ಸಾರಾಂಶ
-ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಸಮಿತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ, ಹಿರಿಯೂರು: ಯುವಕರು ಮೊಬೈಲ್ ಗೀಳು ಬಿಟ್ಟು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒತ್ತು ನೀಡಿ ಸತತ ಪರಿಶ್ರಮಪಟ್ಟರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಹೇಳಿದರು.
ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಹಾಗೂ ಪ್ರೊ. ಬಿ.ಕೃಷ್ಣಪ್ಪ ಅವರ 86ನೇ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲಾ ಸಮುದಾಯದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಸಾಧನೆಗೆ ಪ್ರೇರಣೆ ನೀಡಲು ಇಂತಹ ಕಾರ್ಯಕ್ರಮಗಳನ್ನುಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು. ಅದರಲ್ಲೂ ಅವಕಾಶ ವಂಚಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವತ್ತ ಚಿಂತಿಸಬೇಕಾಗಿದೆ. ಅಂಬೇಡ್ಕರ್ ಸೇನೆಯ ಸಮಾಜಮುಖಿ ಕಾರ್ಯಗಳಿಗೆ ಸದಾ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಆರ್.ಕೋದಂಡರಾಮ್ ಮಾತನಾಡಿ, ದೇಶದ ಭಾವಿ ಪ್ರಜೆಗಳಾಗಿರುವ ಇಂದಿನ ಮಕ್ಕಳನ್ನು ವಿದ್ಯಾವಂತರನ್ನಾಗಿ, ಸಜ್ಜನರನ್ನಾಗಿ, ಸುಸಂಸ್ಕೃತರನ್ನಾಗಿ ರೂಪಿಸುವ ಹೊಣೆ ಶಿಕ್ಷಕರು, ಪೋಷಕರು ಸೇರಿದಂತೆ ಎಲ್ಲರ ಮೇಲಿದೆ. ಮಕ್ಕಳು ಸಮಯ ವ್ಯರ್ಥ ಮಾಡದೇ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಬೇಕು. ಅಂತರ್ಜಾಲ, ಮೊಬೈಲ್ ಗೀಳಿಗೆ ಬಿದ್ದು ಇಂದು ಅದೆಷ್ಟೋ ಯುವ ಜನತೆ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಆದ್ದರಿಂದ, ಶೈಕ್ಷಣಿಕ ಪ್ರಗತಿಗೆ ಎಷ್ಟು ಬೇಕೋ ಅಷ್ಟನ್ನೇ ಬಳಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡುವ ಮೂಲಕ ಸಮಾಜ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಮತ, ವಿಶಾಲಾಕ್ಷಮ್ಮ, ದೇವಿರಮ್ಮ, ರಮೇಶ್ ಬಾಬು, ಎಚ್.ಎಮ್.ಅಜೀಮ್, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಬಗರ್ ಹುಕುಂ ಕಮಿಟಿ ಸದಸ್ಯೆ ಸುಜಾತ, ಜ್ಞಾನೇಶ್, ಸೇನೆಯ ಮಂಜುನಾಥ್, ರಾಮಚಂದ್ರ.ಕೆ, ರಾಘವೇಂದ್ರ.ಆರ್, ರಂಗನಾಥ್, ಸಾಧಿಕ್ ಚನ್ನಗಿರಿ, ಕಣ್ಮೇಶ್, ಲಕ್ಷ್ಮಣರಾವ್, ವಿನೋದ್ ಕುಮಾರ್, ತಿಪ್ಪೇಶ್, ಶಿವರಾಜ್ ಕುಮಾರ್, ಮುಜಾಹಿದ್, ಗೋವಿಂದಪ್ಪ, ನಾಗರಾಜ್, ಈರಣ್ಣ, ಗಿರೀಶ್ ಮುಂತಾದವರು ಹಾಜರಿದ್ದರು.
-----ಫೋಟೋ: ಚಿತ್ರ 1,2
ನಗರದ ನೆಹರೂ ಮೈದಾನದ ಎ.ಕೃಷ್ಣಪ್ಪ ರೋಟರಿ ಸಭಾಂಗಣದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.