ಮೋದಿ ಆಡಳಿತ ನಿರಂಕುಶ ಪ್ರಭುತ್ವದ ಪರಮಾವಧಿ

| Published : Dec 21 2023, 01:15 AM IST

ಸಾರಾಂಶ

೧೪೧ ಮಂದಿ ವಿಪಕ್ಷದ ಸಂಸತ್ ಸದಸ್ಯರನ್ನು ಅಮಾನತು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ಯೆಗೈದಿದೆ ಎಂದು ಆರೋಪಿಸಿ ಹನೂರಿನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು

ಕೇಂದ್ರ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಹತ್ಯೆಗೈದಿದೆ । ಎಸ್‌ಡಿಪಿಐ ಆಕ್ರೋಶಕನ್ನಡಪ್ರಭ ವಾರ್ತೆ ಚಾಮರಾಜನಗರ

೧೪೧ ಮಂದಿ ವಿಪಕ್ಷದ ಸಂಸತ್ ಸದಸ್ಯರನ್ನು ಅಮಾನತು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ಯೆಗೈದಿದೆ. ಇದು ನಿರಂಕುಶ ಪ್ರಭುತ್ವದ ಪರಮಾವಧಿ ಎಂದು ಆರೋಪಿಸಿ ನಗರದಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಭಿತ್ತಿ ಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಉಪಾಧ್ಯಕ್ಷ ಸೈಯದ್ ಅರೀಫ್‌ ಮಾತನಾಡಿ, ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಅಲ್ಲಿ ಅಧಿಕಾರ ಮತ್ತು ಪಕ್ಷದ ಪ್ರಾಮುಖ್ಯತೆ ಎಷ್ಟಿರುತ್ತದೋ ಅಷ್ಟೇ ವಿಪಕ್ಷದ ಅವಶ್ಯಕತೆಯೂ ಮುಖ್ಯವಾಗಿರುತ್ತದೆ. ವಿಪಕ್ಷವಿಲ್ಲದ ಪ್ರಜಾಪ್ರಭುತ್ವ ಆತ್ಮವಿಲ್ಲದ ದೇಹವಿದ್ದ ಹಾಗೆ. ಮೋದಿ ಸರ್ಕಾರ ಸುಮಾರು ೧೪೧ ವಿಪಕ್ಷದ ಸಂಸತ್ ಸದಸ್ಯರನ್ನು ಅಂದರೆ ಸುಮಾರು ೭೦% ವಿರೋಧ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಅಮಾನತು ಮಾಡಿರುವ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹತ್ಯೆಗೈದಿದೆ ಎಂದು ಆರೋಪಿಸಿದರು

ಸದನದಲ್ಲಿ ಬಹುತೇಕ ಎಲ್ಲ ವಿಪಕ್ಷ ಸದಸ್ಯರು ಅಮಾನತಾಗಿ ಹೊರಗುಳಿದಿರುವ ಸಂದರ್ಭದಲ್ಲಿ ಭಾರತದ ನ್ಯಾಯ ಸಂಹಿತೆಗಳನ್ನು ಮರು ವ್ಯಾಖ್ಯಾನ ಮಾಡುವಂತಹ ಬಹುಮುಖ್ಯ ಕಾಯಿದೆಯನ್ನು ಮಂಡಿಸಿ ಅದನ್ನು ಅಂಗೀಕರಿಸುವ ಸಂಚು ಮಾಡಲಾಗಿದೆ. ಈ ಅಮಾನತುಗಳ ಹಿಂದೆ ಈ ಮಸೂದೆಗೆ ಎದುರಾಗಬಹುದಾದ ಆಕ್ಷೇಪಣೆ ಮತ್ತು ವಿರೋಧವನ್ನು ಇಲ್ಲವಾಗಿಸುವುದೇ ಆಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪ್ರದಾನ ಕಾರ್ಯದರ್ಶಿ ಮಹೇಶ್, ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಜಿಲ್ಲಾ ಸಮಿತಿ ಸದಸ್ಯರಾದ ಸಿ.ಕೆ. ನಯಾಜ್ ಉಲ್ಲಾ, ಇಸ್ತಾರ್ ಪಾಷ, ದಲಿತ ಮುಖಂಡ ಸಂಘಸೇನಾ ಇದ್ದರು. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿದೇಶದ ಅತಿದೊಡ್ಡ ಪಂಚಾಯತ್ ಎಂದು ಕರೆಯಲ್ಪಡುವ ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬ್‌ ಸ್ಫೋಟಿಸಿರುವುದು ಮೋದಿ ಸರ್ಕಾರದ ವೈಫಲ್ಯ. ಆ ಕುರಿತು ಸಂಸತ್ತಿನಲ್ಲಿ ದೇಶದ ಗೃಹಮಂತ್ರಿ ಉತ್ತರ ನೀಡಬೇಕಾದದ್ದು ಅವರ ಪ್ರಾಥಮಿಕ ಕರ್ತವ್ಯ. ಆದರೆ ಸರ್ವಾಧಿಕಾರಿ ಧೋರಣೆಯುಳ್ಳ ಈ ಸರ್ಕಾರ ಉತ್ತರ ನೀಡುವ ಬದಲು ಸಂಸತ್‌ನಲ್ಲಿ ಚರ್ಚೆಗೆ ಒತ್ತಾಯಿಸಿದ ವಿಪಕ್ಷದ ಸಂಸದರನ್ನೇ ಅಮಾನತು ಮಾಡುವ ಮೂಲಕ ವಿಪಕ್ಷದ ಬಾಯಿಯನ್ನು ಮಾತ್ರವಲ್ಲ, ಇಡೀ ದೇಶದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ. ಇದರಿಂದ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯ ವಾತಾರಣ ಸೃಷ್ಟಿಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ವಿರುದ್ಧ ಎಸ್‌ಡಿಪಿಐ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.