ಹರದನಹಳ್ಳಿ ಫಾರಂನಲ್ಲಿ ‘ಜಿಲ್ಲಾ ಮಟ್ಟದ ಬಾಳೆ ಬೆಳೆಯ ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಸಲಹೆ
ಆರೋಗ್ಯ ಕೃಷಿಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತ - ವಿಜ್ಞಾನಿ ಸಮ್ಮಿಳಿತದಿಂದ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸುಸ್ಥಿರ ಬಾಳೆ ಬೆಳೆಯಲು ಸಾಧ್ಯ ಎಂದು ಕೆವಿಕೆ ಮುಖ್ಯಸ್ಧ ಡಾ. ನರೇಶ್ ಎನ್.ಟಿ. ಹೇಳಿದರು.ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ, ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅರಭಾವಿ ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ (ಹಣ್ಣುಗಳು) ಇವರ ಸಹಯೋಗದೊಂದಿಗೆ ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರ, ಹರದನಹಳ್ಳಿ ಫಾರಂ, ‘ಜಿಲ್ಲಾ ಮಟ್ಟದ ಬಾಳೆ ಬೆಳೆಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಪ್ರಸ್ತುತ ಬಾಳೆ ಬೆಳೆ ಇಳುವರಿ ಹೆಚ್ಚಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ ಮೇರೆಗೆ ವೈಜ್ಞಾನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ. ದೊರೆಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಳೆ ಬೆಳೆಗಾರರು ಹಾಗೂ ಗ್ರಾಹಕರ ನಡುವಿನ ಅಂತರವನ್ನು ಕಡಿಮೆ ಮಾಡುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳವಂತೆ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಡ್ಯ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಸಿ. ರಾಮಚಂದ್ರ ಅವರು ಸಮಗ್ರ ಬೇಸಾಯ ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳ ಬಳಕೆ ಮಣ್ಣು ಪರೀಕ್ಷಾ ಆಧಾರಿತ ರಸಗೊಬ್ಬರಗಳ ಬಳಕೆಯ ಬಗ್ಗೆ ತಿಳಿಸಿದರು.
ಕೇಂದ್ರದ ಗೃಹ ವಿಜ್ಞಾನಿ ಡಾ. ದೀಪ. ಜೆ. ಬಾಳೆ ಹಣ್ಣುಗಳ ಮತ್ತು ಬಾಳೆದಿಂಡಿನ ಉಪಯೋಗಗಳ, ಸಂಸ್ಕರಣೆ, ಮೌಲ್ಯವರ್ಧನೆ, ಬ್ರ‍್ಯಾಂಡಿಂಗ್ ಮತ್ತು ಲೇಬಲಿಂಗ್ ಬಗ್ಗೆ ತಿಳಿಸಿಕೊಟ್ಟರು.ತೋಟಗಾರಿಕೆ ವಿಜ್ಞಾನಿ ಡಾ. ಮೋಹನ್ ಕುಮಾರ್ ಎ.ಬಿ. ರವರು ರೈತರ ಸಮಸ್ಯೆಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು. ಮಣ್ಣು ವಿಜ್ಞಾನಿ ಡಾ. ಹನಮಂತಪ್ಪ ಮೇಟಿ ಮತ್ತು ಕೆವಿಕೆ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಒಟ್ಟಾರೆ 210ಕ್ಕೂ ಅಧಿಕ ರೈತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಬಾಳೆದಿಂಡಿನ ಮೌಲ್ಯವರ್ಧಿತ ಉತ್ಪನ್ನಗಳು, ಬಾಳೆ ಅಂಗಾಂಶ ಕೃಷಿ ಸಸಿಗಳು ಮತ್ತು ಕೃಷಿ ಪರಿಕರಗಳ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು.ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ. ಪಂಪನಗೌಡ. ಬಿರವರು ಉತ್ತಮ ಬಾಳೆಯ ಇಳುವರಿಗಾಗಿ ರೋಗ ಮುಕ್ತ ತಾಕುಗಳ ಆಯ್ಕೆ, ರೋಗ ರಹಿತ ಕಂದುಗಳ ಆಯ್ಕೆ, ಕಂದುಗಳಿಗೆ ಕಾರ್ಬನ್ ಡೈಜಿಂ 2 ಗ್ರಾಂ + 2 ಮಿ. ಕ್ಲೋರೋಪೈರಿಫಾಸ್ ಪ್ರತಿ ಲೀಟರ್ ನೀರಿಗೆ ಹಾಕಿ ಅರ್ಧ ತಾಸು ಉಪಚರಿಸುವುದು ಮತ್ತು ನಾಟಿಯ ದಿವಸ ಸಗಣಿ ರಾಡಿಯಲ್ಲಿ ಅದ್ದುವಿಕೆ, ಕಂದು ನಾಟಿ ಮಾಡುವಾಗ ಮೌಲ್ಯವರ್ಧಿತ ಗೊಬ್ಬರದ ಬಳಕೆ, ನಂತರ ಪ್ರತಿ 2 ತಿಂಗಳಿಗೊಮ್ಮೆ ಟ್ರೆಕೋಡರ್ಮಾ, ಸೂಡೋಮೋನಾಸ್ ಮತ್ತು ಪೆಸಿಲೋಮೈಸಿಸ್ ಬಳಕೆ, ಬೇವಿನ ಹಿಂಡಿ ಬಳಕೆ, ಗೊಬ್ಬರಗಳನ್ನು ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬಳಕೆ ಮತ್ತು ಬಾಳೆ ಸಮೃದ್ಧಿ ಬಳಕೆ ಕುರಿತು ವೈಜ್ಞಾನಿಕ ಮಾಹಿತಿ ನೀಡುತ್ತಾ, ಬಾಳೆಗೆ ಬರುವ ಸಿಗಟೋಕ ರೋಗ ಮತ್ತು ಪನಾಮ ಸೊರಗು ರೋಗ ನಿರ್ವಹಣೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.ರೇಷ್ಮೆ ಕೃಷಿ ವಿಜ್ಞಾನಿ ಡಾ. ಚಂದ್ರಶೇಖರ್, ಎಸ್. ಕಳ್ಳೀಮನಿ ಗಣ್ಯರನ್ನು ಸ್ವಾಗತಿಸಿದರು. ಬೇಸಾಯ ಶಾಸ್ತ ವಿಜ್ಞಾನಿ ಡಾ. ಶ್ರುತಿ ಎಂ.ಕೆ.ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
---24ಸಿಎಚ್ಎನ್18
‘ಜಿಲ್ಲಾ ಮಟ್ಟದ ಬಾಳೆ ಬೆಳೆಯ ವಿಚಾರ ಸಂಕಿರಣ’ವನ್ನು ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ. ದೊರೆಸ್ವಾಮಿ ಉದ್ಘಾಟಿಸಿದರು.