವಿದ್ಯಾರ್ಥಿಗಳಿಗೆ ವಿಜ್ಞಾನದ ಕೌತುಕತೆ ತಿಳಿಯುತ್ತದೆ ಎಂದರು.

ವೈಜ್ಞಾನಿಕ ಹೊಸ ಸಂಶೋಧನಾ ಅಧ್ಯಯನಗಳು ಸಮಾಜದ ಪ್ರಗತಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಸ್ತುತ ವಿಶ್ವವಿದ್ಯಾಲಯಗಳ ಕಾರ್ಯೊನ್ಮುಖವಾಗಬೇಕು. ಬಹುಶಿಸ್ತಿಯ ವಿಷಯಗಳ ಹೊಸ ದೃಷ್ಟಿಕೋನಗಳಿಂದ ವೈಜ್ಞಾನಿಕ ಪರಿಸರ ಮೂಡಿಸುವ ಅಗತ್ಯವಿದೆ.ಈ‌ ಹಿನ್ನೆಲೆಯಲ್ಲಿ ಯುವ ಸಂಶೋಧಕರು ಹೊಸ ಅನ್ವೇಷಣೆಗಳತ್ತ ಗಮನ ಹರಿಸಬೇಕು ಎಂದರು.

ಬೆಂಗಳೂರಿನ ಬಯೋಕಾನ್ ಅಕಾಡೆಮಿಯ ಉಪಾಧ್ಯಕ್ಷ ಪ್ರೊ. ಎಸ್.ಎಸ್. ಈಶ್ವರನ್ ಮಾತನಾಡಿ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಪ್ರಸ್ತುತ ಆರೋಗ್ಯ, ಸಂಶೋಧನೆ, ಪರಿಸರ, ಕೈಗಾರಿಕಾ ಹಾಗೂ ಗಣಿತೀಯ ಜೈವಿಕ ತಂತ್ರಜ್ಞಾನ ಸೇರಿದಂತೆ ನಾನೊಜೈವ ತಂತ್ರಜ್ಞಾನ, ಜೈವಿಕ ಮಾಹಿತಿ ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಜೈವಿಕ ವಿಜ್ಞಾನಗಳಂತಹ ಉದಯೋನ್ಮುಖ ಕ್ಷೇತ್ರಗಳು ವಿಸ್ತಾರಗೊಂಡಿವೆ. ಈ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಪುಲವಾದ ಅಧ್ಯಯನ ಅವಕಾಶಗಳಿವೆ ಎಂದರು.

ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ. ಎನ್. ಬಿ. ರಾಮಚಂದ್ರ, ಎಸ್‌.ಡಿ.ಎಂ ವಿವಿ ಡಾ.ಕೆ.ಸತ್ಯಮೂರ್ತಿ, ಡಾ. ಪ್ರಸನ್ನ ಸಂತೇಕದೂರು, ಪುಣೆಯ ಸಿ.ಎಸ್.ಐ.ಆರ್ ಸಂಶೋಧನಾ ಸಂಸ್ಥೆಯ ಡಾ. ಸಯ್ಯದ್ ದಸ್ತಾಗರ್, ಹೈದರಾಬಾದ್‌ನ ಡಾ. ಎಚ್.ಎಚ್. ಕುಮಾರಸ್ವಾಮಿ ವಿವಿಧಯ ವಿಜ್ಞಾನ ವಿಷಯಗಳ ಬಗ್ಗೆ ಮಾತನಾಡಿದರು. ಸಮಾವೇಶದಲ್ಲಿ 57 ಮೌಖಿಕವಾಗಿ ಸಂಶೋಧನಾ ಪ್ರಬಂಧಗಳು ಮಂಡನೆಯಾದವು. ಸಂಯೋಜಕ ಪ್ರೊ.ವಿ. ಶ್ಯಾಮ್ ಕುಮಾರ್, ಪ್ರೊ. ಎಂ.ಬಿ. ಹಿರೇಮಠ, ಪ್ರೊ.ಎ.ಬಿ. ವೇದಮೂರ್ತಿ, ಪ್ರೊ.ಸಿ.ಟಿ.ಶಿವಶರಣ, ಡಾ.ಚೇತನ್ ಜೆ.ಡಿ.ಇದ್ದರು.