ಸಾರಾಂಶ
ಹಿರಿಯೂರು ಗಿರೀಶ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಕನ್ನಡಪ್ರಭ ವಾರ್ತೆ ಹಿರಿಯೂರು
ಮಾನವನ ಅವಶ್ಯಕತೆಗೆ ವಿಜ್ಞಾನ ಇರಬೇಕೇ ಹೊರತು ವಿನಾಶಕ್ಕಲ್ಲ ಎಂದು ಚಿತ್ರದುರ್ಗದ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವ ರೆಡ್ಡಿ ಹೇಳಿದರು.ನಗರದ ಗಿರೀಶ ಶಿಕ್ಷಣ ಮಹಾ ವಿದ್ಯಾಲಯ ಹಾಗೂ ಚಿತ್ರದುರ್ಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬುಧವಾರ ಗಿರೀಶ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ವೈಜ್ಞಾನಿಕ ಕ್ರೌರ್ಯ ಮನುಕುಲದ ವಿನಾಶಕ್ಕೆ ಕಾರಣವಾಗುತ್ತದೆ. ವೈಜ್ಞಾನಿಕ ಸಂಶೋಧನೆಗಳತ್ತ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಸಕ್ತಿ ತೋರಿಸಬೇಕು. ಕೋವಿಡ್ ಸಂದರ್ಭದಲ್ಲಿ ವಿಜ್ಞಾನ ಮತ್ತು ವಿಜ್ಞಾನಿಗಳ ಮೌಲ್ಯ ಜನತೆಗೆ ಅರ್ಥವಾಗಿದೆ. ವಿಜ್ಞಾನ ಎಂದಿಗೂ ಉಳ್ಳವರ ಸ್ವತ್ತಾಗಬಾರದು. ಅನುಭವ ಜನ್ಯ ಜ್ಞಾನವೇ ವಿಜ್ಞಾನ. ಡಾ. ಎಚ್. ನರಸಿಂಹಯ್ಯ ಅವರು ಹೇಳಿದಂತೆ ಪ್ರಶ್ನಿಸದೆ ಏನನ್ನೂ ಒಪ್ಪಬಾರದು. ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.ಪ್ರಾಸ್ತಾವಿಕವಾಗಿ ಎಂ.ಆರ್. ದಾಸೇಗೌಡ ಮಾತನಾಡಿ ಸಂಶೋಧನೆಗೆ ಹೆಚ್ಚು ಹಣ ಬೇಕಿಲ್ಲ. ಸಂಶೋಧಿಸುವ ಗುಣ, ಮನಸ್ಸು ಇರಬೇಕು. ಡಾ. ಸಿ.ವಿ ರಾಮನ್ ಸಂಶೋಧಿಸಿದ ರಾಮನ್ ಪರಿಣಾಮಕ್ಕಾಗಿ ಖರ್ಚಾದ ಹಣ ಕೇವಲ 350 ರು. ಎಂದರು.
ವಿಕಸಿತ ಭಾರತಕ್ಕಾಗಿ ದೇಶಿಯ ತಂತ್ರಜ್ಞಾನ ಕುರಿತು ಉಪನ್ಯಾಸ ನೀಡಿದ ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕೆ. ರಾಜಕುಮಾರ್, ಸಿ.ವಿ. ರಾಮನ್ ಕಂಡುಹಿಡಿದ ಬೆಳಕಿನ ವಿಭಜನೆ ಕ್ರಿಯೆ ಕುರಿತು, ಅವರ ಜೀವನ ಶೈಲಿ ಕುರಿತು ಮತ್ತು ವಿಕಸಿತ ಭಾರತಕ್ಕಾಗಿ ದೇಶೀಯ ತಂತ್ರಜ್ಞಾನದ ಬಗ್ಗೆ ಸವಿವರವಾಗಿ ಉಪನ್ಯಾಸ ನೀಡಿದರು.ಗಿರೀಶ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಎನ್. ತಿಪ್ಪೇಸ್ವಾಮಿ, ಗಿರೀಶ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಸುಧಾ, ವಿಜ್ಞಾನ ಕೇಂದ್ರದ ಸದಸ್ಯ ಆರ್. ಟಿ. ಎಸ್. ಶ್ರೀನಿವಾಸ್, ಉಪನ್ಯಾಸಕರಾದ ಲೋಕೇಶ್, ಪ್ರಮೋದ್, ಎಚ್ ಮಂಜುನಾಥ್ ಪಾಲ್ಗೊಂಡಿದ್ದರು. ಪವಾಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪೂಜಾ ಎಲ್. ಎಚ್., ಬಿ. ಸಿ. ಪೂರ್ಣಿಮಾ, ಅಪ್ಸನಾ, ಆಲಿಮಾ ಸಿ. ಎಂ. ಅವರಿಗೆ ಬಹುಮಾನ ನೀಡಲಾಯಿತು. ------OOO----------ಹಿರಿಯೂರು ನಗರದ ಗಿರೀಶ ಶಿಕ್ಷಣ ಮಹಾ ವಿದ್ಯಾಲಯ ಹಾಗೂ ಚಿತ್ರದುರ್ಗ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಬುಧವಾರ ಗಿರೀಶ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ವಿಜ್ಞಾನ ಕೇಂದ್ರ ಅಧ್ಯಕ್ಷ ಯಾದವ ರೆಡ್ಡಿ ಉದ್ಘಾಟನೆ ಮಾಡಿ ಮಾತನಾಡಿದರು.