ಹಿರಿಯೂರು ನಗರದ ಅಸಂಶನ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರವನ್ನು ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಮಕ್ಕಳು ಮಾನಸಿಕವಾಗಿ ಸದೃಢವಾಗಲು ಮಾನವೀಯ ಮೌಲ್ಯಗಳನ್ನು ರೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸ್ಕೌಟ್ ಅಂಡ್ ಗೈಡ್ಸ್ ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ತಿಳಿಸಿದರು.

ನಗರದ ಅಸಂಶನ್ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ದ್ವಿತೀಯ ಸೋಪಾನ ಪರೀಕ್ಷಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳಲ್ಲಿ ಧೈರ್ಯ, ಸಾಹಸ, ನಿಷ್ಠೆ, ಪ್ರಾಮಾಣಿಕತೆ, ದೇಶಪ್ರೇಮ ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಶ್ರದ್ಧೆ, ನಿಷ್ಠೆ ಪ್ರಾಮಾಣಿಕತೆಯಿಂದ ಸ್ಕೌಟ್ ಅಂಡ್ ಗೈಡ್ಸ್ ನಿಯಮಗಳನ್ನು ಪಾಲಿಸಬೇಕು. ಈ ಶಿಬಿರದಲ್ಲಿ ಉತ್ತಮ ಚಟುವಟಿಕೆಯಿಂದ ಪಾಲ್ಗೊಂಡು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾಲೂಕಿಗೆ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಸಹಾಯಕ ಆಯುಕ್ತ ಕಿರಣ್ ಕುಮಾರ್ ಮಾತನಾಡಿ, ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಈ ಶಿಬಿರ ಸಹಕಾರಿಯಾಗಿದೆ. ಈ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜಿಲ್ಲಾ ರಾಜ್ಯ ಮತ್ತು ರಾಷ್ಟ್ರಪತಿ ಪದಕ ಪುರಸ್ಕಾರ ಪಡೆಯಲು ಶ್ರಮಿಸಬೇಕು. ಸತತ ಪ್ರಯತ್ನದಿಂದ ಇದೆಲ್ಲವೂ ಸಾಧ್ಯವಾಗುತ್ತದೆ ಎಂದರು.

ಸ್ಕೌಟ್ ಅಂಡ್ ಗೈಡ್ಸ್ ತಾಲೂಕು ಅಧ್ಯಕ್ಷ ಎಚ್‌.ಎಸ್‌.ಸುಂದರ್ ರಾಜ್ ಮಾತನಾಡಿ, ಪ್ರತಿಯೊಬ್ಬ ಮಗುವಿನಲ್ಲೂ ತನ್ನದೇಯಾದ ಶಕ್ತಿ ಅಡಗಿದೆ. ಅದನ್ನು ಹೊರ ತರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ತಂದೆ-ತಾಯಿಗಳನ್ನು ಗುರು ಹಿರಿಯರನ್ನು ಗೌರವಿಸಬೇಕು. ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಾದ ನೀವು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅಸಂಶನ್ ಶಾಲೆಯ ಮುಖ್ಯಸ್ಥ ವಿಜಯ್ ಫಾದರ್, ಮುಖ್ಯ ಶಿಕ್ಷಕ ದಯಾನಂದ್, ಸ್ಕೌಟ್ ಅಂಡ್ ಗೈಡ್ಸ್ ಸ್ಥಾನಿಕ ಆಯುಕ್ತ ಆರ್.ಭೀಮಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವೀಂದ್ರನಾಯ್ಕ, ಸ್ಕೌಟ್ ಅಂಡ್ ಗೈಡ್ಸ್ ಗೌರವ ಸಲಹೆಗಾರ ಸಣ್ಣ ಭೀಮಣ್ಣ, ತರಬೇತಿ ಮಾರ್ಗದರ್ಶಕ ಪರಮೇಶ್ವರಪ್ಪ, ಕಾರ್ಯದರ್ಶಿಗಳಾದ ಟಿ ಮಹಾಸ್ವಾಮಿ, ಕೋಟಿಲಿಂಗಯ್ಯ, ಖಜಾಂಚಿ ವೆಂಕಟೇಶ್, ನಿರ್ದೇಶಕರಾದ ಬಸವರಾಜು, ಕ್ಲಾರ ರಾಣಿ, ಹಸೀನಾ, ದೇವರತ್ನ, ಶರಣಮ್ಮ ಮುಂತಾದವರು ಉಪಸ್ಥಿತರಿದ್ದರು.

ಈ ಪರೀಕ್ಷಾ ಶಿಬಿರದಲ್ಲಿ 25ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.