ಎಸ್‌ಡಿಎಂ ಕಾಲೇಜು: ಅಂತರ್‌ ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಚಾಲನೆ

| Published : Mar 07 2025, 12:49 AM IST

ಎಸ್‌ಡಿಎಂ ಕಾಲೇಜು: ಅಂತರ್‌ ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯ ಮತ್ತು ಉಜಿರೆಯ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಪುರುಷ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟನೆ ಉಜಿರೆ ಎಸ್ ಡಿಎಂ ಸಂಸ್ಥೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯನ್ನು ವ್ಯಕ್ತಿಗತ ದಿನಚರಿಯ ಭಾಗವಾಗಿಸಿಕೊಂಡರೆ ಮಾನಸಿಕ ಸ್ಥೈರ್ಯ, ಬೌದ್ಧಿಕ ಬೆಳವಣಿಗೆ ಮತ್ತು ಭಾವನಾತ್ಮಕ ಸಮತೋಲನದ ಪ್ರಜ್ಞೆಯೊಂದಿಗೆ ವ್ಯಕ್ತಿತ್ವ ಸಮಗ್ರಗೊಳಿಸಿಕೊಳ್ಳಬಹುದು ಎಂದು ಉಜಿರ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ಮತ್ತು ಉಜಿರೆಯ ಎಸ್.ಡಿ.ಎಂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ಪುರುಷ ಕಬ್ಬಡ್ಡಿ ಪಂದ್ಯಾವಳಿಯನ್ನು ಇಂದ್ರಪ್ರಸ್ಥ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯ ದಿನಚರಿಯಲ್ಲಿ ಕ್ರೀಡೆಯನ್ನು ಅಳವಡಿಸಿಕೊಂಡಾಗ ವ್ಯಕ್ತಿತ್ವ ವಿಕಸನವಾಗುತ್ತದೆ. ಮಾನಸಿಕವಾಗಿ ಬೌದ್ಧಿಕವಾಗಿ ಭಾವನಾತ್ಮಕವಾಗಿ ಒಬ್ಬ ವ್ಯಕ್ತಿ ಬೆಳವಣಿಗೆಗೆ ಕ್ರೀಡೆ ಬಹಳ ಮುಖ್ಯ. ಅದರ ಜೊತೆಗೆ ಕ್ರೀಡಾಸ್ಫೂರ್ತಿಯು ಅವಶ್ಯಕ. ವಿದ್ಯಾರ್ಥಿಗಳು ಕೇವಲ ಬೌದ್ಧಿಕ ಚಟುವಟಿಕೆಯಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

ದೇಶದ ಅನೇಕ ಕಡೆ ನಡೆದ ಕ್ರೀಡಾಕೂಟಗಳಲ್ಲಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೆ ಪೂರಕವಾದ ಸ್ಫೂರ್ತಿದಾಯಕ ವಾತಾವರಣ ಎಸ್.ಡಿ.ಎಂ ಕಾಲೇಜಿನಿಂದ ದೊರಕುತ್ತಿದೆ ಎಂದರು.ಕಬ್ಬಡ್ಡಿ ಒಂದು ಚುರುಕಿನ ಆಟ. ಇಂತಹ ಆಟಗಳು ವ್ಯಕ್ತಿಯನ್ನು ಆರೋಗ್ಯಕರ ,ಸಮೃದ್ಧ ಹಾಗೂ ಕ್ರೀಯಾಶೀಲರನ್ನಾಗಿಸುತ್ತವೆ. ಸೋಲು ಮತ್ತು ಗೆಲುವುಗಳನ್ನು ಸಮವಾಗಿ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸುವಲ್ಲಿ ಇಂತಹ ಕ್ರೀಡೆಗಳ ಪಾತ್ರ ಅಪಾರ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ ಪಿ. ಮಾತನಾಡಿದರು. ಕಬಡ್ಡಿಯಂತಹ ತಂಡಸ್ಫೂರ್ತಿಯ ಆಟಗಳು ಒಬ್ಬ ಆಟಗಾರನಲ್ಲಿ ತಂಡದ ನಿರ್ವಹಣೆ, ನಾಯಕತ್ವದ ಗುಣ ಹಾಗೂ ಸಂವಹನ ಕಲೆಯನ್ನು ಅಭಿವೃದ್ಧಿಗೊಳಿಸುತ್ತವೆ ಎಂದರು. ಎಸ್.ಡಿ.ಎಂ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕ ರಮೇಶ್ ಎಚ್, ಶಾರದಾ, ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಇದ್ದರು. ಅಧ್ಯಾಪಕ ಡಾ.ಸುವೀರ್ ಜೈನ್ ನಿರೂಪಿಸಿದರು.