ಬಜೆಟ್‌ನಲ್ಲಿ ಮಲ್ಪೆಗೆ ಸಿ ಆ್ಯಂಬುಲೆನ್ಸ್: ಮಂಕಾಳ ವೈದ್ಯ ಭರವಸೆ

| Published : Feb 06 2024, 01:33 AM IST

ಸಾರಾಂಶ

ಸೋಮವಾರ ಮಲ್ಪೆ ಬಂದರಿಗೆ ಭೇಟಿ ನೀಡಿದ ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡ ಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ, ಸಮುದ್ರದಲ್ಲಿ ಸಂಭವಿಸುವ ದುರಂತಗಳ ಹಿನ್ನೆಲೆಯಲ್ಲಿ ಬಹಳ ದಿನದಿಂದಲೂ ಈ ಭಾಗದ ಮೀನಿಗಾರರು ಸೀ-ಆಂಬುಲೆನ್ಸ್ ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಇಟ್ಟು ಮಲ್ಪೆ ಬಂದರಿಗೂ ಸಹ ಸೀ-ಆಂಬುಲೆನ್ಸ್ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬೋಟುಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶದ ಸಮಸ್ಯೆ ಇದೆ. ಆದ್ದರಿಂದ ಬಂದರು ವಿಸ್ತರಣೆಗೆ ನೀಲನಕ್ಷೆ ತಯಾರಿಸಲಾಗುತ್ತಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡ ಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದ್ದಾರೆ.

ಸೋಮವಾರ ಮಲ್ಪೆ ಬಂದರಿಗೆ ಭೇಟಿ ನೀಡಿದ ಅವರು ಮೀನುಗಾರರ ಬೇಡಿಕೆಗೆ ಸ್ಪಂದಿಸಿ ಮಾತನಾಡಿದರು.

ಮಲ್ಪೆ ಬಂದರಿನ ವಿವಿಧ ಕಾಮಗಾರಿಗಳಿಗೆ 2017-18 ನೇ ಸಾಲಿನಲ್ಲಿಯೇ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಸಿ.ಆರ್.ಝಡ್. ಸಮಸ್ಯೆಯಿಂದ ಕಾಮಗಾರಿಗಳನ್ನು ಕೈಗೊಳ್ಳಲಾಗಿಲ್ಲ. ಆದ್ದರಿಂದ ರಾಜ್ಯದ 320 ಕಿ.ಮೀ. ಕರಾವಳಿಯ ಸಿ.ಆರ್.ಝಡ್. ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಈ ಸಮಸ್ಯೆ ನಿವಾರಣೆಯಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಬಂದರಿನಲ್ಲಿ ಬೋಟುಗಳ ಸಂಚಾರಕ್ಕೆ ಅಡ್ಡಿಯಾಗಿರುವ ಹೂಳನ್ನು ತೆಗೆಯಲು 3 ಕೋಟಿ ರು. ವೆಚ್ಚದ ಯೋಜನೆ ಕೈಗೊಳ್ಳಲಾಗುತ್ತಿದೆ. ಮುಂದೆ ವರ್ಷಪೂರ್ತಿ ಹೂಳು ಎತ್ತಬೇಕೆಂಬ ಬೇಡಿಕೆ ಇದೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೂಳು ಎತ್ತುವು ಯಂತ್ರವನ್ನು ಖರೀದಿ ಮಾಡಲು ಯೋಜಿಸಲಾಗಿದೆ ಎಂದರು.

ಸಮುದ್ರದಲ್ಲಿ ಸಂಭವಿಸುವ ದುರಂತಗಳ ಹಿನ್ನೆಲೆಯಲ್ಲಿ ಬಹಳ ದಿನದಿಂದಲೂ ಈ ಭಾಗದ ಮೀನಿಗಾರರು ಸೀ-ಆಂಬುಲೆನ್ಸ್ ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಇಟ್ಟು ಮಲ್ಪೆ ಬಂದರಿಗೂ ಸಹ ಸೀ-ಆಂಬುಲೆನ್ಸ್ ಕಲ್ಪಿಸಲಾಗುವುದು ಎಂದವರು ಹೇಳಿದರು.

ಮೀನುಗಾರರಿಗೆ ಹಾಗೂ ಮೀನುಗಾರಿಕೆ ಮಹಿಳೆಯರಿಗೆ ಅನುಕೂಲವಾಗುವಂತೆ ಬಂದರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ದ.ಕ. ಜಿಲ್ಲಾ ಮೊಗವೀರ ಸಂಘದ ಅದ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಕಾಂಗ್ರೆಸ್ ನಾಯಕ ಪ್ರಸಾದ್ ರಾಜ್ ಕಾಂಚನ್ ಮುಂತಾದವರಿದ್ದರು.

ಕಾಂಗ್ರೆಸ್ ಸರ್ಕಾರ 250 ಕೋಟಿ ರು ನೀಡುತ್ತಿದೆ

ಉಡುಪಿ ಜಿಲ್ಲೆಯು ಮೀನುಗಾರರ ಸಂಕಷ್ಟ ನಿಧಿಯ 9 ಕೋಟಿ ರು ಕಳೆದ 4 ವರ್ಷ ಬಾಕಿ ಇತ್ತು. ಅದರಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ 8 ಕೋಟಿ ರು.ಗಳನ್ನು ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ಕುಟುಂಬದವರಿಗೆ ವಿತರಣೆ ಮಾಡಿದೆ ಎಂದು ಮೀನುಗಾರಿಕಾ ಸಚಿವರು ಹೇಳಿದರು. ಹಿಂದಿನ ಸರ್ಕಾರ ಕರ ರಹಿತ ಡಿಸೆಲ್ ಸಬ್ಸಿಡಿಗೆ 175 ಕೋಟಿ ರು. ನೀಡಿತ್ತು. ನಮ್ಮ ಸರಕಾರ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳನ್ನು ನೀಡುತ್ತಿದೆ ಎಂದರು.