ಕೊಳ್ಳೇಗಾಲದ ಮಾನಸ ಕಾಲೇಜಿನಲ್ಲಿ ವಿಜ್ಞಾನ ದಿನಾಚರಣೆ ಕಾರ್ಯಕ್ರಮಕ್ಕೆ ಡಾ. ಚಂದ್ರಶೇಖರ್ ಬಾಲನೆ ನೀಡಿದರು. ಪ್ರಾಧ್ಯಾಪಕಿ ಶಿವಮ್ಮ, ಸತೀಶ್, ಕೃಷ್ಣಮೂರ್ತಿ, ಅನಿಲ್ ಕುಮಾರ್ ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಜನ ಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂದು ಮಾನಸ ಶಿಕ್ಷಣ ಸಂಸ್ಥೆಯ ವಿಜ್ಞಾನ ವಿಭಾಗದ ಸಂಯೋಜಕ ಡಾ.ಚಂದ್ರಶೇಖರ್ ಹೇಳಿದರು.

ನಗರದ ಮಾನಸ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆದ ನಿಸರ್ಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಬಿ.ಇಡಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉದ್ಘಾಟನೆ ಮಾಡಿ ನಂತರ ಮಾತನಾಡಿದರು.

ವಿಜ್ಞಾನ ಮತ್ತು ಅದರ ಪ್ರಾಮುಖ್ಯತೆ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಇದರ ಮಹತ್ವ ನೆನಪಿಸಲೆಂದೇ ಪ್ರತಿ ವರ್ಷವು ಫೆ.28ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಣೆ ಮಾಡಲಾಗುತ್ತದೆ. ಪ್ರಖ್ಯಾತ ವಿಜ್ಞಾನಿ ಸರ್ ಸಿ.ವಿ.ರಾಮನ್ ವಿಶ್ವಕ್ಕೆ ''''''''ರಾಮನ್‌ ಎಫೆಕ್ಟ್‌'''''''' ಎಂಬ ಸಿದ್ಧಾಂತವನ್ನು ನೀಡಿದ ದಿನ. ಈ ಮಹೋನ್ನತ ಸಾಧನೆಯನ್ನು ನೆನಪಿಸಿಕೊಳ್ಳುವುದಕ್ಕಾಗಿ 28 ರಂದು ವಿಜ್ಞಾನ ದಿನ ಎಂದೇ ಆಚರಿಸಲಾಗುತ್ತದೆ. ವಿಜ್ಞಾನ ವಿಭಾಗದಿಂದ ನೊಬೆಲ್ ಪಡೆದ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಎಂಬ ಖ್ಯಾತಿ ರಾಮನ್ ಅವರಿಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನಗಳಿಸಿ ಕೋಲ್ಕತ್ತದಲ್ಲಿ ಅಸಿಸ್ಟಂಟ್ ಅಕೌಂಟಂಟ್ ಜನರಲ್ ಆಗಿದ್ದ ಅವರು, ಹುದ್ದೆ ತ್ಯಜಿಸಿ ಕೋಲ್ಕತಾ ವಿವಿ ಪ್ರಾಧ್ಯಾಪಕರಾದರು. ನಂತರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಇಂತಹ ಮಹಾನ್ ವಿಜ್ಞಾನಿ ಬಗ್ಗೆ ಮಾತನಾಡುವುದಕ್ಕೆ ಒಂದು ದಿನವೂ ಸಾಲದು ಎಂದರು.

ಶಿಕ್ಷಕರು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಬೋಧನ ವಿಧಾನವನ್ನು ಅಳವಡಿಸಿ ಬೋಧಿಸುವುದು, ಬೋಧನಾ ವಿಷಯದಲ್ಲಿ ಹಿಡಿತವನ್ನು ಹೊಂದುವುದು ಅತ್ಯಗತ್ಯ. ಸಮಾಜಕ್ಕೆ ಉತ್ತಮ ನಾಗರೀಕರನ್ನು ಸೃಷ್ಟಿ ಮಾಡುವ ನೀವು ಕಲಿಕಾ ವಿಷಯದಲ್ಲಿ ಪ್ರಾಯೋಗಿಕ ಕಲಿಕೆ ಮತ್ತು ಬೋಧನೆಗೆ ಮಹತ್ವವನ್ನು ನೀಡಿ ಸಾಮಾನ್ಯ ಶಿಕ್ಷಕರಾಗಿ ಯೋಚಿಸದೆ ವಿಶೇಷವಾಗಿ ಯೋಚಿಸಿ ವೈಜ್ಞಾನಿಕ ಮತ್ತು ಸುಧಾರಿತ ಮತ್ತು ಸೃಜನಶೀಲರಾಗಿ ಭೋದಿಸಬೇಕು. ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ವಿಶೇಷವಾಗಿ ಸತತ ಪರಿಶ್ರಮದಿಂದ ಜಗತ್ಪ್ರಸಿದ್ಧರಾಗಿರುವುದು. ಹಾಗಾಗಿ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ವಿಧಾನದ ಮೂಲಕ ಅನ್ವಯಿಸಿಕೊಳ್ಳುವಂತೆ ಅರ್ಥಪೂರ್ಣವಾಗಿ ಬೋಧಿಸಿ ಎಂದರು.

ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಮಾತನಾಡಿ, ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಬೋಧನೆ ಮತ್ತು ಕಲಿಕೆಯಲ್ಲಿ ಹೊಸತನವಿರಬೇಕು. ವೈಚಾರಿಕ ಮತ್ತು ವೈಜ್ಞಾನಿಕವಾಗಿ ಆಸಕ್ತಿ ಬರುವಂತೆ ಬೋಧಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬರುವಂತೆ, ಸಮಾಜಕ್ಕೆ ಉತ್ತಮ ನಾಗರಿಕ ವಿದ್ಯಾರ್ಥಿಗಳನ್ನು ಸೃಷ್ಟಿಸಿ ಸಾಧಿಸುವ ಛಲ ಮತ್ತು ಇಚ್ಛಾಶಕ್ತಿ ಬಹಳ ಮುಖ್ಯ ಎಂದರು.