ವೈಜ್ಞಾನಿಕ ನೇರ ಕೆಳಸೇತುವೆ: ಗುತ್ತಿಗೆದಾರನ ಬೆವರಿಳಿಸಿದ ಜನ

| Published : Jan 30 2025, 12:30 AM IST

ವೈಜ್ಞಾನಿಕ ನೇರ ಕೆಳಸೇತುವೆ: ಗುತ್ತಿಗೆದಾರನ ಬೆವರಿಳಿಸಿದ ಜನ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನೇರ ಕೆಳಸೇತುವೆ ನಿರ್ಮಿಸುವಂತೆ ಒತ್ತಾಯಿಸಿ, ಮುಖಂಡರು, ಗ್ರಾಮಸ್ಥರು ಪ್ರತಿಭಟಿಸಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರೂ, ದರ್ಪ ಮೆರೆದ ಗುತ್ತಿಗೆದಾರನಿಗೆ ಗ್ರಾಮಸ್ಥರೇ ಬೆವರಿಳಿಸಿದ ಘಟನೆ ನಗರದ ಹೊರವಲಯದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆಯಿತು.

- ಎಸಿ ಸೂಚನೆಗೆ ಸೊಪ್ಪು ಹಾಕದೇ ಕಾಮಗಾರಿ ನಡೆಸಿಯೇ ಸಿದ್ಧ ಎಂದು ದರ್ಪ ಮೆರೆದ ಗುತ್ತಿಗೆದಾರನಿಗೆ ಗ್ರಾಮಸ್ಥರ ತರಾಟೆ - ಸ್ಥಳದಿಂದ ಕಾಲ್ಕಿತ್ತ ಗುತ್ತಿಗೆದಾರ । ಬನ್ನಿಕೋಡು-ಹಳೇ ಕುಂದುವಾಡ ಸಂಪರ್ಕಕ್ಕೆ ವೈಜ್ಞಾನಿಕ ಸೇತುವೆಗೆ ಬಿಗಿಪಟ್ಟು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನೇರ ಕೆಳಸೇತುವೆ ನಿರ್ಮಿಸುವಂತೆ ಒತ್ತಾಯಿಸಿ, ಮುಖಂಡರು, ಗ್ರಾಮಸ್ಥರು ಪ್ರತಿಭಟಿಸಿದರು. ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರೂ, ದರ್ಪ ಮೆರೆದ ಗುತ್ತಿಗೆದಾರನಿಗೆ ಗ್ರಾಮಸ್ಥರೇ ಬೆವರಿಳಿಸಿದ ಘಟನೆ ನಗರದ ಹೊರವಲಯದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆಯಿತು.

ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿರಿದಾದ ಸೇತುವೆ ನಿರ್ಮಾಣ ಮಾಡುತ್ತಿದ್ದ ಸ್ಥಳಕ್ಕೆ ಬಂದ ಗ್ರಾಮಸ್ಥರು ಕಾಮಗಾರಿಗೆ ಅಡ್ಡಿಪಡಿಸಿದರು. ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರ ಮನವಿ ಸ್ವೀಕರಿಸಿ, ಕಾಮಗಾರಿ ನಿಲ್ಲಿಸಲು ಗುತ್ತಿಗೆದಾರನಿಗೆ ಸೂಚಿಸಿದರು. ಆಗ ಗುತ್ತಿಗೆದಾರ ಉಡಾಫೆ ಮಾಡಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಯಾರು ಏನೇ ಹೇಳಿದರೂ ಕಾಮಗಾರಿ ಕೈಗೊಳ್ಳುವುದಾಗಿ ಉಪ ವಿಭಾಗಾಧಿಕಾರಿ ಎದುರೇ ಹೇಳಿದ್ದರಿಂದ ಗ್ರಾಮಸ್ಥರು ಸೈರಣೆ ಕಳೆದುಕೊಂಡರು.

ಈ ಹಿಂದೆಯೂ ಇದೇ ರೀತಿ 2 ಸಲ ಅವೈಜ್ಞಾನಿಕ ಕೆಳಸೇತುವೆ ನಿರ್ಮಿಸಿದ್ದರಿಂದ ಗ್ರಾಮಸ್ಥರಿಗಷ್ಟೇ ಅಲ್ಲ, ದಾವಣಗೆರೆ- ಬನ್ನಿಕೋಡು- ಹರಿಹರ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನಗಳು, ಜನರಿಗೂ ತೊಂದರೆಯಾಗುತ್ತಿದೆ. ಈಗ ಮತ್ತೆ ಅವೈಜ್ಞಾನಿಕ ಕೆಳಸೇತುವೆ ನಿರ್ಮಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡು, ಕಾಮಗಾರಿಗೆ ಅಡ್ಡಿಪಡಿಸಿದರು. ಆಗ ಉಪವಿಭಾಗಾಧಿಕಾರಿ ಅವರು ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಚರ್ಚಿಸಿದ ನಂತರ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.

ಗ್ರಾಮಸ್ಥರ ಮನವಿ ಮೇರೆಗೆ ಎಸಿ ಅವರು ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅವರಿಗೆ ವಿಷಯ ಮುಟ್ಟಿಸಿದರು. ಬಳಿಕ ಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಕರೆ ಮಾಡಿ, ತಕ್ಷಣವೇ ಕೆಳಸೇತುವೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು. ಡಿಸಿ ಆದೇಶಕ್ಕೂ ಕಿಮ್ಮತ್ತು ಕೊಡದ ಗುತ್ತಿಗೆದಾರ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿ ನಡೆಸುತ್ತೇವೆಂದು ಹೇಳುತ್ತಿದ್ದಂತೆ, ಗ್ರಾಮಸ್ಥರು ರೊಚ್ಚಿಗೆದ್ದರು.

ಸೇತುವೆ ಕಾಮಗಾರಿ ಪಡೆದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವರ್ತನೆಗೆ ಗ್ರಾಮಸ್ಥರು ಕೆಂಡಾಮಂಡಲವಾದರು. ನೀವು ಸಚಿವರು, ಸಂಸದರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮಾತಿಗೆ ಬೆಲೆ ನೀಡುತ್ತಿಲ್ಲವೆಂದರೆ ಏನರ್ಥ ಎಂದು ತರಾಟೆಗೆ ತೆಗೆದುಕೊಂಡರು. ಹೆದ್ದಾರಿ ಅಧಿಕಾರಿಗಳು, ಗ್ರಾಮಸ್ಥರ ಮಧ್ಯೆ ವಾಗ್ವಾದ ಏರ್ಪಟ್ಟಿತು. ಗ್ರಾಮಸ್ಥರ ಪ್ರತಿಭಟನೆ ಜೋರಾಗುತ್ತಿದ್ದಂತೆ ಗುತ್ತಿಗೆದಾರ ಅಲ್ಲಿಂದ ಕಾಲ್ಕಿತ್ತನು. ಅಷ್ಟಕ್ಕೇ ಪಟ್ಟುಬಿಡದ ಗ್ರಾಮಸ್ಥರು ತಕ್ಷಣದಿಂದಲೇ ಕಾಮಗಾರಿ ಸ್ಥಗಿತಗೊಳಿಸಿದರು.

ಪ್ರತಿಭಟನೆಯಲ್ಲಿ ಹಳೇ ಕುಂದುವಾಡ ಗ್ರಾಮದ ಮುಖಂಡರು, ಯುವಜನರು, ಗ್ರಾಮಸ್ಥರು, ರೈತರು ಪಾಲ್ಗೊಂಡಿದ್ದರು.

- - -

ಬಾಕ್ಸ್‌-1

* ವೈಜ್ಞಾನಿಕ ಸೇತುವೆ ಪಟ್ಟು ಸಡಿಲಿಸುವ ಪ್ರಶ್ನೆಯೇ ಇಲ್ಲ- ಹೆದ್ದಾರಿ ಬಂದ್‌ಗೊಳಿಸಿ ಉಗ್ರ ಹೋರಾಟ: ಪ್ರಾಧಿಕಾರಕ್ಕೆ ಗ್ರಾಮಸ್ಥರ ಎಚ್ಚರಿಕೆ

ದಾವಣಗೆರೆ: ಬನ್ನಿಕೋಡು-ಹಳೆ ಕುಂದುವಾಡಕ್ಕೆ ಸಂಪರ್ಕಿಸುವ ರಸ್ತೆಗೆ ನೇರವಾಗಿ ಕೆಳಸೇತುವೆ ನಿರ್ಮಿಸಲು 2 ದಶಕದಿಂದಲೂ ಒತ್ತಾಯಿಸುತ್ತಿದ್ದರೂ ಸಬೂಬು ಹೇಳಿ, ಸಮಸ್ಯೆ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮಕ್ಕೆ ಸೂಚಿಸಿದ್ದರೂ, ಅಧಿಕಾರಿಗಳು ಅಸಡ್ಡೆ ಮಾಡುತ್ತಿದ್ದಾರೆ. ಬೇಡಿಕೆ ಈಡೇರುವವರೆಗೂ ನಮ್ಮ ಪಟ್ಟು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದರು.

ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದು. ಪಕ್ಕದಲ್ಲೇ ಶಾಲೆ, ಹಾಸ್ಟೆಲ್ ಇದ್ದು ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ತೊಂದರೆಯಾಗುತ್ತಿದೆ. ಬಸ್, ಟ್ರ್ಯಾಕ್ಟರ್ ಸಂಚರಿಸಲು ತೊಂದರೆಯಾಗುತ್ತಿದೆ. 250 ಎಕರೆಯಲ್ಲಿ ಹೌಸಿಂಗ್ ಬೋರ್ಡ್ ನಿರ್ಮಾಣವಾಗಿದ್ದು, ಅಲ್ಲಿನ ಜನ ಸಂಚರಿಸಲು ಸಮಸ್ಯೆಯಾಗಿದೆ. ಜಿಲ್ಲಾ ನ್ಯಾಯಾಲಯವೂ ಇಲ್ಲೇ ನಿರ್ಮಾಣವಾಗುತ್ತಿದ್ದು, ಮುಂದೆ ಸಮಸ್ಯೆ ಗಂಭೀರ ಸ್ವರೂಪ ಪಡೆಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೂರಾಲೋಚನೆ ಇಲ್ಲದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಮತ್ತೆ ಅವೈಜ್ಞಾನಿಕ ಬ್ರಿಡ್ಜ್ ನಿರ್ಮಿಸುತ್ತಿದ್ದಾರೆ. 24 ಮೀಟರ್ ಅಗಲ, 6 ಮೀಟರ್ ಎತ್ತರದ ಕುಂದುವಾಡ- ಬನ್ನಿಕೋಡು ರಸ್ತೆಗೆ ನೇರ ಬ್ರಿಡ್ಜ್ ನಿರ್ಮಿಸಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖ್ಯ ಶಿಕ್ಷಕರಿಂದ ಮನವಿ:

ಹೆದ್ದಾರಿ ಕಾಮಗಾರಿಯಲ್ಲಿ ಬದಲಿ ರಸ್ತೆ ಮಾಡಿರುವುದರಿಂದ ಶಾಲಾ ಮಕ್ಕಳಿಗೆ ಸಂಚರಿಸಲು ಅನಾನುಕೂಲ ಆಗುತ್ತಿದೆ. ಅಪಘಾತ, ಅವಘಡ, ಸಾವು- ನೋವು ಸಂಭವಿಸುವ ಮುನ್ನ ಬದಲಿ ರಸ್ತೆಗೆ ಹಂಪ್ ನಿರ್ಮಿಸಿ, ನೇರ ಬ್ರಿಡ್ಜ್ ಮಾಡಿಕೊಡಿ ಎಂದು ಇದೇ ವೇಳೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಕೂಡ ಮನವಿ ಸಲ್ಲಿಸಿದರು.

- - - -29ಕೆಡಿವಿಜಿ6, 7, 8:

ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬನ್ನಿಕೋಡು-ಹಳೆ ಕುಂದುವಾಡ ರಸ್ತೆಗೆ ನೇರ ವೈಜ್ಞಾನಿಕ ಕೆಳಸೇತುವೆಗೆ ನಿರ್ಮಾಣಕ್ಕೆ ಒತ್ತಾಯಿಸಿ ಹಳೆ ಕುಂದುವಾಡ ಗ್ರಾಮಸ್ಥರು ಕಾಮಗಾರಿ ತಡೆದು, ಪ್ರತಿಭಟನೆ ನಡೆಸಿದರು.