ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯದ ಸಮಗ್ರ ಅಭಿವೃದ್ಧಿಯ ಜೊತೆಯಲ್ಲೇ ಚಾಮರಾಜನಗರ ಜಿಲ್ಲೆಯ ಬೇಡಿಕೆಗಳಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದಿರುವವರನ್ನು ಸೇರಿಸಿ ಕರ್ನಾಟಕ ರಾಜ್ಯಕ್ಕಾಗಿ ಜನತಾ ಬಜೆಟ್ ಎಂಬ ಬೇಡಿಕೆಗಳ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಪುಸ್ತಕದಲ್ಲಿರುವ ಜನಪರ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರಿನಲ್ಲಿ ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸಿ ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವಂತೆ ಸಿಎಂ, ಸಚಿವರು, ಶಾಸಕರಿಗೆ ಮನವಿ ಪತ್ರ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಆಕ್ಸಿಜನ್ ದುರ್ಘಟನೆಯ ಸಂತ್ರಸ್ತ ಕುಟುಂಬಸ್ಥರಲ್ಲಿ ಒಬ್ಬರಿಗೆ ಕಾಯಂ ಸರ್ಕಾರಿ ನೌಕರಿ ನೀಡುವ ಕುರಿತು ಸರ್ಕಾರ ಭರವಸೆ ನೀಡಿತ್ತು. ಈಗ ಬಜೆಟ್‌ನಲ್ಲಿ ಕಾಯಂ ಸರ್ಕಾರಿ ನೌಕರಿ ಘೋಷಣೆ ಮಾಡಬೇಕು ಎಂದರು.ಜಿಲ್ಲೆಯಲ್ಲಿ ಹಲವಾರು ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸೂಕ್ತ ಕಲಿಕೆ ವಾತಾವರಣ ನಿರ್ಮಾಣವಾಗುತ್ತಿಲ್ಲ, ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ಕೊಡಬೇಕು, ಜಿಲ್ಲಾಕೇಂದ್ರದಲ್ಲಿ ಏಳನೇ ತರಗತಿವರಗೆ ಮಾತ್ರ ಉರ್ದು ಶಾಲೆಯಿದ್ದು, ಉರ್ದು ಪ್ರೌಢಶಾಲೆ ಇಲ್ಲದೇ ಕಲಿಕೆಗೆ ತೊಂದರೆಯಾಗುತ್ತಿದ್ದು, ಉರ್ದು ಪ್ರೌಢಶಾಲೆ ಮಂಜೂರು ಮಾಡಬೇಕು ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಅಭಿವೃದ್ಧಿ ಹಾಗೂ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಿಗೂ ಸಮಗ್ರ ಅಭಿವೃದ್ಧಿಗೆ ವಿಶೇಷ ಮತ್ತು ಗರಿಷ್ಠ ಅನುದಾನ ನೀಡಬೇಕು, ಜಿಲ್ಲಾಸ್ಪತ್ರೆಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು.ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಮೋಸ ಮಾಡಿದೆ. ಕೇವಲ ಶೇ.0.8ರಷ್ಟು ಅನುದಾನವನ್ನು ಕೊಟ್ಟಿದೆ. ಈ ಬಾರಿ ಅಲ್ಪಸಂಖ್ಯಾತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಶೇ.14ರಷ್ಟು ಅನುದಾನವನ್ನು ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯದಡಿಯಲ್ಲಿ ನೀಡಬೇಕು ಎಂದು ಆಗ್ರಹಿಸಿದರು.
ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳದೇ ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು. ಒಟ್ಟಾರೆಯಾಗಿ ಸಾಮಾಜಿಕ ಸೌಕರ್ಯಗಳು ಕಲ್ಪಿಸುವ ಮೂಲಕ ಸಮಾಜದ ಸಮತೋಲನ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು, ಶೋಷಿತ ಸಮುದಾಯಗಳ ಭವ್ಯ ಭವಿಷ್ಯಕ್ಕಾಗಿ ಜನಪರ ಜನತಾ ಬಜೆಟ್ ಮಂಡಿಸಬೇಕು ಎಂದು ಎಸ್‌ಡಿಪಿಐ ಆಗ್ರಹಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಖಲೀಲ್ ಉಲ್ಲಾ ಎನ್, ಉಪಾಧ್ಯಾಕ್ಷ ಸಿ.ಕೆ ನಯಾಜ್ ಉಲ್ಲಾ, ಟೌನ್ ಅಧ್ಯಕ್ಷ ಮಜರ್‌ಖಾನ್ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))