ಸಾರಾಂಶ
ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎಸ್‌ಸಿಪಿ - ಟಿಎಸ್‌ಪಿ ಹಣ ದುರ್ಬಳಕೆ ಮಾಡಿಕೊಂಡಿಲ್ಲ. ವಿಪಕ್ಷಗಳು ಸುಮ್ಮನೆ ಸುಳ್ಳು ಆರೋಪ ಮಾಡುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಧರ್ಮಸೇನ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ ಸಿಪಿ - ಟಿಎಸ್ ಪಿಗೆ ಸಂವಿಧಾನದ ರಕ್ಷಣೆ ಇದೆ. ಅನ್ಯ ಉದ್ದೇಶಗಳಿಗೆ ಹಣ ಬಳಕೆ ಮಾಡಿದರೆ ಮತ್ತೆ ಅದನ್ನು ಭರಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಹಣ ದುರ್ಬಳಕೆ ಆಗಿಲ್ಲ ಎಂದರು.ಕಾಂಗ್ರೆಸ್ ಪಕ್ಷ ಡಾ.ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುತ್ತಿದೆ. 95 ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಎಲ್ಲಾಜಾತಿಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಪರಿಶಿಷ್ಟ ಗುತ್ತಿಗೆದಾರರ ಮಿತಿಯನ್ನು 50 ಲಕ್ಷದಿಂದ 1 ಕೋಟಿ ರು. ಹೆಚ್ಚಿಸಿದ್ದೇವೆ. ಒಳಮೀಸಲಾತಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ಕಳೆದಿದೆ. ನಿಗಮ ಮಂಡಳಿಗಳ ಅಧ್ಯಕ್ಷ ಮತ್ತು ನಿರ್ದೇಶಕರ ಆಯ್ಕೆ ವಿಳಂಬವಾಗಿರುವುದಕ್ಕೆ ಕಾರ್ಯಕರ್ತರಿಗೆ ಬೇಸರವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.ಒಂದು ವರ್ಷದ ಹಿಂದೆಯೇ ನಿಗಮಮಂಡಳಿ ಪಟ್ಟಿಸಿದ್ದವಾಗಿತ್ತು ಕೆಲ ದೋಷದಿಂದಾಗಿ ಇನ್ನೂ ಪೂರ್ಣವಾಗಿಲ್ಲ. ಕೆಲ ಕಾಂಗ್ರೆಸ್ ಸದಸ್ಯರಲ್ಲದವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂಬ ಆರೋಪವಿತ್ತು. ಇದನ್ನು ಸರಿಪಡಿಸಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಗ್ರೇಟರ್ ಬೆಂಗಳೂರು ಬಳಿಕ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾವಣೆ ಬರಲಿವೆ. ಪಕ್ಷದ ಕಾರ್ಯಕರ್ತ ರಿಗೆ ಅವಕಾಶ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಪರಿಶಿಷ್ಟ ಜಾತಿಯವರು ಒಗ್ಗಟ್ಟಾಗಿದ್ದಲ್ಲಿ ಹೊರಗಿನವರಿಗೆ ಅವಕಾಶ ಸಿಗುವುದಿಲ್ಲ. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.ದಲಿತ ಸಿಎಂವಾಗಲು ಕಾಯಬೇಕು:
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಕ್ಕೆ ವಾಪಸ್ಸಾಗಲು ಇಷ್ಟಪಡುತ್ತಿಲ್ಲ. ಹಾಗಾಗಿ ಅವರು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗುವುದಾಗಿ ಜಿ.ಪರಮೇಶ್ವರ್ ಮತ್ತು ಮುನಿಯಪ್ಪ ಹೇಳಿದ್ದಾರೆ. ಸಮಯ ಬಂದಾಗ ದಲಿತ ನಾಯಕರು ಮುಖ್ಯಮಂತ್ರಿ ಆಗುತ್ತಾರೆ. ಈಗ ಅಧಿಕಾರ ಹಂಚಿಕೆ ಬಗ್ಗೆ ಪಕ್ಷದ ವರಿಷ್ಠರು ಏನನ್ನೂ ತಿಳಿಸಿಲ್ಲ. ಏನು ಮಾತುಕತೆ ನಡೆದಿದೆ ಎಂಬುದನ್ನು ವರಿಷ್ಠರೇ ಹೇಳಬೇಕು. ಈ ಬಗ್ಗೆ ಮಾತನಾಡುವಷ್ಟು ದೊಡ್ಡವರು ನಾವಲ್ಲ ಎಂದು ಹೇಳಿದರು.ದಲಿತ ಸಿಎಂ ವಿಚಾರದಲ್ಲಿ ಸಮುದಾಯದ ನಾಯಕರಿಗೆ ಅವಕಾಶ ಸಿಕ್ಕಿಲ್ಲ. ಬಿ.ರಾಚಯ್ಯ ಅವರು ಹೆಗಡೆ ಸರ್ಕಾರದಲ್ಲಿ ಅನಾರೋಗ್ಯಕ್ಕೆ ಒಳಗಾದಾಗ 3 ತಿಂಗಳು ಸಿಎಂ ಹುದ್ದೆ ನಿಭಾಯಿಸಿದ್ದರು. ಬಸವಲಿಂಗಪ್ಪ ಅವರು ಅರಸು ಕಾಂಗ್ರೆಸ್ ಗೆ ಹೋಗದೆ ಇಂದಿರಾಗಾಂಧಿ ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು. ಸಮಯ ಬಂದಾಗ ದಲಿತರು ಮುಖ್ಯಮಂತ್ರಿ ಆಗುತ್ತಾರೆ ಎಂದು ಧರ್ಮಸೇನ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಎಸ್ಸಿ-ಎಸ್ಟಿ ಅಧ್ಯಕ್ಷ ನರಸಿಂಹಯ್ಯ, ಕೆಪಿಸಿಸಿ ಹಿರಿಯ ಸಂಚಾಲಕ ಬಾಳಯ್ಯ, ಮುಖಂಡರಾದ ರಾಮಲಿಂಗಮ್, ಶಿವಶಂಕರ್ , ಪದ್ಮಾ ಮತ್ತಿತರರು ಹಾಜರಿದ್ದರು.5ಕೆಆರ್ ಎಂಎನ್ 1.ಜೆಪಿಜಿ
ವಿಧಾನ ಪರಿಷತ್ ಸದಸ್ಯ ಧರ್ಮಸೇನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.