ಸಾರಾಂಶ
ಧಾರವಾಡ: ಇಲ್ಲಿಯ ಹುರಕಡ್ಡಿ ಕಾಲೇಜಿನಲ್ಲಿ ಸಿಇಟಿ ಬರೆಯಲು ಹೋದ ವಿದ್ಯಾರ್ಥಿ ನಂದನ್ ಏರಿ ಜನಿವಾರವನ್ನು ಕತ್ತರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸದಸ್ಯರು ಇಲ್ಲಿಯ ಉಪ ನಗರ ಪೊಲೀಸ ಠಾಣೆ ಎದುರು ಪ್ರತಿಭಟನೆ ನಡೆಸಿ ಠಾಣೆಗೆ ಒಳನುಗ್ಗಲು ವಿಫಲಯತ್ನ ನಡೆಯಿತು.
ಪರೀಕ್ಷಾ ಕೇಂದ್ರದ ಒಳಗಡೆ ನಂದನ್ ಅವರನ್ನು ಬಿಡುವ ವೇಳೆ ಪೊಲೀಸ್ ಸಿಬ್ಬಂದಿಯೇ ಜನಿವಾರ ಕತ್ತರಿಸಿದ್ದಾರೆ. ಇದನ್ನು ಸ್ವತಃ ವಿದ್ಯಾರ್ಥಿಯೇ ಹೇಳಿದ್ದು ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಇದರಿಂದ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಪೊಲೀಸ್ ಸಿಬ್ಬಂದಿ ಜನಿವಾರ ಕತ್ತರಿಸಿಲ್ಲ ಎಂದು ಪೊಲೀಸರು ಸಮಜಾಯಿಸಿದರು. ಆದರೆ, ಪ್ರತಿಭಟನಾಕಾರರು ಬೆಳಗಾವಿ ರಸ್ತೆ ಬಂದ್ ಮಾಡಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಕೆಲ ಹೊತ್ತು ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆ ಮಾಡುವ ಮೂಲಕ ಪ್ರತಿಭಟನೆಗೆ ಅಂತ್ಯ ಹಾಡಿದರು. ಪರಿಷತ್ ಅಧ್ಯಕ್ಷ ಶಿವಾನಂದ ಸತ್ತಿಗೇರಿ ನೇತೃತ್ವ ವಹಿಸಿದ್ದರು.ಜನಿವಾರಕ್ಕೆ ಕತ್ತರಿ: ಮುಖ್ಯಮಂತ್ರಿಗಳು ಕ್ಷಮೆ ಕೇಳಲಿ: ಬೆಲ್ಲದಧಾರವಾಡ:
ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣದಲ್ಲಿ ಮುಖ್ಯಮಂತ್ರಿಗಳೇ ವಿವಾದದ ಹೊಣೆ ಹೊತ್ತು ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.ತಮ್ಮನ್ನು ಭೇಟಿ ಆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಖಂಡನೀಯ. ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಸರ್ಕಾರ ಜನರ ಆಕ್ರೋಷಕ್ಕೆ ಕಾರಣವಾಗುವ ಮುನ್ನವೇ ಎಚ್ಚೆತ್ತುಕೊಂಡರೆ ಒಳ್ಳೆಯದು ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಮಾಜ ಒಡೆಯುವ ಹುನ್ನಾರ ನಡೆಸಿದೆ. ಈ ದಿಸೆಯಲ್ಲಿ ಆಡಳಿತವನ್ನು ಸಂಪೂರ್ಣವಾಗಿ ಅಲ್ಪಸಂಖ್ಯಾತರ ಹಿತಕಾಯಲು ಬಳಸಲಾಗುತ್ತಿದೆ. ಹಿಂದೂ ಧರ್ಮದ ಅವಿಭಾಜ್ಯವಾಗಿರುವ ಜನಿವಾರ, ಶಿವದಾರ, ವಿಭೂತಿ, ಕುಂಕುಮಗಳನ್ನು ಅವಮಾನಿಸುತ್ತಿದ್ದರೆ ಇನ್ನೊಂದೆಡೆ ಬುರ್ಖಾ, ಹಿಜಾಬ್‌ಗಳಿಗೆ ಯಾವುದೇ ವಿರೋಧ ಇಲ್ಲದಿರುವುದು ಸರ್ಕಾರ ಮುಸಲ್ಮಾನರಿಗೆ ಮಾತ್ರ ಎನ್ನುವಂತಾಗಿದೆ ಎಂದು ಆರೋಪ ಮಾಡಿದರು.
ರಾಜ್ಯದಲ್ಲಿ ಅನುದಾನ ಕೊರತೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳು ಈವರೆಗೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಕಾರಣದಿಂದ ಜನರ ಗಮನ ಬೇರೆಡೆ ಸೆಳೆಯುವ ದಿಸೆಯಲ್ಲಿ ಸರ್ಕಾರ ಜನಿವಾರ ತೆಗೆಸುವಂಥ ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ತಮ್ಮ ವ್ಯಕ್ತಿಗತ ಮತ್ತು ಸರ್ಕಾರದ ವೈಫಲ್ಯವನ್ನು ಮರೆಮಾಚಲು ಇಂಥ ವಿಷಯಗಳತ್ತ ಜನರ ಚಿತ್ತ ಹರಿಸಲು ಮುಂದಾಗುತ್ತಿದೆ. ಮರೆಮಾಚುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಸಿದ್ಧಹಸ್ತರು ಎಂದು ಆರೋಪಿಸಿದರು.ಸರ್ಕಾರದ ವೈಫಲ್ಯ ಮತ್ತು ಜನರ ನಂಬಿಕೆಗಳಿಗೆ ಅಪಚಾರ ಆಗುತ್ತಿರುವುದನ್ನು ಬಿಜೆಪಿ ಗಂಭಿರವಾಗಿ ಪರಿಗಣಿಸಿದ್ದು, ಈ ವಿಷಯದಲ್ಲಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯಲ್ಲಿ ಈ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.