ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕರ್ತವ್ಯನಿರತ ವ್ಯದ್ಯರ ಮೇಲಿನ ದೌರ್ಜನ್ಯ ನಿಲ್ಲಿಸುವಂತೆ ಆಗ್ರಹಿಸಿ ಹಾಗೂ ಹತ್ಯೆಗೆ ತುರ್ತು ನ್ಯಾಯ ದೊರೆಯಬೇಕು ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಸುರಕ್ಷಿತ ಕ್ರಮಗಳನ್ನು ಖಾತ್ರಿಗೊಳಿಸಬೇಕೆಂದು ಒತ್ತಾಯಿಸಿ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಿಂದ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.ನಗರದ ತಣ್ಣೀರುಹಳ್ಳದ ಬಳಿ ಇರುವ ಎಸ್.ಡಿ.ಎಂ. ಕಾಲೇಜು ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂತು. ಇದೇ ವೇಳೆ ವೈದ್ಯಕೀಯ ವಿದ್ಯಾರ್ಥಿಗಳ ಡೀನ್ ಡಾ. ಗಾಯಿತ್ರಿ ಭಟ್ ಮಾಧ್ಯಮದೊಂದಿಗೆ ಮಾತನಾಡಿ, ಕರ್ತವ್ಯ ನಿರತ ವೈದ್ಯರ ಮೇಲೆ ವಿನಾಕಾರಣ ದಬ್ಬಾಳಿಕೆಗಳು ಹೆಚ್ಚಾಗುತ್ತಿದ್ದು, ಇದರಿಂದ ಮಾನಸಿಕವಾಗಿ ತುಂಬ ನೊಂದಿದ್ದೇವೆ. ಇತ್ತೀಚಿಗೆ ಕೋಲ್ಕತಾದಲ್ಲಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ಅವರ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಹತ್ಯೆಯನ್ನು ಈ ಮೂಲಕ ತೀವ್ರವಾಗಿ ಖಂಡಿಸುತ್ತೇವೆ. ಈ ಭೀಕರ ಹಿಂಸಾಚಾರ ಇಡೀ ದೇಶ ಮತ್ತು ವಿಶ್ವವನ್ನು ಬೆಚ್ಚಿ ಬೀಳಿಸಿದೆ. ಹಾಗೆಯೇ ವೈದ್ಯ ವೃತ್ತಿಯಲ್ಲಿ ತೊಡಗುವ ಮೂಲಕ, ಇತರರ ಸೇವೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟಲ್ಪಟ್ಟಿರುವ ವೈದ್ಯರು ಎಂಥಹ ಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿದೆ. ಈ ಯುವ ವೈದ್ಯರು ಗೌರವಾನ್ವಿತ ವೈದ್ಯಕೀಯ ವೃತ್ತಿಪರರು ಮಾತ್ರವಲ್ಲದೆ, ತಮ್ಮ ಅಂತಃಕರಣದ ಸೇವೆಯ ಮೂಲಕ ಅನೇಕರ ಅನಾರೋಗ್ಯವನ್ನು ಗುಣಪಡಿಸಿ, ಜೀವವನ್ನು ಉಳಿಸಿದ ಕರುಣಾಮಯಿ. ಅಂತಹ ವೈದ್ಯರನ್ನು ಕಳೆದುಕೊಂಡಿರುವುದು ಕೇವಲ ಅವರ ಕುಟುಂಬದ ವೈಯಕ್ತಿಕ ದುರಂತವಲ್ಲ. ಅದು ಇಡೀ ಸಮಾಜಕ್ಕೆ ಬಿದ್ದಿರುವ ತೀವ್ರ ಹೊಡೆತವೆಂದು ಪರಿಗಣಿಸಬೇಕಿದೆ ಎಂದರು.
ಘೋರ ಅಪರಾಧ: ಯಾರೇ ಆಗಲಿ, ಇತರರ ಜೀವವನ್ನು ಉಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಮೇಲೆ ನಡೆಸುವ ಇಂತಹ ಹಿಂಸಾತ್ಮಕ, ಘೋರ ಅಂತ್ಯವನ್ನು ಸಹಿಸಲಾಗದು ಎಂದರು. ಈ ಘೋರ ಅಪರಾಧದಲ್ಲಿ, ತಪ್ಪಿತಸ್ಥರನ್ನು ನ್ಯಾಯಾಂಗಕ್ಕೆ ಒಪ್ಪಿಸಲು ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ತುರ್ತು ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಪ್ರಕರಣ ಕುರಿತು ಸಂಪೂರ್ಣ ಮತ್ತು ಪಾರದರ್ಶಕ ತನಿಖೆ ನಡೆಸಿ, ಸಂಬಂಧಿಸಿದವರನ್ನು ಸಂಪೂರ್ಣ ಕಾನೂನಿನ ವ್ಯಾಪ್ತಿಯ ಅಡಿಯಲ್ಲಿ ತಂದು ವೈದ್ಯಕೀಯ ವೃತ್ತಿಪರರ ಸುರಕ್ಷತೆಯ ಬಗ್ಗೆ ವಿಶಾಲ ಸಮುದಾಯಕ್ಕೆ ಭರವಸೆ ಮೂಡಿಸಬೇಕು ಎಂದು ಆಗ್ರಹಿಸಿದರು.ಜೀವ ಭಯ ಇರಬಾರದು: ಈ ದುರಂತ ಘಟನೆಯು ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ, ಮತ್ತು ಭವಿಷ್ಯದಲ್ಲಿ ಅವರನ್ನು ಇಂತಹ ಘಟನೆಗಳಿಂದ ರಕ್ಷಿಸಲು ಕಠಿಣ ಕ್ರಮಗಳ ಅಗತ್ಯತೆಯ ಬಗ್ಗೆ, ತಕ್ಷಣದ ಚರ್ಚೆಯನ್ನೂ ಸಹ ಬಯಸುತ್ತದೆ. ಯಾರೇ ಆಗಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ, ವಿಶೇಷವಾಗಿ ಸಮಾಜದ ಸ್ವಾಸ್ಥ್ಯಕ್ಕೆ ಅಗತ್ಯವಾಗಿರುವಂತಹ ಆರೋಗ್ಯ ಕ್ಷೇತ್ರದಲ್ಲಿರುವವರು ತಮ್ಮ ಜೀವ ಭಯದಲ್ಲಿರುವಂತಾಗಬಾರದು ಎಂದು ಆಗ್ರಹಿಸಿದರು. ತಮ್ಮ ಕೆಲಸದ ಸ್ಥಳಗಳಲ್ಲಿ ಅವರ ಸುರಕ್ಷತೆ ಮತ್ತು ಘನತೆಯನ್ನು ಗೌರವಿಸಲಾಗುತ್ತದೆ ಮತ್ತು ರಕ್ಷಿಸಲಾಗುತ್ತದೆ ಎಂದು ಈ ಮೂಲಕ ಮಹಿಳೆಯರಲ್ಲಿ ಸುರಕ್ಷತಾ ಭಾವನೆ ಹೊಂದುವಂತೆ ಮಾಡಬೇಕು. ಡಾ. ಮೌಮಿತಾ ಅವರ ಕುಟುಂಬದೊಂದಿಗೆ ಇಡೀ ವೈದ್ಯಕೀಯ ಸಮುದಾಯದ ಸಮಸ್ತರು ಈ ಕಷ್ಟದ ಸಮಯದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ಘಟನೆಗೆ ಶೀಘ್ರವಾಗಿ ನ್ಯಾಯ ಸಿಗಲಿ ಮತ್ತು ಮುಂದೆ ಇಂತಹ ದುರಂತಗಳು ನಡೆಯದಂತೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಎಂ. ಕಾಲೇಜು ಮತ್ತು ಆಸ್ಪತ್ರೆಯ ಡಾ. ಪ್ರಸನ್ನ, ಡಾ. ಅಶೋಕ್ ಲಮಾಣಿ, ಡಾ. ಯಶಸ್, ಡಾ. ಅಮರ್, ಹರ್ಷಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.