ಸಾರಾಂಶ
ಗದಗ ನಗರದ ಗಾಣಿಗ ಭವನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ನರೇಗಲ್ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ಗದಗ: ಮನೆ-ಮನ ಪರಿವರ್ತನೆ ಮತ್ತು ಪರಿಶುದ್ಧತೆಗೆ ಗ್ರಂಥ, ಹಣತೆ ಮತ್ತು ಪೊರಕೆ ಅವಶ್ಯ ಎಂದು ನರೇಗಲ್ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ನಗರದ ಗಾಣಿಗ ಭವನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರ ಜೀವನದಲ್ಲಿ ಗ್ರಂಥಗಳು ಮಾರ್ಗದರ್ಶಿಗಳಾಗಿವೆ. ಜ್ಞಾನದ ದಿಗಂತವನ್ನು ಹೆಚ್ಚಿಸುವ ಮೂಲಕ ಸನ್ಮಾರ್ಗದಲ್ಲಿ ಮುನ್ನಡೆದು ಜೀವನ್ಮುಕ್ತಿಗೆ ಸಾಧನ ಆಗಿವೆ. ಹಣತೆ ಚಿಕ್ಕ ಗುಡಿಸಲಿನಲ್ಲಿಯೂ ತನ್ನದೇ ಆದ ಪ್ರಕಾಶಮಾನವನ್ನು ಬೀರಿ, ಮನೆ-ಮನದ ಅಂಧಕಾರ ತೊಡೆದು ಹಾಕಿ ಬದುಕಿನ ಬೆಳಕನ್ನು ಅಭಿವ್ಯಕ್ತಿಗೊಳಿಸುವ ಸಂಕೇತವಾಗಿದೆ. ದೀಪಾವಳಿ, ದೀಪಾರಾಧನೆ ಜ್ಞಾನ ಮತ್ತು ಬೆಳಕಿನ ಪ್ರತೀಕ ಆಗಿವೆ ಎಂದರು.ಪೊರಕೆಯು ಸ್ವಚ್ಛತೆಯ ಸಂಕೇತವಾಗಿದೆ. ಮನೆಗಳನ್ನು ಶುಚಿಗೊಳಿಸಲು ಪೊರಕೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಪೊರಕೆ ಇಲ್ಲದಿದ್ದರೆ ಪರಿಸರವೆಲ್ಲ ಕಲುಷಿತಗೊಂಡ ಮಾಲಿನ್ಯ ಉಂಟಾಗುವುದು. ಆದ್ದರಿಂದ ನಮ್ಮ ಪರಿಸರವೆಲ್ಲ ಪರಿಶುದ್ಧವಾಗಿರಲು ಪೊರಕೆಯೂ ಪ್ರಮುಖ ಪಾತ್ರ ವಹಿಸುವುದು. ಸಿದ್ಧಾಂತ ಶಿಖಾಮಣಿ ಅಂತಹ ಗ್ರಂಥಗಳು ಮನುಷ್ಯನ ಬದುಕನ್ನು ಬದಲಿಸಬಲ್ಲದು. ಸ್ವರ್ಗದ ದಾರಿಯನ್ನು ಸುಗಮಗೊಳಿಸಬಲ್ಲದು ಎಂದರು.
ಜಂಗಮವಾಡಿಮಠ ವಾರಾಣಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಮಾತನಾಡಿ, ಸಂಸ್ಕೃತ ಮತ್ತು ಕನ್ನಡ ಅತ್ಯಂತ ಪ್ರಭಾವಶಾಲಿ ಮತ್ತು ಗಟ್ಟಿತನವುಳ್ಳ ಭಾಷೆಯಾಗಿದೆ ಎಂಬುದನ್ನು ಇದುವರೆಗೆ ಪ್ರಕಟಗೊಂಡಿರುವ ಮಹಾನ್ ಗ್ರಂಥಗಳೇ ಸಾಬೀತುಗೊಳಿಸಿವೆ ಎಂದರು.ಸಿದ್ಧಾಂತ ಶಿಖಾಮಣಿ, ಭಗವದ್ಗೀತೆ ಸೇರಿದಂತೆ ಹಲವಾರು ಮಹಾನ್ ಆಧ್ಯಾತ್ಮಿಕ ಗ್ರಂಥಗಳು ಇತರ ಭಾಷೆಗೂ ತರ್ಜುಮೆಗೊಂಡಿದ್ದರೂ ಕನ್ನಡ, ಸಂಸ್ಕೃತಕ್ಕೆ ಇರುವ ತಾಕತ್ತು ಇಂಗ್ಲಿಷ್‌ಗೆ ಬಂದಿಲ್ಲ ಎಂದರು.
ಗಣ್ಯರಾದ ಆರ್.ಎ. ರಬ್ಬನಗೌಡ್ರ, ವಿ.ಸಿ. ಧನ್ನೂರಹಿರೇಮಠ, ಎಸ್.ಎಚ್. ಶಿವನಗೌಡ್ರ, ಚಂದ್ರು ಹಿರಯಾಳಮಠ, ಜಯದೇವ ಮೆಣಸಗಿ, ಶಂಭು ಪಟ್ಟದಕಲ್ಲ, ರಾಜಶೇಖರ ವಸ್ತ್ರದ, ಡಾ. ಶಿವಾನಂದಯ್ಯ ಹಿರೇಮಠ, ಮೃತ್ಯುಂಜಯ ಸಂಕೇಶ್ವರ, ಕಿರಣ ಭೂಮಾ, ಆರ್.ಕೆ. ಮಠದ, ಬಸವರಾಜ ಗಣಾಚಾರಿ ಅವರನ್ನು ಶ್ರೀಗಳು ಸನ್ಮಾನಿಸಿದರು.ಸುವರ್ಣಾ ಹೊಸಂಗಡಿ ಪ್ರಾರ್ಥಿಸಿದರು. ಶಿವಾನಂದಯ್ಯ ಹಿರೇಮಠ ಸ್ವಾಗತಿಸಿದರು. ವಿ.ಕೆ. ಗುರುಮಠ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.