ಕಾಂತರಾಜ್ ವರದಿ ಜಾರಿಗೆ ಒತ್ತಾಯಿಸಿ ಎಸ್ ಡಿಪಿಐ ಪ್ರತಿಭಟನೆ
KannadaprabhaNewsNetwork | Published : Oct 14 2023, 01:00 AM IST / Updated: Oct 14 2023, 01:01 AM IST
ಕಾಂತರಾಜ್ ವರದಿ ಜಾರಿಗೆ ಒತ್ತಾಯಿಸಿ ಎಸ್ ಡಿಪಿಐ ಪ್ರತಿಭಟನೆ
ಸಾರಾಂಶ
ರಾಮನಗರ: ಕಾಂತರಾಜ್ ಆಯೋಗದ ಜಾತಿ ಜನಗಣತಿ ವರದಿ ಸಾರ್ವಜನಿಕಗೊಳಿಸಬೇಕು ಹಾಗೂ ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ಪ್ರಮಾಣವನ್ನು ಶೇ 8ಕ್ಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಮನಗರ: ಕಾಂತರಾಜ್ ಆಯೋಗದ ಜಾತಿ ಜನಗಣತಿ ವರದಿ ಸಾರ್ವಜನಿಕಗೊಳಿಸಬೇಕು ಹಾಗೂ ಮುಸ್ಲಿಂ ಸಮುದಾಯದ 2ಬಿ ಮೀಸಲಾತಿ ಪ್ರಮಾಣವನ್ನು ಶೇ 8ಕ್ಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ತಾಲೂಕು ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, 2015ರಲ್ಲಿ ರಾಜ್ಯದಲ್ಲಿ 1.3 ಕೋಟಿ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ಮಾಡಲಾಗಿದೆ. ಇದಕ್ಕಾಗಿ 187 ಕೋಟಿ ರುಪಾಯಿ ಖರ್ಚಾಗಿದೆ. ಆದರೆ, ಸಮೀಕ್ಷೆ ನಡೆಸಿದ ಕಾಂಗ್ರೆಸ್ ಸರ್ಕಾರ ವರದಿಯನ್ನು ಸ್ವೀಕಾರ ಮಾಡಲಿಲ್ಲ. ಇದೀಗ ಸರ್ಕಾರ ವರದಿ ಸ್ವೀಕರಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಮೀಕ್ಷೆ ವರದಿಯಲ್ಲಿ ಕಂಡು ಬರಬಹುದಾದ ಪ್ರತಿ ಜಾತಿಯ ಸಾಮಾಜಿಕ, ಶೈಕ್ಷಣಿಕ , ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಪ್ರವರ್ಗಗಲ ಮರು ವಿಂಗಡಣೆ ಆಗಬೇಕಿದೆ. ಪ್ರತಿ 10 ವರ್ಷಗಳಿಗೊಮ್ಮೆ ಪ್ರವರ್ಗಗಳ ಮರು ವಿಂಗಡಣೆ ಆಗಬೇಕಿದೆ. ಆದರೆ, 29 ವರ್ಷ ಕಳೆದರೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧರಿತ ಮಾಹಿತಿಯನ್ನು ಮೂರು ಹಂತದ ಪರಿಶೀಲನೆಗೆ ಒಳಪಡಿಸಿ ಪ್ರತ್ಯೇಕ ರಾಜಕೀಯ ಮೀಸಲಾತಿ ರೂಪಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ 2010 ರಲ್ಲಿ ರಾಜ್ಯಗಳಿಗೆ ಆದೇಶ ನೀಡಿದೆ, ಹಾಗಾಗಿ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂತರಾಜ್ ವರದಿ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಹಿಂದಿನ ಬಿಜೆಪಿ ಸರ್ಕಾರ ಒಬಿಸಿ ವರ್ಗದಿಂದ ಮುಸ್ಲಿಮರನ್ನು ಹೊರಗಿಡಲು ನಿರ್ಧರಿಸಿ 2 ಬಿ ವರ್ಗದಲ್ಲಿ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿತ್ತು. ಸುಪ್ರೀಂ ಕೋರ್ಟ್ ಹಿಂದುಳಿದವರ ಮೀಸಲಾತಿಯಿಂದ ಮುಸ್ಲಿಂ ಸಮುದಾಯವನ್ನು ಕೈ ಬಿಟ್ಟಿರುವುದು ಸಂವಿಧಾನ ಬಾಹಿರ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಂತಿಮ ವರದಿಗೆ ಕಾಯದೇ ಮಧ್ಯಂತರ ವರದಿ ಆಧಾರದಲ್ಲಿ ಮೀಸಲಾತಿ ಹಿಂಪಡೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿತ್ತು. ಅದರಂತೆ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವ ಭರವಸೆ ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಮುಸ್ಲಿಂ ಸಮುದಾಯದ 2 ಬಿ ಮೀಸಲಾತಿ ರದ್ದತಿಯ ಬಿಜೆಪಿ ಸರ್ಕಾರದ ಶಿಫಾರಸ್ಸನ್ನು ರದ್ದು ಮಾಡಿ ನ್ಯಾಯಾಲಯದಲ್ಲಿರುವ ದಾವೆಯನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ 18 ರಷ್ಟು ಇರುವುದರಿಂದ 2 ಬಿ ಮೀಸಲು ಪ್ರಮಾಣವನ್ನ ಶೇ 8ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಗಳು ರಚಿಸಿದಂತಹ ಕಾಕಾ ಕಾಲೇಲ್ಕರ್ ವರದಿ, ರೆಹಮಾನ್ ಖಾನ್ ವರದಿ, ರಾಜೇಂದ್ರ ಸಾಚಾರ್ ವರದಿ, ರಂಗನಾಥ್ ಮಿಶ್ರಾ ವರದಿಗಳೆಲ್ಲವೂ ಮುಸ್ಲಿಮರು ಕಡೆಗಣಿಸಲ್ಪಟ್ಟಿರುವ ಹಾಗೂ ಶೋಷಣೆಗೆ ಒಳಗಾಗಿದ್ದಾರೆಂದು ದೃಢೀಕರಿಸಿವೆ. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮುಸ್ಲಿಮರ ಸಂಖ್ಯೆ ತೀರಾ ಕಡಿಮೆ ಇದೆ. ಈ ಅನ್ಯಾಯವನ್ನು ಸರಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೈಯದ್ ಶಹಬಾಜ್ ಅಲಿ, ಜಿಲ್ಲಾ ಉಪಾಧ್ಯಕ್ಷ ಚಾನ್ ಪಾಷಾ, ಜಿಲ್ಲಾ ಕಾರ್ಯದರ್ಶಿ ಅಮ್ಜದ್ ಷರೀಫ್, ರಾಮನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಸಾದುಲ್ಲಾ , ಚನ್ನಪಟ್ಟಣ ಕ್ಷೇತ್ರ ಅಧ್ಯಕ್ಷ ಮಹಮ್ಮದ್ ಫಾಜಿಲ್, ಮುಖಂಡರಾದ ಅಜೀಜ್ ಉಲ್ಲಾ ಷರೀಫ್, ಅಬ್ದುಲ್ ಷರೀಫ್, ಮತೀನ್, ಫೈರೋಜ್ ಅಲಿ ಖಾನ್, ಅಫ್ರೋಜ್ ಅಲಿ ಖಾನ್ ಮತ್ತಿತರರು ಭಾಗವಹಿಸಿದ್ದರು. 13ಕೆಆರ್ ಎಂಎನ್ 4.ಜೆಪಿಜಿ ರಾಮನಗರ ತಾಲೂಕು ಕಚೇರಿ ಎದುರು ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.