ಹುಬ್ಬಳ್ಳಿಯಲ್ಲಿ ವಕ್ಫ್‌ ತಿದ್ದುಪಡಿ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ: ಕೇಸ್‌

| Published : Apr 01 2025, 12:48 AM IST

ಹುಬ್ಬಳ್ಳಿಯಲ್ಲಿ ವಕ್ಫ್‌ ತಿದ್ದುಪಡಿ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ: ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಡಿಪಿಐ ಕಾರ್ಯಕರ್ತ ಅಬ್ದುಲ್‌ ಗಫೂರ್‌ ಕುರಹಟ್ಟಿ ಎಂಬಾತ ಪ್ಯಾಲಿಸ್ತಾನಿ ಧ್ವಜ ಹಿಡಿದುಕೊಂಡು ತನ್ನ ಬೆಂಬಲಿಗರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ: ವಕ್ಫ್‌ ಕಾಯ್ದೆ ತಿದ್ದುಪಡಿ ವಿಧೇಯಕ -2024ನ್ನು ವಿರೋಧಿಸಿ ಎಸ್‌ಡಿಪಿಐ ಕಾರ್ಯಕರ್ತರು ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ವೇಳೆ ಕೆಲವರು ಕೈಗೆ ಕಪ್ಪು ಪಟ್ಟಿ ಧರಿಸಿ, ತಿದ್ದುಪಡಿ ವಿಧೇಯಕ ವಿರೋಧಿಸಿದರು. ಪ್ರಾರ್ಥನೆ ಮುಗಿದ ಬಳಿಕ ಫಲಕ, ಬ್ಯಾನರ್‌ಗಳನ್ನು ಪ್ರದರ್ಶಿಸಿ, ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಈ ನಡುವೆ ಇದರ ವಿರುದ್ಧ ಸಂಜೆ ವೇಳೆ ಉಪನಗರ ಠಾಣೆಯ ಎದುರು ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಸ್‌ಡಿಪಿಐ ಕಾರ್ಯಕರ್ತರೊಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಎಸ್‌ಡಿಪಿಐ ಕಾರ್ಯಕರ್ತ ಅಬ್ದುಲ್‌ ಗಫೂರ್‌ ಕುರಹಟ್ಟಿ ಎಂಬಾತ ಪ್ಯಾಲಿಸ್ತಾನಿ ಧ್ವಜ ಹಿಡಿದುಕೊಂಡು ತನ್ನ ಬೆಂಬಲಿಗರೊಂದಿಗೆ ಸೇರಿ ಪ್ರತಿಭಟನೆ ನಡೆಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶವನ್ನು ವಿಭಜಿಸುತ್ತಿದೆ. ಮುಸ್ಲಿಮರ ಆಸ್ತಿಗಳ ಮೇಲೆ ಕಣ್ಣಿಟ್ಟಿದೆ ಎಂದು ಆರೋಪಿಸಿರುವ ಬರಹದ ಫಲಕಗಳನ್ನು ಪ್ರದರ್ಶಿಸಿದರು. ಹಳೇಹುಬ್ಬಳ್ಳಿ ಇಂಡಿಪಂಪ್‌ ಬಳಿಯೂ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಎಸ್‌ಡಿಪಿಐ ಕಾರ್ಯಕರ್ತರನ್ನು ಅಲ್ಲಿಂದ ಕಳುಹಿಸಿದರು.

ದೂರು ದಾಖಲು: ರಂಜಾನ್‌ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಸಂಘ ಪರಿವಾರ (ಆರ್‌ಎಸ್‌ಎಸ್‌)ದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿರುವ ಎಸ್‌ಡಿಪಿಐ ಕಾರ್ಯಕರ್ತರ ಬಂಧನ ಮಾಡಬೇಕೆಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಉಪ ನಗರ ಪೊಲೀಸ್‌ ಠಾಣೆ ಎದುರಿಗೆ ಪ್ರತಿಭಟನೆ ನಡೆಸಿದರು. ಎಸ್‌ಡಿಪಿಐ ಕಾರ್ಯಕರ್ತ ಅಬ್ದುಲ್‌ಗಫೂರ್‌ ಕುರಹಟ್ಟಿ ಎಂಬಾತ ಮತ್ತು ಆತನ ಸಹಚರರು ಪ್ಯಾಲಿಸ್ತಾನಿ ಧ್ವಜ ಹಿಡಿದುಕೊಂಡು, ಶಾಂತಿ ಭಂಗ ಮಾಡಲು ಯತ್ನಿಸಿದ್ದಾರೆ. ಅಲ್ಲದೆ, ದೇಶವನ್ನು, ಮನಸ್ಸನ್ನು, ಒಡೆದವರು ಮುಸ್ಲಿಮರ ಆಸ್ತಿಗೆ ಕಣ್ಣು ಹಾಕಿದ್ದಾರೆ ಹಾಗೂ ಬ್ರಿಟಿಷರ ವಿರುದ್ಧ ಸಮರ ಸಾರಿದ ಮುಸ್ಲಿಮರಿಗೆ ಜುಜುಬಿ ಸಂಘ ಪರಿವಾರ ಅದ್ಯಾವ ಲೆಕ್ಕ ಎಂಬ ಪ್ಲೇ ಕಾರ್ಡ್‌ ಪ್ರದರ್ಶನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ತರಹದ ಪೋಸ್ಟ್‌ರಗಳನ್ನು ಪ್ರದರ್ಶನ ಮಾಡುವ ಮೂಲಕ ಸಮಾಜದಲ್ಲಿ ಬೇರೆ ಬೇರೆ ಧರ್ಮದ, ಜನಾಂಗದವರ ಮೇಲೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡುವ ವದಂತಿಯನ್ನು ಹಬ್ಬಿಸಿ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಮತ್ತು ಸಮಾಜದಲ್ಲಿ ಶಾಂತಿ ಭಂಗವನ್ನುಂಟು ಮಾಡಲು ಉದ್ದೇಶಪೂರ್ವಕವಾಗಿ ಹಿಂದೂ ಕೋಮಿನ ಜನರಿಗೆ ಉದ್ರೇಕಿಸಿದ್ದು, ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಿವಂತೆ ರಘು ಯಲ್ಲಕ್ಕನವರ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.ಈ ವಿಷಯ ಗೊತ್ತಾಗುತ್ತಿದ್ದಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಉಪನಗರ ಪೊಲೀಸ್‌ ಠಾಣೆ ಎದುರು ಜಮಾವಣೆ ಆಗಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಹಿಂದೂ ಮುಖಂಡ ಸಂಜೀವ ಬಡಸ್ಕರ್ ಮಾತನಾಡಿ, ಹಿಂದೂಗಳ ಭಾವನೆ ಧಕ್ಕೆ ಉಂಟುಮಾಡುವ ಬ್ಯಾನರ್ ಹಿಡಿದು ಅಲೆದಾಡಿದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಬೆಳಿಗ್ಗೆ ಘಟನೆ ನಡೆದಿದ್ದು, ಸುಮೊಟೊ ಪ್ರಕರಣ ದಾಖಲಿಸಿಕೊಂಡು ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಏನೂ ಕ್ರಮಕೈಗೊಂಡಿಲ್ಲ. ಆಯುಕ್ತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ಹಿಂದೂ ಮುಖಂಡರಾದ ಅಶೋಕ ಅಣ್ವೇಕರ್, ರಮೇಶ ಕದಂ, ಶಿವಾನಂದ ಸತ್ತಿಗೇರಿ, ಗಂಗಾಧರ ಶೆಟ್ಟರ, ಸುನೀಲ ಕಟ್ಟಿಮನಿ, ವಿವೇಕ ಮೊಕಾಶಿ, ವಿಜಯ ಕ್ಷಿರಸಾಗರ, ಪ್ರಶಾಂತ ನರಗುಂದ ಇದ್ದರು.