ಸಾರಾಂಶ
ಕಲಾ, ಗಣಿತ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆಕನ್ನಡಪ್ರಭ ವಾರ್ತೆ ಕೊಪ್ಪಳ
ವಿದ್ಯಾರ್ಥಿಗಳು ವೈಜ್ಞಾನಿಕ ಗುಣ ಬೆಳೆಸಿಕೊಳ್ಳಬೇಕು. ವಿಜ್ಞಾನವು ಮೂಢನಂಬಿಕೆಗಳನ್ನು ದೂರ ಮಾಡುತ್ತದೆ ಎಂದು ವಿಜ್ಞಾನ ಶಿಕ್ಷಕ ಪ್ರಕಾಶ ಎಸ್. ಹೇಳಿದರು.ತಾಲೂಕಿನ ಗಿಣಿಗೇರಾ ಗ್ರಾಮದ ಜ್ಞಾನಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಾ, ಗಣಿತ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನಲ್ಲಿ ಹಲವು ವಿಜ್ಞಾನಿಗಳು ನಿರಂತರ ಸಂಶೋಧನೆ ಕೈಗೊಂಡು ವಿಜ್ಞಾನ ಜಗತ್ತಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ನಮ್ಮ ಸುತ್ತಮುತ್ತ ನಡೆಯುವ ಸನ್ನಿವೇಶಗಳಲ್ಲಿ ನಿಮ್ಮ ಆಸಕ್ತಿಕರ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ ಮಾಡಬೇಕು. ಸೃಜನಶೀಲತೆಗೆ ಇಂತಹ ವಸ್ತುಪ್ರದರ್ಶನ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸೋಮಲಿಂಗಪ್ಪ ಬೆಣ್ಣಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಪಡೆದುಕೊಂಡು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು. ಓದು, ಬರಹದ ಜೊತೆಗೆ ಪ್ರಾಯೋಗಿಕ ಕಲಿಕೆಗೆ ವಸ್ತುಪ್ರದರ್ಶನಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.ಬಳಿಕ ಸಂಪನ್ಮೂಲ ವ್ಯಕ್ತಿ ಪ್ರಕಾಶ ಎಸ್. ಅವರನ್ನು ಸನ್ಮಾನಿಸಲಾಯಿತು. ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಸುರೇಶ ಕೆ., ಪೂರ್ವ ಪ್ರಾಥಮಿಕ ವಿಭಾಗ ಮುಖ್ಯಸ್ಥ ಶೆಮ್ಸ್ ಸುಲ್ತಾನಾ, ಶಿಕ್ಷಕರಾದ ನಾಗರಾಜ ಗುಗ್ರಿ, ನಾಗಪ್ಪ ಬಂಡಿ, ಕವಿತಾ ಎಂ., ಅಕ್ಷತಾ ಎಸ್. ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು ವಿವಿಧ ವಿಜ್ಞಾನದ ಮಾದರಿಗಳನ್ನು ಪ್ರದರ್ಶನ ಮಾಡಿದರು. ಸುತ್ತಮುತ್ತಲ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ವಿಜ್ಞಾನ ಮಾದರಿ ವೀಕ್ಷಿಸಿದರು.