ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನವನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ವೈಜ್ಞಾನಿಕವಾಗಿ ಬಳಸಲು ಎಂಜಿನಿಯರ್‌ಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

- ಜಿಪಂ ಸಭಾಂಗಣದಲ್ಲಿ ನೀರು-ನೈರ್ಮಲ್ಯ ಕುರಿತು ಸಭೆ । ಜಿಲ್ಲೆಯಲ್ಲಿ 7 ಮೀಟರ್‌ವರೆಗೆ ಕುಸಿದ ಅಂತರ್ಜಲಮಟ್ಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನವನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ವೈಜ್ಞಾನಿಕವಾಗಿ ಬಳಸಲು ಎಂಜಿನಿಯರ್‌ಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ₹1 ಕೋಟಿ ಅನುದಾನ ಬಿಡುಗಡೆ ಆಗಿದ್ದರೆ ಅಷ್ಟೇ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸದೇ ಅವಶ್ಯಕತೆ ಇರುವ ಕಾಮಗಾರಿಗಳ ಕ್ರಿಯಾ ಯೋಜನೆ ಮಾತ್ರ ರೂಪಿಸಬೇಕು. ಅನುದಾನ ಇದೆ ಎಂದು ಆವೈಜ್ಞಾನಿಕವಾಗಿ ಕ್ರಿಯಾ ಯೋಜನೆ ಸಲ್ಲಿಸುವಂತಿಲ್ಲ. ಕೇವಲ ತಹಸೀಲ್ದಾರ್ ಅಥವಾ ಇಒ ಹಂತದ ಸಾಮಾನ್ಯ ವರದಿಗಳ ಬದಲಿಗೆ, ಎಂಜಿನಿಯರಿಂಗ್ ಮಾನದಂಡಗಳಿಗೆ ಅನುಗುಣವಾದ ವೈಜ್ಞಾನಿಕ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಅಂತರ್ಜಲ ಮಟ್ಟದಲ್ಲಿ ಸುಮಾರು 7 ಮೀಟರ್‌ವರೆಗೆ ಕುಸಿತ ಕಂಡುಬಂದಿದೆ. ವಾತಾವರಣದ ಒತ್ತಡ ಹಾಗೂ ಇತರ ಭೂವೈಜ್ಞಾನಿಕ ಕಾರಣಗಳಿಂದ ನೀರಿನ ಮಟ್ಟ ಮತ್ತಷ್ಟು ಕೆಳಗೆ ಹೋಗಿದೆ. ಜಗಳೂರು ಪ್ರದೇಶದಲ್ಲಿ 100% ಅಂತರ್ಜಲವನ್ನೇ ನೆಚ್ಚಿಕೊಳ್ಳಲಾಗಿದೆ. ಕಾಲುವೆ ಅಥವಾ ನದಿಗಳಂತಹ ಪರ್ಯಾಯ ಮೂಲಗಳಿಲ್ಲ. ಹೀಗಾಗಿ ಹೊಸ ಬೋರ್‌ವೆಲ್ ಕೊರೆಯಬೇಕಾದರೆ ಕನಿಷ್ಠ 600 ರಿಂದ 700 ಅಡಿಗಳಷ್ಟು ಆಳಕ್ಕೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ಪ್ರದೇಶಗಳಲ್ಲೂ ಕನಿಷ್ಠ 500 ಅಡಿ ಆಳದವರೆಗೆ ಕೊರೆಯುವುದು ಅನಿವಾರ್ಯ ಎಂದರು.

ಜಿಲ್ಲೆಯಲ್ಲಿ ನೀರಿನ ಅಭಾವ ತಗ್ಗಿಸಲು ಖಾಸಗಿಯವರಿಂದ ನೀರಿನ್ನು ಖರೀದಿಸಿ ಅವಶ್ಯವಿದ್ದಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು. ಹೊಸ ಬೋರ್‌ವೆಲ್ ಕೊರೆಯುವ ವೆಚ್ಚ ಹೆಚ್ಚು. ಆದ್ದರಿಂದ ಮೊದಲು ಜಿಯೋ-ಫಿಸಿಕ್ಸ್ ವರದಿ ಪಡೆದು, ಚಾಲ್ತಿಯಲ್ಲಿರುವ ಹಳೆಯ ಬೋರ್‌ವೆಲ್‌ಗಳನ್ನು ''''ರೀ-ಡ್ರಿಲ್ಲಿಂಗ್'''' ಅಥವಾ ''''ಫ್ಲಶಿಂಗ್'''' ಮಾಡಿ ಮರುಜೀವ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು. ಮರುಬಳಕೆ ಸಾಧ್ಯವಿಲ್ಲ ಎಂಬ ವರದಿ ಬಂದ ಮೇಲಷ್ಟೇ ಹೊಸ ಬೋರ್‌ವೆಲ್‌ಗೆ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.

ವಿನಾಯಕ ಬಡಾವಣೆಯ ಸಮಸ್ಯೆ:

ಸಂಪೂರ್ಣವಾಗಿ ಗಣಿ ಹಾಗೂ ಬಂಡೆಗಳಿಂದ ಆವೃತವಾಗಿರುವ ವಿನಾಯಕ ಬಡಾವಣೆಯಲ್ಲಿ ಪ್ರಸ್ತುತ ಒಂದೇ ಒಂದು ಕೊಳವೆಬಾವಿ ಲಭ್ಯವಿದೆ. ಬೇಸಿಗೆಯಲ್ಲಿ ಈ ಕೊಳವೆಬಾವಿ ಸಂಪೂರ್ಣ ಒಣಗಿ ಹೋಗುವುದರಿಂದ ನೀರಿನ ತೀವ್ರ ಅಭಾವ ಸೃಷ್ಟಿಯಾಗುತ್ತದೆ. ಈ ಹಿಂದೆ ಕೆರೆ ಹಾಗೂ ಕೊಳವೆಬಾವಿ ಆಧಾರಿತ ಪೈಪ್‌ಲೈನ್ ಯೋಜನೆ ವಿಫಲಗೊಂಡ ಕಾರಣ, ಪರ್ಯಾಯವಾಗಿ ಹತ್ತಿರದ ಭದ್ರಾ ನಾಲೆ (ಕ್ಯಾನಲ್) ಭಾಗದಲ್ಲಿ ಹೊಸ ಕೊಳವೆಬಾವಿ ಕೊರೆಸಿ, ಅಲ್ಲಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲು ಅಧಿಕಾರಿಗಳು ಯೋಜಿಸಿ ವರದಿ ನೀಡುವಂತೆ ಸೂಚನೆ ನೀಡಿದರು.

ಪ್ರಸ್ತುತ ಟ್ಯಾಂಕರ್ ನೀರು ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಹಳೆಯ ಕೊಳವೆಬಾವಿ ಮರುಪೂರಣದ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಈ ಸಮಸ್ಯೆ ರಾಜ್ಯ ಮಟ್ಟದ ಮಾಧ್ಯಮಗಳ ಗಮನ ಸೆಳೆದಿರುವುದರಿಂದ, ಕೇವಲ ತಾತ್ಕಾಲಿಕ ಉಪಶಮನಕ್ಕೆ ಮುಂದಾಗದೆ, ಅಗತ್ಯವಿದ್ದರೆ ಹೆಚ್ಚುವರಿ ಅನುದಾನವನ್ನು ಬಳಸಿಕೊಂಡು ಭದ್ರಾ ಕ್ಯಾನಲ್ ಹತ್ತಿರ ಶಾಶ್ವತ ನೀರಿನ ಮೂಲ ಕಂಡುಕೊಳ್ಳಬೇಕು. ಜಿಯಾಲಜಿಸ್ಟ್ ಹಾಗೂ ಎಂಜಿನಿಯರ್‌ಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ತಕ್ಷಣವೇ ವರದಿ ಸಲ್ಲಿಸಬೇಕು ಎಂದು ಆದೇಶಿಸಿದರು.

ಸಂಸ್ಥೆಗಳು-ಏಜೆನ್ಸಿಗಳ ಕಾರ್ಯಕ್ಷಮತೆ ಮತ್ತು ದಂಡ:

ಕಾಮಗಾರಿಗಳನ್ನು ನಿಗದಿತ ಅವಧಿಗಿಂತ ಪೂರ್ಣಗೊಳಿಸದ ಸಂಸ್ಥೆಗಳು ಅಥವಾ ಎಜೆನ್ಸಿಗಳಿಗೆ ನಿಯಮಗಳ ಪ್ರಕಾರ ಶೇಕಡ 5 ರಿಂದ 12ರಷ್ಟು ದಂಡವನ್ನು ಈಗಾಗಲೇ ವಿಧಿಸಿದೆ. ಹಣದ ಮೊತ್ತಕ್ಕಿಂತ ಹೆಚ್ಚಾಗಿ ಕಾರ್ಯಕ್ಷಮತೆಯ ವರದಿ ಅತ್ಯಗತ್ಯ. ಪ್ರತಿಯೊಂದು ಸಂಸ್ಥೆಯ ಕಾರ್ಯಕ್ಷಮತೆಯ ಆಧಾರದ ಮೇಲೆಯೇ ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ನೀರಿನ ಪರೀಕ್ಷೆ:

ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಶುದ್ಧತೆಯನ್ನು ಕಾಯ್ದುಕೊಳ್ಳಲು ಹಮ್ಮಿಕೊಳ್ಳಲಾಗಿರುವ ‘ಫೀಲ್ಡ್ ಟೆಸ್ಟಿಂಗ್ ಕಿಟ್’ (ಎಫ್‌ಟಿಕೆ) ಮೂಲಕ ನೀರು ಪರೀಕ್ಷಿಸುವ ಪ್ರಕ್ರಿಯೆಯನ್ನು ನಿಯಮಿತವಾಗಿ ನಡೆಸಿ, ನಿಗದಿತ ತ್ರೈಮಾಸಿಕ ಗುರಿಯನ್ನು ಸಮಯಕ್ಕೆ ಮುಂಚಿತವಾಗಿಯೇ ಶೇ.100ರಷ್ಟು ಪೂರ್ಣಗೊಳಿಸಬೇಕು. ತ್ರೈಮಾಸಿಕ ಅವಧಿ ಮುಕ್ತಾಯಗೊಳ್ಳುವ ಕೊನೆಯ ಕ್ಷಣದಲ್ಲಿ ಅವಸರದಿಂದ ಕೆಲಸ ಮುಗಿಸುವ ಬದಲು, ಮೊದಲೇ ಯೋಜನೆ ರೂಪಿಸಿ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕು ಕಟ್ಟುನಿಟ್ಟಿನ ಸೂಚನೆ ನೀಡಿದರು. ಪ್ರಸ್ತುತ ಅಂತರ್ಜಲ ಪರೀಕ್ಷೆಯಲ್ಲಿ ಶೇ.74.38ರಷ್ಟು ಪ್ರಗತಿ ಸಾಧಿಸಲಾಗಿದ್ದು, ಬಾಕಿ ಇರುವ ಕಾಮಗಾರಿ ಮತ್ತು ಪರೀಕ್ಷೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ತಿಳಿಸಿದರು.

ಪ್ರಸ್ತುತ ನೀರಿನ ಪೂರೈಕೆಗೆ ಎಚ್‌ಡಿಪಿಇ ಹಾಗೂ ಎಚ್‌ಡಿ ಸಂಪರ್ಕಿತ ಪೈಪ್‌ಗಳನ್ನು ಬಳಸಲಾಗುತ್ತಿದೆಯಾದರೂ, ಜಾಯಿಂಟ್‌ಗಳ ಬಳಿ ಸೋರಿಕೆ ಆಗುವ ಸಾಧ್ಯತೆಗಳು ಇರುತ್ತವೆ. ಕುಡಿಯುವ ನೀರು ಕಲುಷಿತಗೊಂಡರೆ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ, ಕೇವಲ ಇತರರ ಆಸ್ತಿಯ ಪಕ್ಕದಲ್ಲಿ ನಿರ್ಮಾಣ ಕಾರ್ಯ ನಡೆಯುವಾಗ ಮಾತ್ರವಲ್ಲದೆ, ನಮ್ಮ ಯೋಜನೆಗಳ ಜಾರಿಯ ಸಮಯದಲ್ಲೂ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ತಕ್ಷಣವೇ ''''ಸ್ಮಾರ್ಟ್ ಆಕ್ಷನ್'''' ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲ ಅಭಿಯಂತರರಾದ ನಾಗೇಂದ್ರಪ್ಪ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಹಾಗೂ ಇತರರು ಉಪಸ್ಥಿತರಿದ್ದರು.

- - -

-24ಕೆಡಿವಿಜಿ37: ದಾವಣಗೆರೆಯಲ್ಲಿ ಜಿಪಂ ಸಿಇಒ ಸಾಹಿತ್ಯ ಆಲದಕಟ್ಟಿ ಅಧ್ಯಕ್ಷತೆಯಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಸಭೆ ನಡೆಯಿತು.