ಉಜಿರೆಯ ಎಸ್ ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದ ಪ್ರೊ. ಭಾಸ್ಕರ ಹೆಗಡೆ ಅವರಿಗೆ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ ‘ಭಾಸ್ಕರ ಪರ್ವ’ ಅಭಿನಂದನಾ ಸಮಾರಂಭ
ಬೆಳ್ತಂಗಡಿ: ಎಸ್ ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ 33 ವರ್ಷ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಶನಿವಾರ ವೃತ್ತಿಯಿಂದ ನಿವೃತ್ತರಾದ ಪ್ರೊ. ಭಾಸ್ಕರ ಹೆಗಡೆ ಅವರ ಸರಳ ವ್ಯಕ್ತಿತ್ವ, ಪ್ರಾಯೋಗಿಕ ಅನುಭವ, ದಕ್ಷ ನಾಯಕತ್ವ ಮತ್ತು ಮೌಲ್ಯಶಿಕ್ಷಣ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಗಾಢ ಪ್ರಭಾವ ಬೀರಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಬೆಂಗಳೂರಿನ ಕ್ಷೇಮ ವನದ ಸಿಇಒ ಶ್ರದ್ಧಾ ಅಮಿತ್ ಹೇಳಿದರು.ಶನಿವಾರ ಉಜಿರೆಯ ಎಸ್ ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದ ಪ್ರೊ. ಭಾಸ್ಕರ ಹೆಗಡೆ ಅವರಿಗೆ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ ‘ಭಾಸ್ಕರ ಪರ್ವ’ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಸಾಕ್ಷಚಿತ್ರ ಬಿಡುಗಡೆಗೊಳಿಸಿ, ಗುರುವಂದನೆ ಸಲ್ಲಿಸಿ ಮಾತನಾಡಿದರು.ವಿದ್ಯಾರ್ಥಿಗಳ ಮೇಲೆ ಅವರಿಗೆ ಅಪಾರ ಪ್ರೀತಿ-ವಿಶ್ವಾಸ ಮತ್ತು ಗೌರವ ಇದ್ದು, ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ಕ್ಷಿಪ್ರ ಮಾಹಿತಿ ದೊರಕುವಂತೆ ಮಾಡಿದ ಅವರ ಉತ್ತಮ ಸಂಸ್ಕಾರ, ಜ್ಞಾನ ದಾಸೋಹ ಎಲ್ಲರಿಗೂ ಅಮೂಲ್ಯ ದಾರಿ ದೀಪವಾಗಿ ಪ್ರೇರಕ ಶಕ್ತಿಯಾಗಿದೆ. ಖುಷಿ ಆದಾಗ ಹೇಳದಿದ್ದರೂ ಪರವಾಗಿಲ್ಲ, ಕಷ್ಟವಾದಾಗ, ಸಮಸ್ಯೆಯಾದಾಗ ತಮ್ಮನ್ನು ಸಂಪರ್ಕಿಸುವಂತೆ ಅವರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು ಎಂದರು.
ಪ್ರಾಂಶುಪಾಲರಾಗಿದ್ದ ಡಾ. ಬಿ. ಯಶೋವರ್ಮ ಅವರ ಮಾರ್ಗದರ್ಶನದಲ್ಲಿ ಅವರು ಅನೇಕ ಹೊಸ ಪ್ರಯೋಗಗಳನ್ನು ಆರಂಭಿಸಿದರು. ಅವರ ಅಪಾರ ಶಿಷ್ಯ ವೃಂದವೇ ಅವರ ಅಮೂಲ್ಯ ಆಸ್ತಿ ಎಂದು ಶ್ರದ್ಧಾ ಅಮಿತ್ ಶುಭಾಶಂಸನೆ ಮಾಡಿದರು.ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿ, ಪ್ರೊ. ಭಾಸ್ಕರ ಹೆಗಡೆಯವರು ನೀಡಿದ ಪ್ರಾಯೋಗಿಕ ತರಬೇತಿ, ಜ್ಞಾನ ಮತ್ತು ಕೌಶಲ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಅವರ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಎಸ್ ಡಿಎಂನ ಸಾಂಸ್ಕೃತಿಕ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಗೆ ವಿಶೇಷ ಗೌರವ, ಅಭಿಮಾನ ಉಂಟು ಮಾಡಿದೆ ಎಂದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಮಾತನಾಡಿ, ಡಾ. ಬಿ. ಯಶೋವರ್ಮರ ನೇತೃತ್ವದಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕ್ರಮ ಅನುಷ್ಠಾನಗೊಳಿಸಿದಾಗ, ಪ್ರೊ. ಭಾಸ್ಕರ ಹೆಗಡೆಯವರು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು. ಎಲ್ಲ ವಿದ್ಯಾರ್ಥಿಗಳನ್ನೂ ತಮ್ಮ ಮಕ್ಕಳಂತೆ ಕಂಡು ಮಾರ್ಗದರ್ಶನ, ಪ್ರೇರಣೆ ನೀಡಿದ್ದಾರೆ ಎಂದು ಹೇಳಿ ಅಭಿನಂದಿಸಿದರು.ಪ್ರೊ. ಭಾಸ್ಕರ ಹೆಗಡೆಯವರನ್ನು ಗೌರವಿಸಿ ಅಭಿನಂದಿಸಲಾಯಿತು. ಪ್ರೊ. ಭಾಸ್ಕರ ಹೆಗಡೆ ‘ಚಿಗುರು’ ಸಂಚಿಕೆ ಮತ್ತು ‘ಕದಂಬ’ ಕೃತಿಗಳನ್ನು ಬಿಡುಗಡೆಗೊಳಿಸಿದರು. ಪ್ರೊ. ಭಾಸ್ಕರ ಹೆಗಡೆ ಅವರ ಮಗ ಶಶಾಂಕ ಉಪಸ್ಥಿತರಿದ್ದರು.ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸತೀಶ್ ಕುಮಾರ್ ಅಂಡಿಂಜೆ ಸ್ವಾಗತಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಧನ್ಯವಾದವಿತ್ತರು. ಹಿರಿಯ ವಿದ್ಯಾರ್ಥಿ ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.ಪ್ರತಿ ವರ್ಷ ಐದು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಹಿರಿಯ ವಿದ್ಯಾರ್ಥಿಗಳು ಪ್ರಕಟಿಸಿದರು.