ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಬೇಕಾದರೆ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗುತ್ತದೆ ಎಂದು ಗೌರಮ್ಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಧನಂಜಯಮೂರ್ತಿ ಅಭಿಪ್ರಾಯಪಟ್ಟರು.ಅವರು ರೋಟರಿ ಶಾಲೆ ಹಾಗೂ ಕನ್ನಿಕಾ ಆಂಗ್ಲ ಶಾಲೆ ಸಂಯುಕ್ತ ಆಶ್ರಯದಲ್ಲಿ ರೋಟರಿ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಬೆಳೆಯಬೇಕು. ಇಂದು ವಿಜ್ಞಾನ ಇಲ್ಲದೆ ಬದುಕುವುದು ಕಷ್ಟಸಾಧ್ಯ. ನಾವು ವೈಜ್ಞಾನಿಕವಾಗಿ ನೋಡಿದಾಗ ಅಲ್ಲಿ ವಿಜ್ಞಾನ ಕಾಣುತ್ತದೆ. ವಿಜ್ಞಾನ ಎಂದರೆ ವಿಶೇಷವಾದ ಜ್ಞಾನ. ವೈಜ್ಞಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಗಳ ಕೊಡುಗೆ ಬಹಳವಾಗಿದೆ. ಪ್ರಯೋಗಗಳ ಮೂಲಕ ಮಕ್ಕಳು ಅಧ್ಯಯನ ಮಾಡಿದ್ದು ಬಹಳ ಕಾಲ ನೆನಪಿನಲ್ಲಿ ಇರುತ್ತದೆ, ಇದು ಒಂದು ವಿಧದಲ್ಲಿ ಪರಿಣಾಮಕಾರಿ ಬೋಧನೆ ಕೂಡ, ಈ ಶಾಲೆಯ ಶಿಕ್ಷಕರು ಮಕ್ಕಳಲ್ಲಿರುವ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿಯನ್ನು ಹೊರಹೊಮ್ಮಿಸಲು ಒಳ್ಳೆಯ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ, ಶಿಕ್ಷಕರು ತೆಗೆದುಕೊಂಡ ವಿಶೇಷ ಕಾಳಜಿಗು ಅವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಸಂಯೋಜಕ ಚಿದಾನಂದ್ ಮಕ್ಕಳು ವೈಜ್ಞಾನಿಕ ಮಾದರಿಗಳನ್ನು ಬಹಳ ಕಾಳಜಿ ವಹಿಸಿ ಆಸಕ್ತಿಯಿಂದ ತಯಾರಿಸಿ ಪ್ರದರ್ಶನ ನೀಡಿದ್ದಾರೆ. ಇಂತಹ ಪ್ರಾಯೋಗಿಕ ಚಟುವಟಿಕೆಗಳು ಮುಂದಿನ ಶಿಕ್ಷಣಕ್ಕೆ ಬಹಳ ಸಹಕಾರಿಯಾಗುತ್ತದೆ. ಮಕ್ಕಳನ್ನು ಶಿಕ್ಷಕರು ಈ ರೀತಿಯಲ್ಲಿ ಪ್ರೇರೇಪಿಸಬೇಕು, ಪೋಷಕರು ಸಹ ಮಕ್ಕಳಿಗೆ ಬೆಂಬಲ ಸೂಚಿಸಿದ್ದಾರೆ ಎಂದರು.ಸಿಆರ್‌ಪಿ ವಿಷ್ಣುವರ್ಧನ್, ರೋಟರಿ ಕ್ಲಬ್‌ನ ಸದಸ್ಯರುಗಳಾದ, ಯೋಗೀಶಾಚಾರ್, ನವೀನ್, ಸುರೇಶ್, ಅವರುಗಳು ವಿದ್ಯಾರ್ಥಿಗಳಿಗೆ ಶುಭಕೋರಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು ಸಹ ಮಕ್ಕಳ ವಿಜ್ಞಾನ ಮಾದರಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು 80 ಅಧಿಕ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದರು.
ಶಾಲಾ ಮುಖ್ಯಶಿಕ್ಷಕ ಮಲ್ಲಿಕಾರ್ಜುನ್ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಣೆಗಾಗಿ ಆಗಮಿಸಿದ್ದ ವಿವಿಧ ಶಾಲೆಗಳ ಶಿಕ್ಷಕರುಗಳಿಗೆ ವಿದ್ಯಾರ್ಥಿಗಳಿಗೂ ಹಾಗೂ ಪ್ರೋತ್ಸಾಹ ನೀಡಿದ ಪೋಷಕರಿಗೂ ಆ ಕೃತಜ್ಞತೆ ಹೇಳಿದರು.