ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸಿದ ಸರ್ಕಾರದ ನಡೆ ಖಂಡಿಸಿ, ನ್ಯಾಯ ಮರೀಚಿಕೆ ಹುಸಿಯಾದ ಭರವಸೆ ಎಂಬ ಘೋಷ ವಾಕ್ಯದಲ್ಲಿ ಎಸ್‌ಡಿಪಿಐ ವತಿಯಿಂದ ಬಿಸಿರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಜ್ ಶರೀಫ್ ಕಟ್ಟೆ ಮಾತನಾಡಿ, ಪರಿಹಾರ ವಿಳಂಬ ನೀತಿ ಹಾಗೂ ಪ್ರಮುಖ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬಜ್ಪೆಯಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಬಳಿಕ ಅನೇಕ ಕಡೆಗಳಲ್ಲಿ ಚೂರಿ ಇರಿತ ಮಾಡಿದರು, ಆದರೆ ಯಾರೂ ಸಿಗದೆ ಇದ್ದಾಗ ಅಮಾಯಕ ಅಬುಲ್ ರಹಿಮಾನ್ ನ ಕೊಲೆ ಮಾಡಿದರು ಎಂದು ಆರೋಪಿಸಿದರು.
ಅಮಾಯಕರ ಕೊಲೆಗಳಿಗೆ ದುಡ್ಡಿನಿಂದ ಆತ್ಮಕ್ಕೆ ಶಾಂತಿ ಸಿಗುವುದು ಇಲ್ಲ, ಕೊಲೆಗೆ ಸಹಕಾರ ನೀಡಿದ ಎಲ್ಲರ ಬಂಧನವಾಗಬೇಕು, ಅವರಿಗೆ ಶಿಕ್ಷೆಯಾಗಬೇಕು. ಅವಾಗ ಮಾತ್ರ ಕೊಲೆಗೆ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದರು.ಎರಡು ಕೊಲೆಗಳು ನಡೆದ ಬಳಿಕ,ಕುಟುಂಬಗಳಿಗೆ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದೆ. ಸರ್ವ ಪಕ್ಷದ ನಿಯೋಗದ ಜೊತೆ ಹೋರಾಟ ಮಾಡುತ್ತಿದೆ. ನ್ಯಾಯ ಸಿಗುವವರೆಗೆ, ಮತ್ತು ಶಿಕ್ಷೆಯಾಗುವವರೆಗೆ ಎಸ್.ಡಿ.ಪಿ.ಐ. ಹೋರಾಟ ಮುಂದುವರಿಸಿಲಿದೆ ಎಂದು ಅವರು ತಿಳಿಸಿದರು.ರಾಜ್ಯ ಸಮಿತಿ ಸದಸ್ಯ ಅತವುಲ್ಲಾ ಜೋಕಟ್ಟೆ ಮಾತನಾಡಿ ಕೊಲೆ ಮಾಡಿದ ಕೊಲೆಗಡುಕರಿಗೆ ತಿಂಗಳೊಳಗೆ ಜಾಮೀನು ಸಿಗುವುದಾದರೆ, ಇಲ್ಲಿ ನ್ಯಾಯ ಎಲ್ಲಿದೆ ಎಂದು ಎಸ್.ಡಿ.ಪಿ.ಐ. ಪ್ರಶ್ನೆ ಮಾಡುತ್ತಿದೆ ಎಂದರು.ಪ್ರಮುಖರಾದ ಮಹಮ್ಮದ್ ಶರೀಫ್, ಅಕ್ಟರ್ ಆಲಿ, ಅಬ್ದುಲ್ ಜಲೀಲ್, ಸಿದ್ದೀಕ್, ಮೊನಿಶ್ ಆಲಿ, ಶಾಹುಲ್ ಹಮೀದ್ ಸಿದ್ದೀಕ್ ಪುತ್ತೂರು, ಜಮಾಲ್ ಜೋಕಟ್ಟೆ, ಅಕ್ಟರ್ ಬೆಳ್ತಂಗಡಿ, ಅಶ್ರಫ್ ಇಬ್ರಾಹಿಂ ಆಲ್ ಆದಿ ತಂಗಳ್, ಹನೀಫ್ ಪುಂಜಾಲಕಟ್ಟೆ, ಅಶ್ರಫ್ ತಲಪಾಡಿ, ಸಹಿತ ಜಿಲ್ಲಾ ಸಮಿತಿ ಪದಾಧಿಕಾರಿಗಳು ಇದ್ದರು.