ವೈಜ್ಞಾನಿಕ ತಳಹದಿಯೇ ಅಭಿವೃದ್ದಿಗೆ ಮೂಲ ಸೂಚ್ಯಂಕ

| Published : Jan 30 2025, 12:31 AM IST

ವೈಜ್ಞಾನಿಕ ತಳಹದಿಯೇ ಅಭಿವೃದ್ದಿಗೆ ಮೂಲ ಸೂಚ್ಯಂಕ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಇಮ್ಮಡಿಗಿರಿ ಭೋವಿ ಗುರುಪೀಠದ ಎಸ್‌ಜೆಎಸ್ ಸಮೂಹ ಸಂಸ್ಥೆ ವತಿಯಿಂದ ಎಸ್‍ಜೆಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ನರೇಂದ್ರನಾಯಕ್ ಮಾತನಾಡಿದರು.

ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು ವಿಚಾರ ಸಂಕಿರಣದಲ್ಲಿ ಪ್ರೊ.ನರೇಂದ್ರನಾಯಕ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಯಾವುದೇ ದೇಶದ ಅಭಿವೃದ್ಧಿಗೆ ವೈಜ್ಞಾನಿಕ ತಳಹದಿಯೇ ಮೂಲ ಸೂಚ್ಯಂಕವೆಂದು ರಾಷ್ಟ್ರೀಯ ವಿಚಾರವಾದಿಗಳ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ತಿಳಿಸಿದರು.

ಚಿತ್ರದುರ್ಗ ನಗರದ ಹೊರವಲಯದ ಶ್ರೀ ಇಮ್ಮಡಿಗಿರಿ ಭೋವಿ ಗುರುಪೀಠದ ಎಸ್‌ಜೆಎಸ್ ಸಮೂಹ ಸಂಸ್ಥೆವತಿಯಿಂದ ಎಸ್‍ಜೆಎಸ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವೈಜ್ಞಾನಿಕತೆಗಿರುವ ಸವಾಲು ಹಾಗೂ ಪರಿಹಾರೋಪಾಯಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು

ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು. ಆದರಿಂದ ಕಂಡು ಹಿಡಿದ ಮೊಬೈಲ್, ಟಿವಿ ವಾಟ್ಸಾಪ್, ಕಾರುಗಳ ಸಮರ್ಪಕ ಬಳಕೆ ಮಾಡುತ್ತಾರೆ. ಆದರೆ ಆದರೆ ವೈಜ್ಞಾನಿಕವಾದ ಚಿಂತನೆ ಬೇಡವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ನಾವುಗಳು ಯಾವುದೇ ವಿಷಯವನ್ನು ಪ್ರಶ್ನಿಸದೇ ಒಪ್ಪಿಕೊಳ್ಳಬಾರದು. ಪ್ರಶ್ನಿಸದೇ ಇರುವುದರಿಂದಲೇ ನಮ್ಮ ಮೇಲೆ ವಿವಿಧ ರೀತಿಯ ಗದಾ ಪ್ರಹಾರಗಳಾಗುತ್ತಿವೆ. ನಮ್ಮ ಸಂವಿಧಾನದ ಜನತೆಯ ಕರ್ತವ್ಯಗಳು ಹಾಗೂ ಹಕ್ಕುಗಳನ್ನು ನೀಡಿದ್ದು ಎಲ್ಲರೂ ತಿಳಿದುಕೊಳ್ಳಬೇಕು. ಸಂವಿಧಾನ ಬದ್ಧವಾಗಿ ಈ ಕಾರ್ಯವನ್ನು ಮಾಡಬೇಕಿದೆ ಎಂದರು.

ಪ್ರಶ್ನಿಸುವ ಪ್ರವೃತ್ತಿ ಇಲ್ಲದಿದ್ದರೆ ಬೇರೆಯವರು ಹೇಳಿದ್ದನ್ನು ಕೇಳುವ ಮನೋಭಾವ ಮೂಡುತ್ತದೆ. ಕೆಲವು ವಂಚಕರು ಪ್ರಶ್ನಿಸುವ ಮನೋಭಾವ ಇಲ್ಲದಿರುವದನ್ನು ಮನಗಂಡು ಅದರ ಲಾಭ ಪಡೆಯುತ್ತಿದ್ದಾರೆ. ಶೋಷಣೆ ಮಾಡುತ್ತಿದ್ದಾರೆ. ಕೆಲಸ ಮಾಡದೇ ಜನರಿಗೆ ಸುಳ್ಳುಗಳ ಜೋತಿಷ್ಯದ ಮೂಲಕ ತಿಳಿಸಲಾಗುತ್ತಿದೆ. ಸಂಖ್ಯಾಶಾಸ್ತ್ರ, ಪವಾಡಗಳು ಜನರನ್ನು ಮೋಸ ಮಾಡುವ ಬೇರೆ ಬೇರೆ ವಿಧಾನಗಳಾಗಿವೆ. ಇದಕ್ಕಿಂತ ಮಿಗಿಲಾಗಿ ಸ್ವರ್ಗ, ನರಕ ಇದೆಲ್ಲವನ್ನು ದುಡಿಯದ ವರ್ಗ ಸೃಷ್ಟಿ ಮಾಡಿ ದುಡಿಯವ ವರ್ಗದ ಜನರನ್ನು ಶೋಷಣೆ ಮಾಡುತ್ತಿದೆ. ದುಡಿಯದ ವರ್ಗದವರು ಬೇರೆಯವರಿಗೆ ಸ್ವರ್ಗ ತೋರಿಸುತ್ತೇನೆ ಎಂದು ತಿಳಿಸಿ ಅವರನ್ನು ಭ್ರಮೆಯಲ್ಲಿ ಇರಿಸುತ್ತಿವೆ ಎಂದರು.

ಪವಾಡ ಹಾಗೂ ಜ್ಯೋತಿಷ್ಯದ ಗುಟ್ಟನ್ನು ಬಯಲಿಗೆ ಎಳೆಯುವ ಕಾರ್ಯವಾಗಬೇಕಿದೆ. ಇದಕ್ಕೆ ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಜಗತ್ತಿನಲ್ಲಿ ಇಲ್ಲಿಯವರೆಗೆ ವಿಜ್ಞಾನದಿಂದಲೇ ಪ್ರಗತಿ ಆಗಿದೆ. ಭಕ್ತಿ, ಮೌಢ್ಯದಿಂದಾಗಲಿ ಅಲ್ಲ. ನಮ್ಮ ಜನಗಳಿಗೆ ವಿಜ್ಞಾನದ ಆವಿಷ್ಕಾರಗಳು ಬೇಕು. ಚಿಂತನೆಗಳು ಬೇಡವಾಗಿವೆ. ಚೀನಾದೇಶ ಭಾರತಕ್ಕಿಂತ ಅಭಿವೃದ್ದಿಯಲ್ಲಿ ತುಂಬಾ ಹಿಂದೆ ಇತ್ತು. ಈಗ ಎಲ್ಲ ದೇಶಗಳನ್ನು ಮೀರಿಸುವಂತೆ ಬೆಳೆದಿರುವುದರ ಹಿಂದೆ ವಿಜ್ಞಾನದ ಕೊಡುಗೆ ಇದೆ. ಜಪಾನ್ ಪ್ರಗತಿಯನ್ನು ಸಾಧಿಸಿದೆ. ಇದಕ್ಕೆ ಯಾವುದೇ ಮತ, ಧರ್ಮ, ಅಚರಣೆ ಕಾರಣವಲ್ಲವೆಂದರು.

ವೈಜ್ಞಾನಿಕ ಚಿಂತನೆ ಎಂದರೆ ಬರೀ ತಂತ್ರಜ್ಞಾನವಲ್ಲ. ದೇಶದಲ್ಲಿನ ಗಂಭೀರವಾದ ವಿಷಯಗಳನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಗಹನವಾದ ಚರ್ಚೆ ಬಗ್ಗೆ ತಲೆ ಕೆಡಿಸಿಕೊಳ್ಳಲಾಗುತ್ತಿದ್ದೇವೆ. ಇಂದಿನ ವೈಭವದಲ್ಲಿ ನಮ್ಮನ್ನು ಮರೆಯಲಾಗುತ್ತಿದೆ. ವಾಸ್ತವಿಕತೆ ಅರ್ಥ ಮಾಡಿಕೊಂಡಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ನರೇಂದ್ರ ನಾಯ್ಕ ಹೇಳಿದರು.

ಈ ಸಂದರ್ಭದಲ್ಲಿ ನರೇಂದ್ರನಾಯಕ್‍ ಅವರು ಮಕ್ಕಳಿಂದಲೇ ಕೆಲವು ಪವಾಡಗಳ ಮಾಡಿಸಿ ಗುಟ್ಟು ಬಯಲು ಮಾಡಿದರು. ಭೋವಿ ಗುರುಪೀಠದ ಸಿಇಒ ಗೌನಳ್ಳಿ ಗೋವಿಂದಪ್ಪ ಉಪಸ್ಥಿತರಿದ್ದರು.