ಸಾರಾಂಶ
ಪರಿಸರ ಸಂರಕ್ಷಣೆಯೊಂದಿಗೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಾಲೂಕು ಕೇಂದ್ರಗಳಲ್ಲಿ ಶಾಶ್ವತ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪರಿಸರ ಸಂರಕ್ಷಣೆಯೊಂದಿಗೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ತಾಲೂಕು ಕೇಂದ್ರಗಳಲ್ಲಿ ಶಾಶ್ವತ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಜಿಲ್ಲಾಡಾಳಿತವನ್ನು ಒತ್ತಾಯಿಸಿದ್ದಾರೆ. ಪಾಲಿಬೆಟ್ಟ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಸ್ವಚ್ಛತೆ ಹಾಗೂ ಪರಿಸರ ಕಾಳಜಿಯ ಸ್ವಚ್ಛ ಗ್ರಾಮ. ಸುಂದರ ಪರಿಸರ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಜಿಲ್ಲೆಯಲ್ಲಿ ಶುಚಿತ್ವ ಕಾಣದೆ ಹಸಿರು ಪರಿಸರವು ಹಾಳಾಗುತ್ತಿದ್ದು ಜಿಲ್ಲೆಗೆ ಬರುವವರು ಮೂಗು ಮುಚ್ಚಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದಲೂ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಶಾಶ್ವತ ಯೋಜನೆಯನ್ನು ರೂಪಿಸದೆ ಸೂಕ್ತ ಜಾಗವು ಕಂಡುಕೊಳ್ಳಲಾಗದೆ ನಿರ್ಲಕ್ಷ್ಯ ತೋರುತ್ತಿರುವ ಪರಿಣಾಮವೇ ತ್ಯಾಜ್ಯದ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ. ಗ್ರಾಮ ವ್ಯಾಪ್ತಿಗಳ ರಸ್ತೆ, ನದಿ ಮೂಲಗಳ ಬಳಿ ತ್ಯಾಜ್ಯ ಸುರಿಯುತ್ತಿರುವ ಹಿನ್ನೆಲೆ ನೀರು ಕಲುಷಿತಗೊಳ್ಳುವುದರೊಂದಿಗೆ ಮನುಷ್ಯರು, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಕುಡಿಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯವರು ತಮ್ಮ ಊರಿನ ಪರಿಸರವನ್ನೇ ಹಾಳು ಮಾಡುತ್ತಿದ್ದು ಪ್ರಜ್ಞಾವಂತರು ಎಚ್ಚೆತ್ತುಕೊಂಡು ಸ್ವಚ್ಛ ಗ್ರಾಮವನ್ನಾಗಿಸಲು ಮುಂದಾಗ ಬೇಕಾಗಿದೆ ಎಂದು ಹೇಳಿದ ಅವರು ತಾಲೂಕು ವ್ಯಾಪ್ತಿಗಳಲ್ಲಿ ವೈಜ್ಞಾನಿಕ ಘಟಕ ನಿರ್ಮಾಣವಾದಲ್ಲಿ ತ್ಯಾಜ್ಯದ ಸಮಸ್ಯೆಗೆ ಮುಕ್ತಿ ಕಾಣಲು ಸಾಧ್ಯವಾಗಲಿದೆ ಎಂದರು.ಇದೇ ಸಂದರ್ಭ ಆಸ್ಪತ್ರೆ, ಶಾಲೆ, ಪೊಲೀಸ್ ಠಾಣೆ ಸೇರಿದಂತೆ ಹಲವಡೆ ಸ್ವಚ್ಛತೆಯೊಂದಿಗೆ ಗಿಡಗಳನ್ನು ನೆಟ್ಟರು.ಈ ಸಂದರ್ಭ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ದುಜಾ ವೇಗಸ್, ಉಪಾಧ್ಯಕ್ಷ ರಾಜಪ್ಪ, ಕಾರ್ಯದರ್ಶಿಗಳಾದ ಪ್ರಸಾದ್, ನಾರಾಯಣ,ಸಹಕಾರ ಸಂಘದ ನಿರ್ದೇಶಕ ಟಿ ಜಿ ವಿಜೇಶ್, ಅರಣ್ಯ ಅಧಿಕಾರಿ ಶಶಿಕುಮಾರ್, ಪೊಲೀಸ್ ಠಾಣೆಯ ಎ ಎಸ್ ಐ ಮಂಜುನಾಥ್ ,ಪ್ರಮುಖರಾದ ಅಲಿಬ ಸೇರಿದಂತೆ ಆಟೋ ಚಾಲಕರು, ಸ್ಥಳೀಯರು ಹಾಜರಿದ್ದರು.